[ರೈತರ ಧರಣಿ] ಒಂದು ಹ್ಯಾಷ್‌ಟ್ಯಾಗ್‌, 257 ಯುಆರ್‌ಎಲ್‌ ನಿರ್ಬಂಧಕ್ಕೆ ಟ್ವಿಟರ್‌ ನಕಾರ; ಕೇಂದ್ರದ ಕೆಂಗಣ್ಣು

ಆದೇಶ ಪಾಲಿಸದಿದ್ದರೆ ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 69ಎ[3] ರ ಅಡಿ ದಂಡಾರ್ಹ ಪರಿಣಾಮ ಎದುರಿಸಬೇಕಾದೀತು ಎಂದು ನೋಟಿಸ್‌ ನೀಡಿದ ಕೇಂದ್ರ. ಐಟಿ ಕಾಯಿದೆಯ ಪ್ರಕಾರ 7 ವರ್ಷಗಳ ಜೈಲು ಶಿಕ್ಷೆ ಜೊತೆಗೆ ದಂಡವನ್ನೂ ಪಾವತಿಸಬೇಕಾಗುತ್ತದೆ.
Twitter, Central government
Twitter, Central government

ಪ್ರಸಕ್ತ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ 'ಮೋದಿ ಪ್ಲ್ಯಾನಿಂಗ್ ‌ಫಾರ್ಮರ್ ‌ಜಿನೋಸೈಡ್'‌ ('ModiPlanningFarmerGenocide' - ರೈತರ ಹತ್ಯಾಕಾಂಡಕ್ಕೆ ಮೋದಿ ತಂತ್ರ) ಹ್ಯಾಷ್‌ಟ್ಯಾಗ್‌ ಮತ್ತು 257 ಯುಆರ್‌ಎಲ್‌ ನಿರ್ಬಂಧಿಸುವ ಸಂಬಂಧ ಟ್ವಿಟರ್‌ ಇಂಕ್‌ಗೆ ಮೂರು ದಿನದ ಅವಧಿಯಲ್ಲಿ ಸತತ ಎರಡನೇ ಬಾರಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ಇದೇ ವೇಳೆ, ಒಂದೊಮ್ಮೆ ಕೇಂದ್ರ ಸರ್ಕಾರದ ಆದೇಶಗಳನ್ನು ಪಾಲಿಸದಿದ್ದರೆ ಮಾಹಿತಿ ತಂತ್ರಜ್ಞಾನ ಕಾಯಿದೆಯ ಅಡಿ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದೂ ಎಚ್ಚರಿಕೆ ನೀಡಲಾಗಿದೆ.

ಹ್ಯಾಷ್‌ಟ್ಯಾಗ್‌ ಮತ್ತು ಯುಆರ್‌ಎಲ್‌ಗಳು ಜನರಿಗೆ ತಪ್ಪು ಮಾಹಿತಿ ರವಾನಿಸುತ್ತಿದ್ದು, ದೇಶದಲ್ಲಿನ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಮಾಡಿ ಗಲಭೆಗೆ ಅವಕಾಶ ಮಾಡಿಕೊಡಬಹುದು ಎಂದು ಕೇಂದ್ರ ಸರ್ಕಾರವು ಟ್ವಿಟರ್‌ಗೆ ನೀಡಿರುವ ನೋಟಿಸ್‌ನಲ್ಲಿ ಹೇಳಿದೆ.

“ಹ್ಯಾಷ್‌ಟ್ಯಾಗ್‌ ದೇಶದ ಶಾಂತಿ, ಸುವ್ಯವಸ್ಥೆ ಮತ್ತು ಭದ್ರತೆಗೆ ಸಂಬಂಧಿಸಿದಂತೆ ಧಕ್ಕೆ ಮಾಡುವ ನಿಟ್ಟಿನಲ್ಲಿ ಜನರು ಅಪರಾಧಕ್ಕೆ ಕೈಹಾಕುವಂತೆ ಪ್ರಚೋದಿಸುವ ರೀತಿಯಲಿದೆ. ಮಾಧ್ಯಮ ಸ್ವಾತಂತ್ರ್ಯದ ಹೆಸರಿನಲ್ಲಿ ಸಾರ್ವಜನಿಕ ಶಾಂತಿಗೆ ಭಂಗ ಉಂಟು ಮಾಡಿ ಗಲಭೆಗೆ ಪ್ರಚೋದನೆ ನೀಡಲು ಅವಕಾಶ ಮಾಡಿಕೊಡಲಾಗದು” ಎಂದು ಟ್ವಿಟರ್‌ಗೆ ಫೆಬ್ರವರಿ 2ರಂದು ರವಾನಿಸಲಾದ ಸಂವಹನದಲ್ಲಿ ಕೇಂದ್ರದ ವಿದ್ಯುನ್ಮಾನ‌ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ (ಎಂಇಐಟಿವೈ) ತಿಳಿಸಿದೆ.

ಕೇಂದ್ರ ಸರ್ಕಾರದ ಆದೇಶಗಳನ್ನು ಪಾಲಿಸದಿದ್ದರೆ ಮಾಹಿತಿ ತಂತ್ರಜ್ಞಾನ ಕಾಯಿದೆ 69ಎ[3] ಅಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಿರ್ದೇಶನ ಪಾಲಿಸಲು ವಿಫಲವಾದರೆ ಏಳು ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಕಾಯಿದೆಯ ಸೆಕ್ಷನ್‌ 69(1) ರಲ್ಲಿ ಅವಕಾಶವಿದೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ಜನವರಿ 31ರಂದು ಹ್ಯಾಷ್‌ಟ್ಯಾಗ್‌ ಮತ್ತು ಯುಆರ್‌ಎಲ್‌ಗಳನ್ನು ಹಿಂಪಡೆಯುವಂತೆ ಟ್ವಿಟರ್‌ಗೆ ಕೇಂದ್ರ ಸರ್ಕಾರವು ಮಧ್ಯಂತರ ಆದೇಶ ಹೊರಡಿಸಿತ್ತು.

ಫೆಬ್ರವರಿ 1ರಂದು ನಡೆದ ಸಮಿತಿಯ ಸಭೆವರೆಗೂ ಆದೇಶ ಪಾಲನೆಯಾಗಿರಲಿಲ್ಲ. ಎಂಇಐಟಿವೈಗೆ ಫೆಬ್ರವರಿ 1ರಂದು ಪತ್ರ ಬರೆದಿರುವ ಟ್ವಿಟರ್‌, ಸರ್ಕಾರದ ಆದೇಶ ಪಾಲಿಸಲು ನಿರಾಕರಿಸಿದೆ. ಇದೇ ಅಭಿಪ್ರಾಯಗಳನ್ನು ಸಮಿತಿಯ ಸಭೆಯಲ್ಲಿಯೂ ವ್ಯಕ್ತಪಡಿಸಿರುವುದಾಗಿ ತಿಳಿಸಿದೆ.

ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್‌ 2(1)(ಡಬ್ಲು) ಟ್ವಿಟರ್‌ ಮಧ್ಯಸ್ಥಿಕೆ ಸಂವಹನ ಮಾಧ್ಯಮವಾಗಿದ್ದು, ಕೇಂದ್ರ ಸರ್ಕಾರ ನೇಮಿಸಿರುವ ಅಧಿಕಾರಿ ನೀಡಿದ ಆದೇಶಕ್ಕೆ ಅನುಗುಣವಾಗಿ ನಡೆಯಬೇಕು. ಇಲ್ಲವಾದಲ್ಲಿ ಶಾಸನಬದ್ಧ ಪ್ರಕ್ರಿಯೆ ಎದುರಿಸಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರವು ಟ್ವಿಟರ್‌ಗೆ ಜಾರಿಗೊಳಿಸಿರುವ ನೋಟಿಸ್‌ನಲ್ಲಿ ಎಚ್ಚರಿಸಿದೆ. ಈ ಸಂಬಂಧ ಕೇಂದ್ರ ಸರ್ಕಾರವು ಐಟಿ ಕಾಯಿದೆಯ ಸೆಕ್ಷನ್‌ 69ಎ ಉಲ್ಲೇಖಿಸಿದ್ದು, ಸಾರ್ವಜನಿಕ ಸಾಮರಸ್ಯಕ್ಕೆ ಧಕ್ಕೆ ಮಾಡಬಹುದಾದ ಅಪರಾಧ ಎಸಗುವುದಕ್ಕೆ ಪ್ರಚೋದನೆ ನೀಡುವ ಮಾಹಿತಿ ಪಡೆಯಲು ಅವಕಾಶ ನೀಡದಂತೆ ಮಧ್ಯಸ್ಥಿಕೆ ಸಂವಹನ ಮಾಧ್ಯಮಕ್ಕೆ ಕೇಂದ್ರ ಸರ್ಕಾರ ನಿರ್ದೇಶನ ನೀಡಬಹುದಾಗಿದೆ.

Also Read
“ವಾಕ್‌ ಸ್ವಾತಂತ್ರ್ಯದ ಹಕ್ಕು ಪರಿಪೂರ್ಣವಲ್ಲ:” ತಾಂಡವ್‌ ತಯಾರಕರ ಬಂಧಿಸದಂತೆ ಮಧ್ಯಂತರ ತಡೆ ನೀಡಲು ಸುಪ್ರೀಂ ನಕಾರ

ವಾಕ್‌ ಸ್ವಾತಂತ್ರ್ಯದ ಕುರಿತ ವಿಚಾರಗಳ ಬಗ್ಗೆ ಟ್ವಿಟರ್‌ ಪ್ರತಿಕ್ರಿಯೆಗೂ ಕೇಂದ್ರ ಸರ್ಕಾರವು ಆಕ್ಷೇಪ ವ್ಯಕ್ತಪಡಿಸಿದೆ. ಟ್ವಿಟರ್‌ “ಅತ್ಯಂತ ಗಂಭೀರ ವಿಚಾರವಾದ ವಾಕ್‌ ಸ್ವಾತಂತ್ರ್ಯ ಮತ್ತು ಜನವರಿ 31ರ ಮಧ್ಯಂತರ ಆದೇಶದ ಸಾಂವಿಧಾನಿಕ ಅಪೇಕ್ಷಣೀಯತೆ ಬಗ್ಗೆ ಪ್ರತಿಕ್ರಿಯಿಸುತ್ತಿರುವುದು ಆಶ್ಚರ್ಯ ಉಂಟು ಮಾಡಿದೆ” ಎಂದು ಕೇಂದ್ರ ಸರ್ಕಾರ ಹೇಳಿದೆ.

ನಿರ್ದಿಷ್ಟ ಹ್ಯಾಷ್‌ಟ್ಯಾಗ್‌ ಮತ್ತು ಯುಆರ್‌ಎಲ್‌ಗಳನ್ನು ಹಿಂಪಡೆಯುವಂತೆ ಟ್ವಿಟರ್‌ಗೆ ಸೂಚಿಸುವುದಕ್ಕೂ ಮುನ್ನ ಸಾರ್ವಜನಿಕ ಆದೇಶ, ಮಾಧ್ಯಮ ಸ್ವಾತಂತ್ರ್ಯ, ವೈಯಕ್ತಿಕ ಹಕ್ಕು, ಗುರಿ ಸಾಧನೆ ಮತ್ತು ಉದ್ದೇಶಗಳ ನಡುವಿನ ಅನುಪಾತೀಯ ತತ್ವದ ಕುರಿತ ಕನಿಷ್ಠ ಹತ್ತು ಸುಪ್ರೀಂ ಕೋರ್ಟ್‌ ತೀರ್ಪುಗಳನ್ನು ನೋಟಿಸ್‌ನಲ್ಲಿ ಕೇಂದ್ರ ಸರ್ಕಾರ ಉಲ್ಲೇಖಿಸಿದೆ.

Related Stories

No stories found.
Kannada Bar & Bench
kannada.barandbench.com