ಸುದ್ದಿಗಳು

[ರೈತರ ಪ್ರತಿಭಟನೆ] ಪರಿಸರ ಕಾರ್ಯಕರ್ತೆ ದಿಶಾ ಅವರನ್ನು 5 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದ ಪಟಿಯಾಲಾ ಹೌಸ್ ನ್ಯಾಯಾಲಯ

Bar & Bench

ಬೆಂಗಳೂರಿನಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದ 21 ವರ್ಷದ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರನ್ನು ಪಟಿಯಾಲ ಹೌಸ್ ನ್ಯಾಯಾಲಯ 5 ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿದೆ ಎಂದು ʼಇಂಡಿಯಾ ಟುಡೆʼ ವರದಿ ಮಾಡಿದೆ.

ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಗೂಗಲ್‌ ದಾಖಲೆಯನ್ನು ಸಂಕಲಿಸಿ ಅದನ್ನು ಟೂಲ್‌ಕಿಟ್‌ ರೂಪದಲ್ಲಿ ಹಂಚಿಕೊಂಡಿದ್ದಾರೆ ಎಂದು ಆರೋಪಿಸಿ ದಿಶಾ ಅವರನ್ನು ದೆಹಲಿ ಪೊಲೀಸರು ಶನಿವಾರ ರಾತ್ರಿ ಬೆಂಗಳೂರಿನಲ್ಲಿ ಬಂಧಿಸಿದ್ದರು.

ಸ್ವೀಡಿಷ್ ಪರಿಸರ ಹೋರಾಟಗಾರ್ತಿ, ಗ್ರೆಥಾ ಥನ್‌ಬರ್ಗ್‌ ರೈತ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸುತ್ತಾ ಟೂಲ್‌ಕಿಟ್‌ ಟ್ವೀಟ್ ಮಾಡಿದ ನಂತರ ದೆಹಲಿ ಪೊಲೀಸರು ದಾಖಲಿಸಿದ ಪ್ರಕರಣಕ್ಕೆ ಟೂಲ್‌ಕಿಟ್‌ ಆಧಾರವಾಗಿದೆ.

"ಟೂಲ್‌ಕಿಟ್‌ ಅನ್ನು ಖಲಿಸ್ತಾನಿ ಗುಂಪಾದ ಪೊಯೆಟಿಕ್ ಜಸ್ಟೀಸ್ ಪ್ರತಿಷ್ಠಾನ ತಯಾರಿಸಿದ್ದು ಇದನ್ನು ದಿಶಾ ಸಂಕಲಿಸಿದ್ದಾರೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ದಿಶಾ ಅವರೇ ಥನ್‌ಬರ್ಗ್‌ ಜೊತೆ ಟೂಲ್‌ಕಿಟ್‌ ಹಂಚಿಕೊಂಡಿದ್ದಾರೆ ಎಂಬುದು ಪೊಲೀಸರ ಆರೋಪ. ಭಾರತಕ್ಕೆ ಅಪಖ್ಯಾತಿ ತರುವ ವ್ಯಾಪಕ ಪಿತೂರಿಯ ಭಾಗ ಇದಾಗಿತ್ತು ಎಂದು ಹೇಳಲಾಗಿದೆ. ಟೂಲ್‌ಕಿಟ್‌ಗೆ ಸಂಬಂಧಿಸಿದಂತೆ ಅನಾಮಧೇಯ ವ್ಯಕ್ತಿಗಳ ವಿರುದ್ಧ ದೆಹಲಿ ಪೊಲೀಸರು ಫೆ. 4 ರಂದು ಎಫ್ಐಆರ್ ದಾಖಲಿಸಿದ್ದರು.

ದೆಹಲಿ ಪೊಲೀಸರು ತಮ್ಮ ಟ್ವೀಟ್‌ಗಳಲ್ಲಿ ಹೀಗೆ ಹೇಳಿದ್ದಾರೆ: " ದೆಹಲಿ ಪೊಲೀಸ್‌ ಸೈಪಾಡ್‌ ವಿಭಾಗದಿಂದ ಬಂಧಿತರಾದ ದಿಶಾ ರವಿ, ಗೂಗಲ್ ಡಾಕ್ಯುಮೆಂಟ್‌ನ ಟೂಲ್‌ಕಿಟ್‌ ಸಂಪಾದಕರಾಗಿದ್ದು ದಾಖಲೆ ರೂಪಿಸುವಲ್ಲಿ ಮತ್ತು ಅದನ್ನು ಪ್ರಸಾರ ಮಾಡುವಲ್ಲಿ ಪ್ರಮುಖ ಸಂಚುಕೋರರಾಗಿದ್ದಾರೆ. ಅವರು ವಾಟ್ಸಾಪ್ ಗ್ರೂಪ್‌ಗೆ ಚಾಲನೆ ನೀಡಿದ್ದು ಟೂಲ್‌ಕಿಟ್‌ ದಾಖಲೆ ತಯಾರಿಸಲು ಸಹಕರಿಸಿದ್ದಾರೆ. ದಾಖಲೆಯ ಕರಡು ಸಿದ್ಧಪಡಿಸಲು, ದೇಶದ ವಿರುದ್ಧ ಅಶಾಂತಿ ಹರಡುತ್ತಿರುವ ಖಲಿಸ್ತಾನಿ ಪರ ಸಂಘಟನೆ ಪೊಯೆಟಿಕ್‌ ಜಸ್ಟೀಸ್‌ ಪ್ರತಿಷ್ಠಾನದೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದಾರೆ. ಗ್ರೆಥಾ ಥನ್‌ಬರ್ಗ್ ಅವರೊಂದಿಗೆ ಟೂಲ್‌ಕಿಟ್ ಡಾಕ್ ಹಂಚಿಕೊಂಡವರು ಆಕೆಯೇ. ಪಬ್ಲಿಕ್‌ ಡೊಮೇನ್‌ನಲ್ಲಿ ಆಕಸ್ಮಿಕವಾಗಿ ಟೂಲ್‌ಕಿಟ್‌ ಕಾಣಿಸಿಕೊಂಡ ನಂತರ ಅದನ್ನು ತೆಗೆದುಹಾಕುವಂತೆ ಗ್ರೆಥಾ ಅವರಲ್ಲಿ ಮನವಿ ಮಾಡಿದ್ದಾರೆ. ಆಕೆ ಹೇಳಿಕೊಳ್ಳುವ ಎರಡು ಸಾಲಿನ ಸಂಕಲನಕ್ಕಿಂತ ಇದು ಹಲವು ಪಟ್ಟು ಹೆಚ್ಚಿದೆ”.

ಬೆಂಗಳುರಿನ ಮೌಂಟ್ ಕಾರ್ಮೆಲ್ ಕಾಲೇಜಿನ ಪದವೀಧರೆಯಾದ ದಿಶಾ, ‘ಫ್ರೈಡೇಸ್ ಫಾರ್ ಫ್ಯೂಚರ್’ ಅಭಿಯಾನದ ಸಹ ಸಂಸ್ಥಾಪಕರು.