

ಕೇಂದ್ರ ಸರ್ಕಾರದ ಮೂರು ವಿವಾದಿತ ಕೃಷಿ ಕಾಯಿದೆಗಳ ಜಾರಿಗೆ ಸುಪ್ರೀಂ ಕೋರ್ಟ್ ಮಂಗಳವಾರ ಮಧ್ಯಂತರ ತಡೆ ವಿಧಿಸಿ ಆದೇಶ ಹೊರಡಿಸಿದೆ. ಕಳೆದ ನವೆಂಬರ್‌ನಿಂದ ದೆಹಲಿಯ ಗಡಿಯಲ್ಲಿ ದೇಶದ ವಿವಿಧ ಭಾಗಗಳ ರೈತರು ವಿಶೇಷವಾಗಿ ಉತ್ತರ ಭಾರತದ ಪಂಜಾಬ್ ಮತ್ತು ಹರಿಯಾಣದ ರೈತರು ವ್ಯಾಪಕ ಪ್ರತಿಭಟನೆ ಕೈಗೊಂಡಿದ್ದಾರೆ.
ಬೆಲೆ ಭರವಸೆ ಮತ್ತು ಕೃಷಿ ಸೇವೆಗೆ ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಕಾಯಿದೆ-2020, ಕೃಷಿಕರ ಉತ್ಪನ್ನಗಳ ವ್ಯಾಪಾರ ಮತ್ತು ವಹಿವಾಟು (ನೆರವು ಮತ್ತು ಸರಾಗಗೊಳಿಸುವುದು) ಕಾಯಿದೆ ಮತ್ತು ಅಗತ್ಯ ಉತ್ಪನ್ನಗಳ ತಿದ್ದುಪಡಿ ಕಾಯಿದೆಗಳನ್ನು ಮುಂದಿನ ಆದೇಶದವರೆಗೆ ತಡೆ ಹಿಡಿಯಲಾಗಿದೆ.
ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರಿದ್ದ ತ್ರಿಸದಸ್ಯ ಪೀಠವು ಸಂಬಂಧಪಟ್ಟ ಎಲ್ಲಾ ಪಕ್ಷಕಾರರು ಮತ್ತು ಸಂಬಂಧಪಟ್ಟವರನ್ನು ಆಲಿಸಿ ವರದಿ ಸಲ್ಲಿಸುವಂತೆ ತಾನು ರಚಿಸಿರುವ ನಾಲ್ವರು ಸದಸ್ಯರ ಸಮಿತಿಗೆ ಸೂಚಿಸಿದೆ.
ಭಾರತೀಯ ಕಿಸಾನ್ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಭೂಪಿಂದರ್ ಸಿಂಗ್ ಮಾನ್, ಕೃಷಿ ಆರ್ಥಿಕ ತಜ್ಞರಾದ ಡಾ. ಪ್ರಮೋದ್ ಕುಮಾರ್ ಜೋಷಿ , ಅಶೋಕ್ ಗುಲಾಟಿ ಮತ್ತು ಮಹಾರಾಷ್ಟ್ರದ ಶಿವಕೇರಿ ಸಂಘಟನೆಯ ಅಧ್ಯಕ್ಷ ಅನಿಲ್ ಧನವಂತ್ ಅವರು ಸುಪ್ರೀಂ ಕೋರ್ಟ್ ರಚಿಸಿರುವ ಸಮಿತಿಯಲ್ಲಿ ಸ್ಥಾನ ಪಡೆದಿದ್ದಾರೆ.