Gujarat High Court


 
ಸುದ್ದಿಗಳು

ತಾಂತ್ರಿಕ ದೋಷ: ಭೌತಿಕವಾಗಿ ಆದಾಯ ತೆರಿಗೆ ವಿವರ ಸಲ್ಲಿಸಲು ಅವಕಾಶ ನೀಡುವಂತೆ ಕೇಂದ್ರಕ್ಕೆ ಸೂಚಿಸಿದ ಗುಜರಾತ್ ಹೈಕೋರ್ಟ್

ತಾಂತ್ರಿಕ ಸಮಸ್ಯೆ ಎದುರಾಗಿರುವುದರಿಂದ ತೆರಿಗೆ ಮೌಲ್ಯಮಾಪನ ಮಾಡುವವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕಾರ್ಯಸಾಧುವಾಗುವಂತಹ ನಿಲುವು ತೆಗೆದುಕೊಳ್ಳುವಂತೆ ಕೇಂದ್ರ ನೇರ ತೆರಿಗೆಗಳ ಮಂಡಳಿಗೆ ನ್ಯಾಯಾಲಯ ಕಿವಿಮಾತು ಹೇಳಿದೆ.

Bar & Bench

ಆದಾಯ ತೆರಿಗೆ ಪೋರ್ಟಲ್‌ನಲ್ಲಿ ತಾಂತ್ರಿಕ ದೋಷ ಕಂಡು ಬಂದಿರುವ ಹಿನ್ನೆಲೆಯಲ್ಲಿ ಭೌತಿಕವಾಗಿ ತೆರಿಗೆ ಪಾವತಿಗೆ ಅವಕಾಶ ನೀಡುವುದನ್ನು ಪರಿಗಣಿಸುವಂತೆ ಗುಜರಾತ್ ಹೈಕೋರ್ಟ್ ಇತ್ತೀಚೆಗೆ ಕೇಂದ್ರ ಸರ್ಕಾರವನ್ನು ಕೇಳಿದೆ. ಪ್ರಕರಣವನ್ನು ನ್ಯಾಯಾಲಯ ನಾಳೆ ಆಲಿಸಲಿದೆ.

ತಾಂತ್ರಿಕವಾಗಿ ಸಮಸ್ಯೆ ಎದುರಾಗಿರುವುದರಿಂದ ತೆರಿಗೆ ಮೌಲ್ಯಮಾಪನ ಮಾಡುವವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕಾರ್ಯಸಾಧುವಾಗುವಂತಹ ನಿಲುವು ತೆಗೆದುಕೊಳ್ಳುವಂತೆ ಕೇಂದ್ರ ನೇರ ತೆರಿಗೆಗಳ ಮಂಡಳಿಗೆ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ನಿಶಾ ಎಂ ಠಾಕೋರ್ ಅವರಿದ್ದ ಪೀಠ ಒತ್ತಾಯಿಸಿದೆ.

ಪೋರ್ಟಲ್‌ ಸೂಕ್ತವಾಗಿ ಕಾರ್ಯ ನಿರ್ವಹಿಸದೇ ಇರುವುದರಿಂದ ಅದು ಸೂಕ್ತ ರೀತಿಯಲ್ಲಿ ಕೆಲಸ ಮಾಡುವವರೆಗೆ 2021-22ರ ಸಾಲಿನತೆರಿಗೆ ಲೆಕ್ಕಪರಿಶೋಧನಾ ವರದಿ (ಟಿಎಆರ್) ಮತ್ತು ಆದಾಯ ತೆರಿಗೆ ಪಾವತಿ (ಐಟಿಆರ್) ಮಾಡಲು ಇರುವ ಗಡುವು ವಿಸ್ತರಿಸುವಂತೆ ಕೋರಿ ಲೆಕ್ಕ ಪರಿಶೋಧಕರೊಬ್ಬರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಗ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯ ವಿಚಾರಣೆ ನಡೆಸಿತು.

ಈಗಾಗಲೇ ಗಡುವು ವಿಸ್ತರಿಸಿರುವುದಕ್ಕೆ ಮೆಚ್ಚುಗೆ ಸೂಚಿಸಿದ ನ್ಯಾಯಾಲಯ ಪೋರ್ಟಲ್‌ನ ಕಳಪೆ ಕಾರ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಕಳವಳ ವ್ಯಕ್ತಪಡಿಸಿತು. ಹೀಗಾಗಿ ಭೌತಿಕವಾಗಿ ತೆರಿಗೆ ಸಲ್ಲಿಕೆಯ ವಿವರಗಳನ್ನು ಸಂಗ್ರಹಿಸಲು ಅನುವು ಮಾಡಿಕೊಡಬೇಕೆಂದು ಸಲಹೆ ನೀಡಿತು. ಅಲ್ಲದೆ ಶೀಘ್ರವಾಗಿ ಉನ್ನತಾಧಿಕಾರಿಗಳೊಂದಿಗೆ ಸಮಸ್ಯೆ ಕುರಿತು ಚರ್ಚಿಸಬೇಕೆಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ದೇವಾಂಗ್ ವ್ಯಾಸ್ ಅವರಿಗೆ ತಿಳಿಸಿದ ನ್ಯಾಯಾಲಯ ಪ್ರಕರಣವನ್ನು ನಾಳೆಗೆ (ಜನವರಿ 17) ಮುಂದೂಡಿತು.