Ranjith, Kerala High court 
ಸುದ್ದಿಗಳು

ಲೈಂಗಿಕ ಕಿರುಕುಳ ಪ್ರಕರಣ ರದ್ದುಗೊಳಿಸುವಂತೆ ಕೋರಿ ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಚಿತ್ರ ನಿರ್ದೇಶಕ ರಂಜಿತ್

ಕೇರಳ ಸರ್ಕಾರ ಮತ್ತು ದೂರುದಾರರಿಗೆ ನೋಟಿಸ್ ಜಾರಿಗೊಳಿಸಿದ ನ್ಯಾಯಮೂರ್ತಿ ಸಿ ಜಯಚಂದ್ರ ಜನವರಿ 27ಕ್ಕೆ ವಿಚಾರಣೆ ಮುಂದೂಡಿದರು.

Bar & Bench

ಬಂಗಾಳಿ ನಟಿಯೊಬ್ಬರು ತಮ್ಮ ವಿರುದ್ಧ ದಾಖಲಿಸಿರುವ ಲೈಂಗಿಕ ಕಿರುಕುಳ ಪ್ರಕರಣ ರದ್ದುಗೊಳಿಸುವಂತೆ ಕೋರಿ ನಿರ್ದೇಶಕ ರಂಜಿತ್ ಬಾಲಕೃಷ್ಣನ್ ಕೇರಳ ಹೈಕೋರ್ಟ್‌ ಮೊರೆ ಹೋಗಿದ್ದಾರೆ [ ರಂಜಿತ್ ಬಾಲಕೃಷ್ಣನ್ ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣ]

ಪ್ರಕರಣದ ವಿಚಾರಣೆಯನ್ನು ಶುಕ್ರವಾರ ನಡೆಸಿದ ನ್ಯಾಯಮೂರ್ತಿ ಸಿ ಜಯಚಂದ್ರ ರಾಜ್ಯ ಸರ್ಕಾರ ಮತ್ತು ದೂರುದಾರರಿಗೆ ನೋಟಿಸ್ ಜಾರಿಗೊಳಿಸಿ ಜನವರಿ 27ಕ್ಕೆ ವಿಚಾರಣೆ ಮುಂದೂಡಿದರು.

2009ರಲ್ಲಿ "ಪಲೇರಿಮಾಣಿಕ್ಯಂ" ಚಿತ್ರದ ಚರ್ಚೆಯ ಸಂದರ್ಭದಲ್ಲಿ ನಟಿಗೆ ಕಿರುಕುಳ ನೀಡಲು ಯತ್ನಿಸಿದ ಆರೋಪ ರಂಜಿತ್ ಮೇಲಿದೆ. ಆಕೆಯನ್ನು ತನ್ನ ಅಪಾರ್ಟ್‌ಮೆಂಟ್‌ಗೆ ಆಹ್ವಾನಿಸಿ ಲೈಂಗಿಕ ಉದ್ದೇಶದಿಂದ ಅನುಚಿತವಾಗಿ ಸ್ಪರ್ಶಿಸಿದ್ದರು ಎನ್ನಲಾಗಿತ್ತು.

ಈ ಹಿನ್ನೆಲೆಯಲ್ಲಿ ರಂಜಿತ್‌ ವಿರುದ್ಧ ಐಪಿಸಿ ಸೆಕ್ಷನ್‌ 354 (ಮಹಿಳೆಯ ಘನತೆಗೆ ಧಕ್ಕೆ ತರುವ ಸಲುವಾಗಿ ಮಹಿಳೆ ಮೇಲೆ ದಾಳಿ ಇಲ್ಲವೇ ಕ್ರಿಮಿನಲ್‌ ಬಲಪ್ರಯೋಗ) ಹಾಗೂ 509 (ಮಹಿಳೆಯರ ಘನತೆಗೆ ಧಕ್ಕೆ ತರುವ ಸಲುವಾಗಿ ಸನ್ನೆ ಬಳಕೆ ಅಥವಾ ಕೃತ್ಯ ಎಸಗುವುದು} ಅಡಿ ಎಫ್‌ಐಆರ್‌ ದಾಖಲಾಗಿತ್ತು. ತರುವಾಯ, ಎರ್ನಾಕುಲಂನ ಎಸಿಜೆಎಂ ನ್ಯಾಯಾಲಯದಲ್ಲಿ ರಂಜಿತ್‌ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿತ್ತು.

ಅರ್ಜಿಯಲ್ಲಿ ಆರೋಪ ನಿರಾಕರಿಸಿದ್ದ ರಂಜಿತ್‌ ಕೇರಳ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸಲು ತಮ್ಮ ವಿರುದ್ಧ ನಿರ್ಮಾಪಕ ಜೋಶಿ ಜೋಸೆಫ್ ಸೇರಿದಂತೆ ಕೆಲವು ವ್ಯಕ್ತಿಗಳು ನಡೆಸಿದ ಪಿತೂರಿ ಇದಾಗಿದೆ ಎಂದಿದ್ದರು.

ಈಚೆಗಷ್ಟೇ ನಟನೆಯ ಅವಕಾಶ ಬಯಸಿ ಬಂದಿದ್ದ ಯುವಕನೊಬ್ಬ ದಾಖಲಿಸಿದ್ದ ಅಸ್ವಾಭಾವಿಕ ಲೈಂಗಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ರಂಜಿತ್‌ ಅವರಿಗೆ ಕರ್ನಾಟಕ ಹೈಕೋರ್ಟ್‌ ಈಚೆಗೆ ಜಾಮೀನು ನೀಡಿತ್ತು.

ಜಾಮೀನು ನೀಡುವ ವೇಳೆ ನ್ಯಾಯಾಲಯವು ತನ್ನ ಆದೇಶದಲ್ಲಿ, “ಬೆಂಗಳೂರಿನ ತಾಜ್‌ ಹೋಟೆಲ್‌ 2016ರಲ್ಲಿ ಆರಂಭವಾಗಿದ್ದು, ದೂರುದಾರರು 2012ರಲ್ಲಿ ತಮ್ಮ ಮೇಲೆ ಮದ್ಯ ಸೇವಿಸಿ ರಂಜಿತ್‌ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಹೀಗಾಗಿ, ತಾಜ್‌ ಸೃಷ್ಟಿತ ಸಿದ್ಧಾಂತ ಬಿದ್ದು ಹೋಗಿದೆ. ಇನ್ನು, ರಂಜಿತ್‌ ಅವರು ಮದ್ಯಸೇವಿಸಿ ಕೃತ್ಯ ಎಸಗಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ. ಮದ್ಯದ ಅಮಲು ಇಳಿದು ದೂರು ದಾಖಲಿಸಲು ದೂರುದಾರರಿಗೆ 12 ವರ್ಷ ಬೇಕಿರಲಿಲ್ಲ. ಅವಿಶ್ವಾಸಾರ್ಹ ಸಾಕ್ಷಿಗೆ ಇದೊಂದು ನಿಚ್ಚಳ ಉದಾಹರಣೆಯಾಗಿದೆ. ಹೀಗಾಗಿ, ಅರ್ಜಿ ಇತ್ಯರ್ಥವಾಗುವವರೆಗೆ ಪ್ರಕರಣದ ತನಿಖೆಗೆ ತಡೆಯಾಜ್ಞೆ ನೀಡಲಾಗಿದೆ. ರಾಜ್ಯ ಸರ್ಕಾರ ಮತ್ತು ದೂರುದಾರನಿಗೆ ನೋಟಿಸ್‌ ಜಾರಿ ಮಾಡಲಾಗಿದೆ” ಎಂದು ತಿಳಿಸಿತ್ತು.

ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಮಹಿಳೆಯರ ಕೆಲಸದ ಪರಿಸ್ಥಿತಿಗಳ ಕುರಿತು ನ್ಯಾಯಮೂರ್ತಿ ಕೆ ಹೇಮಾ ಸಮಿತಿ ನೀಡಿದ್ದ ವರದಿಯ ಪರಿಣಾಮವಾಗಿ ಆರೋಪ ಎದುರಿಸುತ್ತಿರುವ ಮಲಯಾಳಂ ಚಲನಚಿತ್ರೋದ್ಯಮದ ಹಲವು ಗಣ್ಯರಲ್ಲಿ ರಂಜಿತ್‌ ಕೂಡ ಒಬ್ಬರು.