ಸರ್ಕಾರಿ ಅಭಿಯೋಜಕರು ಅಂಚೆ ಪೆಟ್ಟಿಗೆಯ ರೀತಿಯಲ್ಲಿ ವರ್ತಿಸಲಾಗದು; ರಾಜ್ಯ ಸರ್ಕಾರದ ಪ್ರತಿಕ್ರಿಯೆ ಬಯಸಿದ ಹೈಕೋರ್ಟ್‌

ವಿವಿಧ ಶಾಸಕರುಗಳ ವಿರುದ್ಧ ದಾಖಲಾಗಿದ್ದ 61 ಪ್ರಕರಣಗಳನ್ನು ಹಿಂತೆಗೆದುಕೊಂಡಿರುವ ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿರುವ ಮನವಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ ಕರ್ನಾಟಕ ಹೈಕೋರ್ಟ್‌ ಪ್ರತಿಕ್ರಿಯೆ ಬಯಸಿದೆ.
ಸರ್ಕಾರಿ ಅಭಿಯೋಜಕರು ಅಂಚೆ ಪೆಟ್ಟಿಗೆಯ ರೀತಿಯಲ್ಲಿ ವರ್ತಿಸಲಾಗದು; ರಾಜ್ಯ ಸರ್ಕಾರದ ಪ್ರತಿಕ್ರಿಯೆ ಬಯಸಿದ ಹೈಕೋರ್ಟ್‌

ವಿವಿಧ ಶಾಸಕರುಗಳ ವಿರುದ್ಧ ದಾಖಲಾಗಿದ್ದ 61 ಪ್ರಕರಣಗಳನ್ನು ಹಿಂತೆಗೆದುಕೊಂಡಿರುವ ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿರುವ ಮನವಿಗೆ ಸಂಬಂಧಿಸಿದಂತೆ ಸರ್ಕಾರದ ಪ್ರತಿಕ್ರಿಯೆ ಬಯಸಿರುವ ಕರ್ನಾಟಕ ಹೈಕೋರ್ಟ್‌ ಸರ್ಕಾರಿ ಅಭಿಯೋಜಕರು ನ್ಯಾಯಾಲಯದ ಅಧಿಕಾರಿಯಾಗಿರುವುದರಿಂದ ವಸ್ತುನಿಷ್ಠವಾಗಿ ನಡೆದುಕೊಳ್ಳಬೇಕು ಎಂದಿದೆ.

ಶಾಸಕರ ವಿರುದ್ಧದ ಕ್ರಿಮಿನಲ್‌ ಮೊಕದ್ದಮೆಗಳನ್ನು ಹಿಂಪಡೆಯುವಂತೆ ಕಾರ್ಯಾಂಗ ಸೂಚಿಸಿದಾಗ ಸರ್ಕಾರಿ ಅಭಿಯೋಜಕರು ಅಂಚೆ ಪೆಟ್ಟಿಗೆಯ ರೀತಿ ವರ್ತಿಸಲಾಗದು ಅಥವಾ ಸರ್ಕಾರದ ಆದೇಶಕ್ಕೆ ತಲೆಬಾಗಬಾರದು ಎಂದು ಈಚೆಗೆ ಕರ್ನಾಟಕ ಹೈಕೋರ್ಟ್‌ ಹೇಳಿದೆ.

'ನಾಗರಿಕ ಸ್ವಾತಂತ್ರ್ಯಕ್ಕಾಗಿ ಜನರ ಒಕ್ಕೂಟ' ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ವಿಶ್ವಜಿತ್‌ ಶೆಟ್ಟಿ ಅವರಿದ್ದ ವಿಭಾಗೀಯ ಪೀಠವು ಸರ್ಕಾರಿ ಅಭಿಯೋಜನರು ನ್ಯಾಯಾಲಯದ ಅಧಿಕಾರಿಯಾಗಿರುವುದರಿಂದ ಅವರು ವಸ್ತುನಿಷ್ಠವಾಗಿ ನಡೆದುಕೊಳ್ಳಬೇಕು ಎಂದಿದೆ. ಅಲ್ಲದೇ ನ್ಯಾಯಾಲಯವು ವಿವಿಧ ಶಾಸಕರುಗಳ ವಿರುದ್ಧ ದಾಖಲಾಗಿದ್ದ 61 ಪ್ರಕರಣಗಳನ್ನು ಹಿಂತೆಗೆದುಕೊಂಡಿರುವ ಸಚಿವ ಸಂಪುಟದ ಆದೇಶ ಪ್ರಶ್ನಿಸಿರುವ ಮನವಿಗೆ ಸಂಬಂಧಿಸಿದಂತೆ ಸರ್ಕಾರದ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದೆ. ವಿಚಾರಣೆಯನ್ನು ಡಿಸೆಂಬರ್‌ 21ಕ್ಕೆ ಮುಂದೂಡಿದೆ.

ಎಸ್‌ ಕೆ ಶುಕ್ಲಾ ಮತ್ತು ಇತರರು ವರ್ಸಸ್‌ ಉತ್ತರ ಪ್ರದೇಶ ಸರ್ಕಾರ ಮತ್ತು ಇತರರು ಪ್ರಕರಣದಲ್ಲಿನ ಸುಪ್ರೀಂ ಕೋರ್ಟ್‌ ತೀರ್ಪು ಉಲ್ಲೇಖಿಸಿರುವ ನ್ಯಾಯಾಲಯವು ಹೀಗೆ ಹೇಳಿದೆ:

“ಪ್ರಾಸಿಕ್ಯೂಷನ್‌ನಿಂದ ಪ್ರಕರಣ ಹಿಂಪಡೆಯುವಂತೆ ರಾಜ್ಯ ಸರ್ಕಾರ ಸರ್ಕಾರಿ ಅಭಿಯೋಜಕರಿಗೆ ಸೂಚಿಸಿದರೂ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರವಾಗಿ ಯೋಚಿಸಿ, ಸರ್ಕಾರದ ಸಲಹೆಗೆ ಒಪ್ಪಿಕೊಳ್ಳಬಹುದು. ಇಲ್ಲವೇ ಪ್ರಕರಣ ಹಿಂಪಡೆಯುವುದು ಅಥವಾ ಸರ್ಕಾರದ ಸೂಚನೆಗೆ ವಿರೋಧ ದಾಖಲಿಸಿ ಸದರಿ ಪ್ರಕರಣವು ಪ್ರಾಸಿಕ್ಯೂಷನ್‌ಗೆ ಅರ್ಹ ಎಂದು ಹೇಳಿ ವಿಚಾರಣೆಯಿಂದ ಪ್ರಕರಣ ವಾಪಸ್‌ ಪಡೆಯುವುದರಿಂದ ಹಿಂದೆ ಸರಿಯಬಹುದು…. ಸರ್ಕಾರಿ ಅಭಿಯೋಜಕರು ಅಂಚೆ ಪೆಟ್ಟಿಗೆಯ ರೀತಿಯಲ್ಲಿ ವರ್ತಿಸಲಾಗದು ಅಥವಾ ಸರ್ಕಾರದ ಆದೇಶಕ್ಕೆ ತಕ್ಕಂತೆ ನಡೆಯಲಾಗದು. ಅವರು ನ್ಯಾಯಾಲಯದ ಅಧಿಕಾರಿಯಾಗಿರುವುದರಿಂದ ವಸ್ತುನಿಷ್ಠವಾಗಿ ನಡೆದುಕೊಳ್ಳಬೇಕು.”
ಕರ್ನಾಟಕ ಹೈಕೋರ್ಟ್‌

ಅಪರಾಧ ದಂದ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್‌ 321ರ ಅಡಿ 61 ಪ್ರಕರಣಗಳನ್ನು ಹಿಂಪಡೆಯುವ ನಿರ್ಧಾರವನ್ನು ರಾಜ್ಯ ಸಚಿವ ಸಂಪುಟವು ಆಗಸ್ಟ್‌ 31ರಂದು ತೆಗೆದುಕೊಂಡಿದ್ದು, ಹೀಗೆ ಹೇಳಲಾಗಿದೆ:

“ಸಿಆರ್‌ಪಿಸಿಯ ಸೆಕ್ಷನ್‌ 321ರ ಅಡಿ ಅನುಬಂಧದಲ್ಲಿ ಉಲ್ಲೇಖಿಸಿರುವ 61 ಪ್ರಕರಣಗಳನ್ನು ಹಿಂಪಡೆಯಲು ಸರ್ಕಾರವು ಅನುಮತಿಸಿದೆ. ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇರುವ, ಅನುಬಂಧದಲ್ಲಿ ಉಲೇಖಿಸಲಾಗಿರುವ 61 ಪ್ರಕರಣಗಳನ್ನು ಹಿಂಪಡೆಯುವ ಸಂಬಂಧ ಅಗತ್ಯ ಕ್ರಮಕೈಗೊಳ್ಳುವಂತೆ ಪ್ರಾಸಿಕ್ಯೂಷನ್‌ ಮತ್ತು ಸರ್ಕಾರಿ ವ್ಯಾಜ್ಯ ಇಲಾಖೆಯ ನಿರ್ದೇಶಕರಿಗೆ ಸಲಹೆ ನೀಡಲಾಗಿದೆ.”

ಇದಕ್ಕೆ ತಕರಾರು ಎತ್ತಿರುವ ಅರ್ಜಿದಾರರು ಕರ್ನಾಟಕ ಸರ್ಕಾರದ ನಿರ್ಧಾರವು ಅಶ್ವಿನಿ ಕುಮಾರ್‌ ಉಪಾಧ್ಯಾಯ ವರ್ಸಸ್‌ ಭಾರತ ಸರ್ಕಾರದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ. ಸಿರ್‌ಪಿಸಿ ಸೆಕ್ಷನ್‌ 321ರ ಅಡಿ ಮನವಿ ಸಲ್ಲಿಸಿದ ಬಳಿಕ ನ್ಯಾಯಾಲಯದ ಅನುಮತಿ ಪಡೆದು ಅರ್ಜಿಗೆ ಸಂಬಂಧಿಸಿದಂತೆ ಕ್ರಮಕೈಗೊಳ್ಳಬಹುದಾಗಿದೆ ಎಂದು ಹೈಕೋರ್ಟ್‌ ಹೇಳಿದೆ.

Also Read
ಜನಪ್ರತಿನಿಧಿಗಳ ಪ್ರಕರಣ: ಸಾಕ್ಷಿ ಸಂರಕ್ಷಣಾ ಯೋಜನೆ ಜಾರಿಗೆ ತರಲು ಸರ್ಕಾರಕ್ಕೆ ಸೂಚಿಸಿದ ಕರ್ನಾಟಕ ಹೈಕೋರ್ಟ್‌

“ಪ್ರಾಸಿಕ್ಯೂಷನ್‌ನಿಂದ ಹಿಂದೆ ಸರಿಯಲು ತೆಗೆದುಕೊಳ್ಳುವ ಇಂತಹ ನಿರ್ಧಾರಕ್ಕೆ ಯಾವುದೇ ನ್ಯಾಯಾಲಯ ಬದ್ಧವಾಗಿರುವುದಿಲ್ಲ. ಸಿರ್‌ಪಿಸಿ ಸೆಕ್ಷನ್‌ 321ರ ಅಡಿ ಮನವಿ ಸಲ್ಲಿಸಿದರೂ ಮೇಲ್ನೋಟಕ್ಕೆ ಪ್ರಕರಣದ ಹಿನ್ನೆಲೆಯನ್ನು ಪರಿಶೀಲಿಸುವುದು ನ್ಯಾಯಾಲಯದ ಕರ್ತವ್ಯವಾಗಿದ್ದು, ಮನವಿ ತಿರಸ್ಕರಿಸುವ ಅಧಿಕಾರ ನ್ಯಾಯಾಲಯಕ್ಕೆ ಇರುತ್ತದೆ” ಎಂದು ಪೀಠ ಹೇಳಿದೆ.

ಈಗಿನ ಆದೇಶದ ಪ್ರತಿಯನ್ನು ಪ್ರಕರಣ ಹಿಂಪಡೆಯುವಂತೆ ಸೂಚಿಸಲಾಗಿರುವ 61 ಸರ್ಕಾರಿ ಅಭಿಯೋಜಕರಿಗೆ ಕಳುಹಿಸಿಕೊಡುವಂತೆ ನ್ಯಾಯಾಲಯ ಸೂಚಿಸಿದೆ. “ಸಿಆರ್‌ಪಿಸಿ ಸೆಕ್ಷನ್‌ 321ರ ಅಡಿ ಮನವಿ ಸಲ್ಲಿಸಿದಾಗ ಸದರಿ ಆದೇಶಕ್ಕೆ ಸಂಬಂಧಿಸಿದಂತೆ ಸಂಬಂಧಿತ ನ್ಯಾಯಾಲಯದ ಗಮನಸೆಳೆಯುವುದು ಸರ್ಕಾರಿ ಅಭಿಯೋಜಕರ ಜವಾಬ್ದಾರಿಯಾಗಿದೆ” ಎಂದು ಪೀಠ ಹೇಳಿದೆ.

ಪ್ರಕರಣದ ವಿಚಾರಣೆಯನ್ನು ಡಿ. 21ಕ್ಕೆ ಮುಂದೂಡಲಾಗಿದೆ.

Related Stories

No stories found.
Kannada Bar & Bench
kannada.barandbench.com