ಮಹಾರಾಷ್ಟ್ರದ ಜಲಗಾಂವ್‌ನಲ್ಲಿ ರೈತರಿಗೆ ವಂಚಿಸಿದ ಆರೋಪದಲ್ಲಿ ಇಬ್ಬರು ವ್ಯಾಪಾರಿಗಳ ವಿರುದ್ಧದ ಕ್ರಿಮಿನಲ್ ಪ್ರಕ್ರಿಯೆ ರದ್ದುಗೊಳಿಸಲು ನಿರಾಕರಿಸಿರುವ ಬಾಂಬೆ ಹೈಕೋರ್ಟ್‌ನ ಔರಂಗಬಾದ್ ಪೀಠವು ದೇಶದ ರೈತರು ಎಲ್ಲಾ ತರಹದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೆ, ವ್ಯವಸ್ಥೆಯು ಅವರೆಡೆಗೆ ಯಾವುದೇ ಸಂವೇದನಾಶೀಲತೆ ತೋರುತ್ತಿಲ್ಲ ಎಂದು ಹೇಳಿದೆ.
ಆರೋಪಿಗಳಿಗೆ ಸೆಷನ್ಸ್ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ಮೇಲ್ಮನವಿ ಸಲ್ಲಿಸದಿರುವುದಕ್ಕೆ ನ್ಯಾಯಮೂರ್ತಿಗಳಾದ ಟಿ ವಿ ನಾಲವಾಡೆ ಮತ್ತು ಎಂ ಜಿ ಸೆವ್ಲಿಕರ್ ಅವರಿದ್ದ ವಿಭಾಗೀಯ ಪೀಠವು ಆಕ್ಷೇಪ ವ್ಯಕ್ತಪಡಿಸಿದೆ.
“ಇಂಥ ಘಟನೆಗಳು ದಿನ ಕಳೆದಂತೆ ಹೆಚ್ಚಾಗುತ್ತಲೇ ಇವೆ. ರೈತರು ಅನುಭವಿಸುತ್ತಿರುವ ಸಮಸ್ಯೆಗಳಿಗೆ ತೋರಬೇಕಾದ ಸಂವೇದನಾಶೀಲತೆಯನ್ನು ಯಾವುದೇ ವ್ಯವಸ್ಥೆಗಳು ತೋರುತ್ತಿಲ್ಲ ಎಂಬುದು ದುರದೃಷ್ಟಕರ. ರೈತರಿಗೆ ಯಾವುದೇ ಸಂಪನ್ಮೂಲವಿಲ್ಲ. ಅವರು ಮೊಕದ್ದಮೆ ಹೂಡಿ, ಅದನ್ನು ನಡೆಸುವಷ್ಟು ಸಶಕ್ತರಾಗಿಲ್ಲ” ಎಂದು ಹೇಳಿದೆ.
ಈ ಹಿನ್ನೆಲೆಯಲ್ಲಿ ರೈತರ ಉತ್ಪನ್ನಗಳನ್ನು ಮಾರಾಟಕ್ಕೆ ಕೊಂಡೊಯ್ದು ಅವರ ಪಾಲನ್ನು ಮರಳಿಸದೇ ವಂಚಿಸಿದ್ದಕ್ಕೆ ಸಂಬಂಧಿಸಿದಂತೆ ಮನವಿದಾರರಾದ ಖಂಡೇಲವಾಲ್ ಟ್ರಾನ್ಸ್‌ಪೋರ್ಟರ್‌ನ ಮಾಲೀಕರಾದ ಎಂ ಕೆ ಖಂಡೇಲವಾಲ್ ಮತ್ತು ಅವರ ತಂದೆ ಕೆ ಡಿ ಖಂಡೇಲವಾಲ್ ವಿರುದ್ಧದ ಕಾನೂನು ಪ್ರಕ್ರಿಯೆಯನ್ನು ವಜಾಗೊಳಿಸಲು ನ್ಯಾಯಾಲಯವು ನಿರಾಕರಿಸಿದೆ.
“ರೈತರ ಈ ಅಸಮರ್ಥತೆಯನ್ನು ಅರ್ಜಿದಾರರಾದ ವ್ಯಾಪಾರಸ್ಥರು ಬಳಸಿಕೊಂಡು, ರೈತರು ಶ್ರಮವಹಿಸಿ ಬೆಳೆದಿದ್ದನ್ನು ಆಧರಿಸಿ ಹಣ ಮಾಡುತ್ತಿದ್ದಾರೆ. ರೈತರು ಎಲ್ಲಾ ತರಹದ ಸಮಸ್ಯೆ ಎದುರಿಸುತ್ತಿರುವುದರಿಂದ ದಿನನಿತ್ಯ ರೈತರ ಆತ್ಮಹತ್ಯೆ ಹೆಚ್ಚಾಗುತ್ತಿದೆ. ಪ್ರಸಕ್ತ ವಂಚನೆಯ ಪ್ರಕರಣದಂತಹ ಹೆಚ್ಚುವರಿ ಸನ್ನಿವೇಶಗಳು ರೈತರನ್ನು ಮತ್ತಷ್ಟು ಆತ್ಮಹತ್ಯೆಗೆ ದೂಡುತ್ತವೆ. ಈ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಅರ್ಜಿದಾರರಿಗೆ ಯಾವುದೇ ಪರಿಹಾರ ನೀಡಲಾಗದು” ಎಂದು ಹೇಳಿದೆ.
ರೈತರು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಬೇಕಾದ ಸೂಕ್ಷ್ಮತೆಯನ್ನು ಯಾವುದೇ ವ್ಯವಸ್ಥೆ ತೋರುತ್ತಿಲ್ಲ ಎಂಬುದು ದುರದೃಷ್ಟಕರ.ನ್ಯಾಯಮೂರ್ತಿಗಳಾದ ಟಿ ವಿ ನಾಲವಾಡೆ ಮತ್ತು ಎಂ ಜಿ ಸೆವ್ಲಿಕರ್
ಕೃಷಿ ಉತ್ಪನ್ನ ಖರೀದಿಸುತ್ತಿದ್ದ ಮಧ್ಯವರ್ತಿ ಸನಿಯಾ ಕದ್ರಿ ಅವರನ್ನು ಖಂಡೇಲವಾಲ್ ಟ್ರಾನ್ಸ್‌ಪೋರ್ಟ್ ಸಂಪರ್ಕಿಸಿದ್ದು, ರೈತರಿಂದ ಸಂಗ್ರಹಿಸಿದ ಬಾಳೆಯನ್ನು ತಮಗೆ ನೀಡಿದರೆ ಹೆಚ್ಚಿನ ಬೆಲೆ ಮಾರಾಟ ಮಾಡಿಸಿ, ಉತ್ತಮ ಬೆಲೆ ಕೊಡಿಸುವುದಾಗಿ ಇದರಿಂದ ಲಾಭಗಳಿಸಬಹುದು ಎಂದು ಭರವಸೆ ನೀಡಿದ್ದಾರೆ. ಹೆಚ್ಚಿನ ಬೆಲೆಗೆ ಬಾಳೆ ಮಾರಾಟ ಮಾಡಿಸುವ ಭರವಸೆ ನೀಡಿದ್ದರಿಂದ ಕದ್ರಿ, ಖಂಡೇಲವಾಲ್ ಟ್ರಾನ್ಸ್‌ಪೋರ್ಟರ್ಸ್ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಕೆಲವೇ ದಿನಗಳಲ್ಲಿ ರೈತರ ಪಾಲನ್ನು ಪಾವತಿಸುವುದಾಗಿ ಭರವಸೆ ನೀಡಿದ್ದಾಗಿ ಕದ್ರಿ ನ್ಯಾಯಾಲಯಕ್ಕೆ ವಿವರಿಸಿದ್ದಾರೆ. ಟ್ರಾನ್ಸ್‌ಪೋರ್ಟರ್ ಹಣ ಪಾವತಿಸದೇ ಇದ್ದ ಹಿನ್ನೆಲೆಯಲ್ಲಿ ರೈತರಿಗೆ ಅವರ ಪಾಲವನ್ನು ಪಾವತಿಸಲಾಗಿಲ್ಲ ಎಂದು ವಿವರಿಸಿದ್ದಾರೆ.
ತಮ್ಮ ಪಾಲಿನ ಹಣ ಪಾವತಿಸುವಂತೆ ರೈತರು ಒತ್ತಡ ಹಾಕಿದ ಹಿನ್ನೆಲೆಯಲ್ಲಿ ಟ್ರಾನ್ಸ್‌ಪೋರ್ಟರ್ಸ್‌ಗೆ ಹಣ ಪಾವತಿಸುವಂತೆ ಕದ್ರಿ ಸೂಚಿಸಿದರು. ಪೂರ್ತಿ ಬಾಕಿಗೆ ಬದಲಾಗಿ ಶೇ. 50ರಷ್ಟು ಹಣವನ್ನು ಮಾತ್ರವೇ ತಾವು ಒಟ್ಟು ಉತ್ಪನ್ನಕ್ಕೆ ಪಾವತಿಸುವುದಾಗಿ ಖಂಡೇಲ್‌ವಾಲ್ ಅವರು ಹೇಳಿದ್ದಾರೆ.
ಇದರಿಂದ ತಾವು ಮೋಸ ಹೋಗಿರುವುದನ್ನು ಮನಗಂಡ ಕದ್ರಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 406 (ನಂಬಿಕೆ ದ್ರೋಹ), 420 (ವಂಚನೆ) ಮತ್ತು 120-B (ಕ್ರಿಮಿನಲ್ ಪಿತೂರಿ) ಅಡಿ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದರು.