<div class="paragraphs"><p>Lawyers</p></div>

Lawyers

 
ಸುದ್ದಿಗಳು

ಮೂರು ತಿಂಗಳಲ್ಲಿ ಸರ್ಕಾರಿ ಅಭಿಯೋಜಕರ ಖಾಲಿ ಹುದ್ದೆಗೆ ನೇಮಕಾತಿ ಮಾಡಲು ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

Bar & Bench

ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಅಭಿಯೋಜಕರ ಹುದ್ದೆಗಳನ್ನು ಮೂರು ತಿಂಗಳ ಒಳಗೆ ತುಂಬಬೇಕು ಎಂದು ರಾಜ್ಯ ಸರ್ಕಾರಕ್ಕೆ ಮಂಗಳವಾರ ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದೆ.

ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಅಭಿಯೋಜಕರ ನೇಮಕಾತಿಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

“ಸರ್ಕಾರಿ ಅಭಿಯೋಜಕರ 300 ಹುದ್ದೆಗಳು ಇನ್ನೂ ಖಾಲಿ ಇವೆ ಎಂದರೆ ಸರ್ಕಾರಿ ಅಭಿಯೋಜಕರು ಇಲ್ಲದಿರುವುದರಿಂದ 300 ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದರ್ಥ. ಇದರಿಂದಾಗಿ ವಿಚಾರಣಾಧೀನ ಕೈದಿಗಳು ಜೈಲಿನಲ್ಲಿ ಕೊಳೆಯುವಂತಾಗಿದೆ” ಎಂದು ಪೀಠ ಹೇಳಿದೆ.

ಸರ್ಕಾರಿ ಅಭಿಯೋಜಕರ ನೇಮಕಾತಿಗೆ ಸಂಬಂಧಿಸಿದಂತೆ ಪರೀಕ್ಷೆ ನಡೆಸಬೇಕಿದೆ. ಕೋವಿಡ್‌ ಸಾಂಕ್ರಮಿಕದ ಹಿನ್ನೆಲೆಯಲ್ಲಿ ಪರೀಕ್ಷೆ ಮುಂದೂಡಲಾಗಿದೆ. ಈ ಮಧ್ಯೆ, ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿರುವ ಸರ್ಕಾರಿ ಅಭಿಯೋಜಕರು ಕರ್ತವ್ಯ ನಿಭಾಯಿಸುತ್ತಿದ್ದಾರೆ ಎಂದು ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲರು ತಿಳಿಸಿದರು.

ಸರ್ಕಾರಿ ಅಭಿಯೋಜಕರ ಖಾಲಿ ಹುದ್ದೆಗಳನ್ನು ಮೂರು ತಿಂಗಳಲ್ಲಿ ತುಂಬಲು ಸರ್ಕಾರಕ್ಕೆ ನಿರ್ದೇಶಿಸಿದ ಪೀಠವು ವಿಚಾರಣೆಯನ್ನು ಜೂನ್‌ ಮೊದಲ ವಾರಕ್ಕೆ ಮುಂದೂಡಿತು.