ತೆರಿಗೆ ಮರುಪರಿಶೀಲನೆ ನೋಟಿಸ್ ಪ್ರಶ್ನಿಸಿ ಸಚಿವ ಛಗನ್ ಭುಜಬಲ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಬಾಂಬೆ ಹೈಕೋರ್ಟ್
ಆದಾಯ ತೆರಿಗೆ (ಐಟಿ) ಇಲಾಖೆ ನೀಡಿದ್ದ ಶೋಕಾಸ್ ನೋಟಿಸ್ ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರದ ಸಚಿವ ಛಗನ್ ಭುಜಬಲ್ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಇತ್ತೀಚೆಗೆ ವಜಾಗೊಳಿಸಿದೆ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 148ರ ಅಡಿ ತೆರಿಗೆಗೆ ಒಳಪಡುವ ಆದಾಯದ ಮರುಪರಿಶೀಲನೆ ಸಂಬಂಧ ಛಗನ್ ಅವರಿಗೆ ನೋಟಿಸ್ ನೀಡಲಾಗಿತ್ತು.
2012-13ರ ಸಾಲಿನಲ್ಲಿ ತೆರಿಗೆ ವಿಧಿಸಬಹುದಾಗಿದ್ದ ಆದಾಯವು ಪರಿಶೀಲನೆಯಿಂದ ತಪ್ಪಿ ಹೋಗಿದೆ ಎಂದು ನಂಬಲು ಕಾರಣಗಳಿವೆ ಎಂದು ಛಗನ್ ಅವರಿಗೆ ಮಾರ್ಚ್ 2019ರಲ್ಲಿ ಇಲಾಖೆ ನೋಟಿಸ್ ನೀಡಿತ್ತು.
ಸೆಕ್ಷನ್ 147ರ ಪ್ರಕಾರ, ತೆರಿಗೆ ವಿಧಿಸಬಹುದಾದ ಯಾವುದೇ ಆದಾಯವು ಪರಿಶೀಲನೆಯಿಂದ ಕೈತಪ್ಪಿಹೋಗಿದೆ ಎಂದು ತೆರಿಗೆ ಪರಿಶೀಲನಾಧಿಕಾರಿ ನಂಬಲು ಕಾರಣಗಳಿದ್ದರೆ ಅವರು ತನಿಖೆಯ ಸಂದರ್ಭದಲ್ಲಿ ಅಂತಹ ಆದಾಯ ಅಥವಾ ನಷ್ಟವನ್ನು ಮರು ಮೌಲ್ಯಮಾಪನ ಮಾಡಬಹುದಾಗಿದೆ.
ಸಂವಿಧಾನದ 226ನೇ ವಿಧಿಯ ಅಡಿಯಲ್ಲಿ ಅಧಿಕಾರ ಚಲಾಯಿಸಲು ಮತ್ತು ಅಧಿಕಾರಿಗಳು (ಐಟಿ ಇಲಾಖೆ) ಈ ವಿಚಾರದಲ್ಲಿ ಮುಂದುವರೆಯದಂತೆ ತಡೆಯಲು ಯಾವುದೇ ಕಾರಣ ಕಂಡಬರುತ್ತಿಲ್ಲ ಎಂದು ತಿಳಿಸಿದ ನ್ಯಾಯಮೂರ್ತಿಗಳಾದ ಕೆ ಆರ್ ಶ್ರೀರಾಮ್ ಮತ್ತು ಅಮಿತ್ ಬಿ ಬೋರ್ಕರ್ ಅವರಿದ್ದ ಪೀಠ ಅರ್ಜಿಯನ್ನು ವಜಾಗೊಳಿಸಿತು.