Disha Ravi, Delhi Police
Disha Ravi, Delhi Police 
ಸುದ್ದಿಗಳು

ಟೂಲ್‌ಕಿಟ್‌ ಎಫ್‌ಐಆರ್‌ ಪ್ರಕರಣ: ಒಂದು ದಿನದ ಮಟ್ಟಿಗೆ ದಿಶಾ ಪೊಲೀಸ್‌ ವಶಕ್ಕೆ

Bar & Bench

ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಟೂಲ್‌ಕಿಟ್‌ ಎಫ್‌ಐಆರ್‌ ಪ್ರಕರಣದಲ್ಲಿ ಆರೋಪಿಯಾಗಿರುವ ಬೆಂಗಳೂರಿನ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರನ್ನು ಸೋಮವಾರ ದೆಹಲಿಯ ಪಟಿಯಾಲ ಹೌಸ್‌ ನ್ಯಾಯಾಲಯವು ಒಂದು ದಿನದ ಮಟ್ಟಿಗೆ ಪೊಲೀಸ್‌ ವಶಕ್ಕೆ ನೀಡಿದೆ.

ದಿಶಾ ರವಿ ನ್ಯಾಯಾಂಗ ಬಂಧನ ಇಂದು ಅಂತ್ಯಗೊಂಡ ಹಿನ್ನೆಲೆಯಲ್ಲಿ ಅವರನ್ನು ದೆಹಲಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಡಾ. ಪಂಕಜ್‌ ಶರ್ಮಾ ಆದೇಶ ಹೊರಡಿಸಿದ್ದಾರೆ.

ದಿಶಾ ಅವರನ್ನು ಐದು ದಿನಗಳ ಕಾಲ ಪೊಲೀಸ್‌ ವಶಕ್ಕೆ ನೀಡುವಂತೆ ಕೋರಿದ ಸರ್ಕಾರಿ ಅಭಿಯೋಜಕರು ವಿಚಾರಣೆಯ ಸಂದರ್ಭದಲ್ಲಿ ದಿಶಾ ಅವರು ಇತರೆ ಆರೋಪಿಗಳಿಗೆ ತಮ್ಮ ಮೇಲಿನ ಆಪಾದನೆಯನ್ನು ವರ್ಗಾಯಿಸಿದ್ದಾರೆ ಎಂದರು.

ಪ್ರಕರಣದ ಇತರ ಪ್ರಮುಖ ಆರೋಪಿಗಳಾದ ನಿಕಿತಾ ಮತ್ತು ಶಂತನು ಅವರಿಗೆ ರಕ್ಷಣೆ ದೊರೆತಿದ್ದು ಬಂಧಿಸಲು ಸಾಧ್ಯವಾಗಿಲ್ಲ. ವಿಚಾರಣೆಗಾಗಿ ಅವರನ್ನು ದಿಶಾ ಅವರೊಂದಿಗೆ ಮುಖಾಮುಖಿಯಾಗಿಸಬೇಕಿದೆ ಎಂದು ದಿಶಾ ಅವರ ಜಾಮೀನಿಗೆ ವಿರೋಧ ವ್ಯಕ್ತಪಡಿಸಿರುವ ಸರ್ಕಾರಿ ಅಭಿಯೋಜಕರು ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದ ಜೂಮ್‌ ಮೀಟಿಂಗ್‌ನಲ್ಲಿ 60-70ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಸೈಬರ್ ತನಿಖೆ ನಡೆದಿದೆ. ತಜ್ಞರ ನೆರವು ಬೇಕಿದೆ. ದಿಶಾರನ್ನು ಎಲ್ಲ ಸಾಕ್ಷ್ಯಗಳೊಂದಿಗೆ ಮುಖಾಮುಖಿಯಾಗಿಸಬೇಕಿದೆ ಎಂದು ಅವರು ವಾದಿಸಿದರು.

ಫೆಬ್ರವರಿ 13ರಂದು ದಿಶಾ ಅವರನ್ನು ಬಂಧಿಸಲಾಗಿದೆ. ಫೆಬ್ರುವರಿ 14ರಂದು ಅವರನ್ನು ಐದು ದಿನಗಳ ಕಾಲ ಪೊಲೀಸ್‌ ವಶಕ್ಕೆ ನೀಡಲಾಗಿತ್ತು. ಅದಾಗ್ಯೂ, ಇದೇ ಮೊದಲ ಬಾರಿಗೆ ಪೊಲೀಸ್‌ ವಶಕ್ಕೆ ಕೋರುವ ರೀತಿಯಲ್ಲಿ ವಾದಿಸುತ್ತಿದ್ದಾರೆ ಎಂದು ದಿಶಾ ಪರ ವಕೀಲ ಸಿದ್ಧಾರ್ಥ್‌ ಅಗರ್ವಾಲ್‌ ಹೇಳಿದರು.

ತನಿಖೆಯನ್ನು ನಡೆಸಲು ಸಾಧ್ಯವೇ ಇಲ್ಲ ಎಂದ ಪಕ್ಷದಲ್ಲಿ ಪೊಲೀಸ್‌ ವಶಕ್ಕೆ ಕೋರುವ ಅಗತ್ಯ ಬೀಳುತ್ತದೆ. ಜಾಮೀನು ಅರ್ಜಿ ಕುರಿತಾದ ಆದೇಶ ಬಾಕಿ ಇರುವಾಗ ಪೊಲೀಸ್‌ ವಶಕ್ಕೆ ನೀಡಲು ಸಾಧ್ಯವಾಗದು. ಜಾಮೀನು ನೀಡಿದರೆ ಆಗ ಪೊಲೀಸ್‌ ವಶಕ್ಕೆ ನೀಡಿದ ಆದೇಶವನ್ನು ಬದಲಾಯಿಸಲಾಗುತ್ತದೆಯೇ ಎಂದು ಸಿದ್ಧಾರ್ಥ ಅಗರ್ವಾಲ್ ಪ್ರಶ್ನಿಸಿದರು.

ಇದೇನು ಸಣ್ಣ ಪ್ರಕರಣವಲ್ಲ. ಇದು ದೇಶಗಳ ವ್ಯಾಪ್ತಿಯನ್ನು ಮೀರಿರುವಂಥದ್ದು. ಸಂಕೀರ್ಣ ಪ್ರಕರಣ. ನಮ್ಮ ಪ್ರಯತ್ನವು ಪ್ರಕರಣದ ತನಿಖೆಯನ್ನು ಬೇಗನೇ ಮುಗಿಸುವುದಾಗಿದೆ ಎಂದು ದಿಶಾ ಪೊಲೀಸ್‌ ಕಸ್ಟಡಿಗೆ ಕೋರಿ ಪ್ರತಿಪಾದಿಸಿರುವ ದೆಹಲಿ ಪೊಲೀಸ್ ಹೇಳಿದ್ದಾರೆ. ಇದೆಲ್ಲದರ ಮಧ್ಯೆ, ದಿಶಾ ಅವರ ಜಾಮೀನು ಮನವಿಯ ತೀರ್ಪನ್ನು ದೆಹಲಿ ನ್ಯಾಯಾಲಯವು ಮಂಗಳವಾರ ಪ್ರಕಟಿಸಲಿದೆ.