ಕೃಷಿ ಕಾಯಿದೆಗಳನ್ನು ವಿರೋಧಿಸಿ ಪ್ರತಿಭಟಿಸುತ್ತಿರುವ ರೈತರ ಜೊತೆ ಸಂವಾದ ನಡೆಸಿ ತನಗೆ ವರದಿ ನೀಡಲು ಸುಪ್ರೀಂ ಕೋರ್ಟ್ ನೇಮಿಸಿದ್ದ ನಾಲ್ವರು ಸದಸ್ಯರುಗಳ ಸಮಿತಿಯಲ್ಲಿ ಒಬ್ಬರಾದ ಭೂಪಿಂದರ್ ಸಿಂಗ್ ಮಾನ್ ಅವರು ಸಮಿತಿಯಿಂದ ಹಿಂದೆ ಸರಿದಿದ್ದಾರೆ. ಮಾನ್ ಅವರು ಭಾರತೀಯ ಕಿಸಾನ್ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ.
“ಕೃಷಿ ಒಕ್ಕೂಟಗಳು ಮತ್ತು ಸಾಮಾನ್ಯ ಜನರಲ್ಲಿ ಚಾಲ್ತಿಯಲ್ಲಿರುವ ಭಾವನೆಗಳು ಮತ್ತು ಆತಂಕಗಳ” ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯ ನೇಮಿಸಿರುವ ಸಮಿತಿಯಿಂದ ಹಿಂದೆ ಸರಿಯುತ್ತಿರುವುದಾಗಿ ಮಾನ್ ಹೇಳಿದ್ದಾರೆ.
“ನನಗೆ ಯಾವುದೇ ಹುದ್ದೆ ಅಥವಾ ಸ್ಥಾನ ನೀಡಿದರೂ ಪಂಜಾಬ್ ಮತ್ತು ದೇಶದ ರೈತರ ಹಿತಾಸಕ್ತಿಯ ಜೊತೆ ರಾಜಿ ಮಾಡಿಕೊಳ್ಳುವುದಿಲ್ಲ. ಬದಲಿಗೆ ಆ ಸ್ಥಾನವನ್ನು ತ್ಯಾಗ ಮಾಡಲು ಸಿದ್ಧನಿದ್ದೇನೆ,” ಎಂದು ಮಾಧ್ಯಮ ಹೇಳಿಕೆಯಲ್ಲಿ ಮಾನ್ ತಿಳಿಸಿದ್ದಾರೆ. ಮುಂದುವರೆದು, ತಾವು ಸಮಿತಿಯಿಂದ ಹಿಂದೆ ಸರಿಯುತ್ತಿದ್ದು, "ನನ್ನ ರೈತರು ಮತ್ತು ಪಂಜಾಬ್ ಪರವಾಗಿ ನಿಲ್ಲುತ್ತೇನೆ," ಎಂದು ಮಾನ್ ಹೇಳಿದ್ದಾರೆ.
ಕೃಷಿ ಆರ್ಥಿಕ ತಜ್ಞರಾದ ಡಾ. ಪ್ರಮೋದ್ ಕುಮಾರ್ ಜೋಶಿ, ಅಶೋಕ್ ಗುಲಾಟಿ ಮತ್ತು ಶೇಟ್ಕಾರಿ ಸಂಘಟನೆಯ ಅಧ್ಯಕ್ಷ ಅನಿಲ್ ಘಾನ್ವತ್ ಅವರನ್ನೊಳಗೊಂಡ ಸಮಿತಿಯನ್ನು ಸುಪ್ರೀಂ ಕೋರ್ಟ್ ಜನವರಿ 12ರಂದು ನೇಮಿಸಿತ್ತು. ಸಂಬಂಧಿತ ಎಲ್ಲರ ಜೊತೆ ಮಾತುಕತೆ ನಡೆಸಿ ವರದಿ ಸಲ್ಲಿಸುವಂತೆ ಸಮಿತಿ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರಿದ್ದ ತ್ರಿಸದಸ್ಯ ಪೀಠವು ಆದೇಶ ಹೊರಡಿಸಿತ್ತು.
ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾಯಿದೆಗಳಿಗೆ ಸುಪ್ರೀಂ ಕೋರ್ಟ್ ನೇಮಿಸಿರುವ ಸಮಿತಿಯ ಸದಸ್ಯರೆಲ್ಲರೂ ಬೆಂಬಲ ವ್ಯಕ್ತಪಡಿಸಿದ್ದರಿಂದ ಸಾರ್ವಜನಿಕ ವಲಯದಲ್ಲಿ ಸರ್ವೋಚ್ಚ ನ್ಯಾಯಾಲಯದ ನಿರ್ಧಾರಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.