Karnataka High Court

 
ಸುದ್ದಿಗಳು

[ಎಫ್‌ಎಸ್‌ಎಲ್‌ಗಳಲ್ಲಿ ಖಾಲಿ ಹುದ್ದೆ] ಜಂಟಿ ನಿರ್ದೇಶಕರ ಸಹಿತ ವಿವಿಧ ಹುದ್ದೆಗಳ ನೇಮಕ: ಹೈಕೋರ್ಟ್‌ಗೆ ಸರ್ಕಾರದ ವಿವರಣೆ

“ಕಾಗದದ ಮೇಲೆ ಮಾತ್ರ ನ್ಯಾಯಾಲಯದ ಆದೇಶವನ್ನು ಪಾಲಿಸಲಾಗಿದೆಯೇ ವಿನಾ ಆದೇಶದಲ್ಲಿ ಉಲ್ಲೇಖಿಸಲಾಗಿರುವ ಹುದ್ದೆಗಳನ್ನು ತುಂಬಲಾಗಿಲ್ಲ” ಎಂದು ಪೀಠವು ಕಿಡಿಕಾರಿದ್ದನ್ನು ಇಲ್ಲಿ ನೆನೆಯಬಹುದಾಗಿದೆ.

Bar & Bench

ರಾಜ್ಯದ ವಿಧಿ ವಿಜ್ಞಾನ ಪ್ರಯೋಗಾಲಯಗಳಲ್ಲಿ (ಎಫ್‌ಎಸ್‌ಎಲ್) ಖಾಲಿ ಇದ್ದ ಜಂಟಿ ನಿರ್ದೇಶಕ, ಉಪ ನಿರ್ದೇಶಕ ಹಾಗೂ ಸಹಾಯಕ ನಿರ್ದೇಶಕರ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ ಎಂದು ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್‌ಗೆ ಈಚೆಗೆ ವಿವರಣೆ ನೀಡಿದೆ. ಕಳೆದ ವಿಚಾರಣೆಯಲ್ಲಿ ಪೀಠವು “ಕಾಗದದ ಮೇಲೆ ಮಾತ್ರ ನ್ಯಾಯಾಲಯದ ಆದೇಶವನ್ನು ಪಾಲಿಸಲಾಗಿದೆಯೇ ವಿನಾ ಆದೇಶದಲ್ಲಿ ಉಲ್ಲೇಖಿಸಲಾಗಿರುವ ಹುದ್ದೆಗಳನ್ನು ತುಂಬಲಾಗಿಲ್ಲ” ಎಂದು ಕಿಡಿಕಾರಿದ್ದನ್ನು ಇಲ್ಲಿ ನೆನೆಯಬಹುದು.

ರಾಜ್ಯದ ವಿವಿಧ ಕಡೆ ಇರುವ ಎಫ್‌ಎಸ್‌ಎಲ್‌ಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬುವುದಕ್ಕೆ ಸಂಬಂಧಿಸಿದಂತೆ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಹೈಕೋರ್ಟ್‌ನ ಏಕಸದಸ್ಯ ಪೀಠವು ತೀರ್ಪಿನಲ್ಲಿ ನೀಡಿದ್ದ ನಿರ್ದೇಶನಗಳನ್ನು ಆಧರಿಸಿ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲ ವಿಜಯ್ ಕುಮಾರ್ ಎ. ಪಾಟೀಲ್ ಅವರು 2021ರ ಆಗಸ್ಟ್‌ 13ರಂದು ನ್ಯಾಯಾಲಯ ನೀಡಿದ್ದ ಮಧ್ಯಂತರ ನಿರ್ದೇಶನದಂತೆ ಎಫ್‌ಎಸ್‌ಎಲ್‌ಗಳಲ್ಲಿ ಖಾಲಿ ಇದ್ದ ಜಂಟಿ ನಿರ್ದೇಶಕ, ಉಪ ನಿರ್ದೇಶಕ, ಸಹಾಯಕ ನಿರ್ದೇಶಕ ಹಾಗೂ ವೈಜ್ಞಾನಿಕ ಅಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಈ ಸಂಬಂಧ ಫೆಬ್ರವರಿ 25ರಂದು ನ್ಯಾಯಾಲಯಕ್ಕೆ ಅನುಪಾಲನಾ ವರದಿ ಸಲ್ಲಿಸಲಾಗಿದೆ. ಕೆಲ ಹುದ್ದೆಗಳು ಖಾಲಿ ಇದ್ದು, ಅವುಗಳ ಭರ್ತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಕೊಂಚ ಕಾಲಾವಕಾಶ ನೀಡಿದರೆ, ಶೀಘ್ರ ನೇಮಕಾತಿ ಮಾಡಲಾಗುವುದು” ಎಂದು ತಿಳಿಸಿದರು.

ಇದನ್ನು ದಾಖಲಿಸಿಕೊಂಡ ಪೀಠವು ಉಳಿದಿರುವ ಖಾಲಿ ಹುದ್ದೆಗಳ ಭರ್ತಿಗಾಗಿ ಅಗತ್ಯ ನೇಮಕಾತಿಗಳನ್ನು ನಡೆಸಲು ಸರ್ಕಾರಕ್ಕೆ ಆರು ವಾರ ಕಾಲಾವಕಾಶ ನೀಡಿ, ಅರ್ಜಿ ವಿಚಾರಣೆ ಮುಂದೂಡಿತು.

ಕಳೆದ ವಿಚಾರಣೆಯ ಸಂದರ್ಭದಲ್ಲಿ “ರಾಜ್ಯ ಸರ್ಕಾರದ ಅನುಪಾಲನಾ ವರದಿಯಲ್ಲಿ ಯಾವುದೇ ಸಕಾರಾತ್ಮಕ ಅಂಶಗಳು ಕಾಣುತ್ತಿಲ್ಲ. ಆಗಸ್ಟ್‌ 13ರ ನ್ಯಾಯಾಲಯದ ಆದೇಶ ಪಾಲನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಾಕಿರುವ ಪ್ರಯತ್ನದ ನಮಗೆ ಸಮಾಧಾನವಾಗಿಲ್ಲ. ನ್ಯಾಯಾಲಯ ನೀಡುವ ನಿರ್ದೇಶನಗಳು ವಿರೋಧದ ರೂಪದಲ್ಲಿ ಇರುವುದಿಲ್ಲ. ಸಂಬಂಧಪಟ್ಟ ಇಲಾಖೆಯ ಅನುಕೂಲಕ್ಕಾಗಿ ಪೀಠದ ಆದೇಶಗಳನ್ನು ಪಾಲಿಸಬೇಕು. ಇದರಿಂದ ಎಫ್‌ಎಸ್‌ಎಲ್‌ ಕಾರ್ಯನಿರ್ವಹಣೆ ಸುಧಾರಣೆಯಾಗಲಿದ್ದು, ಇದು ರಾಜ್ಯದಲ್ಲಿ ಬಾಕಿ ಇರುವ ಕ್ರಿಮಿನಲ್‌ ಪ್ರಕರಣಗಳನ್ನು ತುರ್ತಾಗಿ ವಿಲೇವಾರಿ ಮಾಡಲು ಅನುಕೂಲವಾಗುತ್ತದೆ” ಎಂದು ಪೀಠ ಹೇಳಿತ್ತು.

“ವರದಿ ವಿಳಂಬತೆಯಿಂದ ವಿಚಾರಣಾಧೀನರಿಗೆ ಸಮಸ್ಯೆಯಾಗುವುದಲ್ಲದೇ ಇದು ಸಂತ್ರಸ್ತರು ಮತ್ತು ಅವರ ಕುಟುಂಬ ಸದಸ್ಯರಿಗೂ ಸಮಸ್ಯೆ ಉಂಟು ಮಾಡುತ್ತದೆ. ವರದಿಯ ವಿಳಂಬದಿಂದಾಗಿ ಅವರೆಲ್ಲರ ವೇದನೆಯೂ ವಿಸ್ತರಣೆಯಾಗುತ್ತದೆ. ಎಲ್ಲಾ ವಿಧಿವಿಜ್ಞಾನ ಮಾದರಿಗಳ ವಿಶ್ಲೇಷಣೆ ನಡೆಸಿ, ತುರ್ತಾಗಿ ವರದಿ ನೀಡುವುದಕ್ಕೆ ಅಗತ್ಯ ಸೌಲಭ್ಯ ಕಲ್ಪಿಸುವ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದೆ” ಎಂದು ಪೀಠ ಹೇಳಿತ್ತು.

ರಾಜ್ಯದ ವಿವಿಧ ಎಫ್‌ಎಸ್‌ಎಲ್‌ಗಳಲ್ಲಿ 3 ಜಂಟಿ ನಿರ್ದೇಶಕರು, 18 ಸಹಾಯಕ ನಿರ್ದೇಶಕರು, 35 ಹಿರಿಯ ವೈಜ್ಞಾನಿಕ ಅಧಿಕಾರಿಗಳು ಮತ್ತು 138 ವೈಜ್ಞಾನಿಕ ಅಧಿಕಾರಿಗಳ ಹುದ್ದೆಗಳು ಖಾಲಿ ಇವೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಸರ್ಕಾರ ತಿಳಿಸಿತ್ತು. ಮಾದಕ ವಸ್ತುಗಳಿಗೆ ಸಂಬಂಧಿಸಿದಂತೆ ವಿಧಿವಿಜ್ಞಾನದ ವರದಿ ಪಡೆಯಲು ಒಂದು ವರ್ಷ, ಕಂಪ್ಯೂಟರ್‌/ಮೊಬೈಲ್‌/ಆಡಿಯೊ ವಿಧಿವಿಜ್ಞಾನ ವರದಿ ಪಡೆಯಲು ಒಂದೂವರೆ ವರ್ಷ ಮತ್ತು ವಂಶವಾಹಿ ಪರೀಕ್ಷಾ ವರದಿ ಪಡೆಯಲು ಸರಾಸರಿ ಒಂದೂವರೆ ವರ್ಷ ಅಗತ್ಯವಿದೆ ಎಂದು ಸರ್ಕಾರವು ತನ್ನ ವರದಿಯಲ್ಲಿ ಹೇಳಿತ್ತು.