The Karnataka High Court 
ಸುದ್ದಿಗಳು

ಪ್ರಕರಣಗಳ ಸಂಖ್ಯೆ ಗಣನೀಯ ಕುಸಿತಕ್ಕೆ ರಾಜ್ಯ ಸರ್ಕಾರವನ್ನು ದೂರಬಹುದೇ? ಹೈಕೋರ್ಟ್ ಪ್ರಶ್ನೆ

“ಕರ್ನಾಟಕ ಹೈಕೋರ್ಟ್‌ನ ಮೂರು ಪೀಠಗಳೂ ಸಂಪೂರ್ಣವಾಗಿ ಕಾರ್ಯ ನಿರ್ವಹಿಸುತ್ತಿವೆ. ವಿಚಾರಣಾಧೀನ ನ್ಯಾಯಾಲಯಗಳು ಗಣನೀಯವಾಗಿ ತೆರೆಯಲ್ಪಟ್ಟಿವೆ. ಈ ಚಟುವಟಿಕೆ (ವಕೀಲ ಗುಮಾಸ್ತರಿಗೆ ಆರ್ಥಿಕ ನೆರವು) ಈಗ ಮಾಡಬೇಕೆ? ಎಂದು ಪೀಠ ಪ್ರಶ್ನಿಸಿದೆ.

Bar & Bench

ವಕೀಲ ಗುಮಾಸ್ತರಿಗೆ ಆರ್ಥಿಕ ನೆರವು ನೀಡುವ ಕುರಿತ ಮನವಿಯ ವಿಚಾರಣೆಯ ಸಂದರ್ಭದಲ್ಲಿ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿರುವುದಕ್ಕೆ ರಾಜ್ಯ ಸರ್ಕಾರವನ್ನು ಜವಾಬ್ದಾರಿಯನ್ನಾಗಿಸಬಹುದೇ ಎಂದು ಅರ್ಜಿದಾರರನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ಪ್ರಶ್ನಿಸಿದೆ (ಕರ್ನಾಟಕ ರಾಜ್ಯಮಟ್ಟದ ವಕೀಲರ ಗುಮಾಸ್ತರ ಸಂಸ್ಥೆ ವರ್ಸಸ್ ಕರ್ನಾಟಕ ಸರ್ಕಾರ ಮತ್ತು ಇತರರು).

ಕೋವಿಡ್ ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ ಎಂದು ವಕೀಲ ಮೂರ್ತಿ ಡಿ ನಾಯಕ್ ಅವರು ಪೀಠದ ಗಮನ ಸೆಳೆದಾಗ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ ಓಕಾ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್ ಕಿಣಗಿ ಅವರಿದ್ದ ಪೀಠವು ಮೌಖಿಕವಾಗಿ “ಅದಕ್ಕೆ ರಾಜ್ಯ ಸರ್ಕಾರವನ್ನು ಜವಾಬ್ದಾರಿಯಾಗಿಸಬಹುದೇ?” ಎಂದು ಪ್ರಶ್ನಿಸಿತು.

“ಹೈಕೋರ್ಟ್‌ನ ಮೂರು ಪೀಠಗಳೂ ಸಂಪೂರ್ಣವಾಗಿ ಕರ್ತವ್ಯ ನಿರ್ವಹಿಸುತ್ತಿವೆ. ವಿಚಾರಣಾಧೀನ ನ್ಯಾಯಾಲಯಗಳು ಗಣನೀಯವಾಗಿ ತೆರೆದಿವೆ. ಈ ಚಟುವಟಿಕೆಯನ್ನು (ವಕೀಲ ಗುಮಾಸ್ತರಿಗೆ ಆರ್ಥಿಕ ನೆರವು) ಈಗ ಮಾಡಬೇಕೆ? ವಿಶೇಷವಾಗಿ ಧಾರವಾಡ ಪೀಠವು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದೆ” ಎಂದು ನ್ಯಾಯಪೀಠ ಹೇಳಿದೆ.

ಕೋವಿಡ್ ಪರಿಸ್ಥಿತಿಯಲ್ಲಿ ಬದಲಾವಣೆ ಕಾಣುತ್ತಿಲ್ಲ ಎಂದು ವಕೀಲ ನಾಯಕ್ ಪ್ರತಿಕ್ರಿಯಿಸಿದಾಗ, “ಈ ಅರ್ಜಿ ಸಲ್ಲಿಸುವಾಗ ಇದ್ದ ಪರಿಸ್ಥಿತಿ ಈಗ ಇದೆಯೇ?” ಎಂದು ಪೀಠ ಪ್ರಶ್ನಿಸಿತು. ನ್ಯಾಯಾಲಯಗಳು ಸಂಪೂರ್ಣವಾಗಿ ಕಾರ್ಯಚಟುವಟಿಕೆ ಆರಂಭಿಸಿರುವ ಹಿನ್ನೆಲೆಯಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿತು.

ವಿಚಾರಣೆ ಅಂತಿಮ ಹಂತದಲ್ಲಿದ್ದಾಗ ಪೀಠವು ಈಗ ವಕೀಲರ ಗುಮಾಸ್ತರಿಗೆ ವೇತನ ನೀಡಲಾಗುತ್ತಿದೆಯೇ ಎಂದು ಪ್ರಶ್ನಿಸಿತು. ಆಗ ವಕೀಲರು ಅದು ಅವರ ಉದ್ಯೋಗದಾತರನ್ನು ಅವಲಂಬಿಸಿದೆ ಎಂದರು. ಕೋವಿಡ್ ಹಿನ್ನೆಲೆಯಲ್ಲಿ ವಕೀಲರಿಗೆ ಆರ್ಥಿಕ ನೆರವು ನೀಡಲು ನಿರಾಕರಿಸಿದ ರಾಜ್ಯ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಬೆಂಗಳೂರು ವಕೀಲರ ಸಂಘ ಸಲ್ಲಿಸಿದ್ದ ಅರ್ಜಿಗೆ ನವೆಂಬರ್ 5ರೊಳಗೆ ಆಕ್ಷೇಪಣೆ ದಾಖಲಿಸುವಂತೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿಗೆ (ಕೆಎಸ್‌ಬಿಸಿ) ನ್ಯಾಯಪೀಠ ನಿರ್ದೇಶಿಸಿತು.

ಕೋವಿಡ್ ಹಿನ್ನೆಲೆಯಲ್ಲಿ ವಕೀಲರಿಗೆ ಆರ್ಥಿಕ ನೆರವು ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಮಂಜೂರು ಮಾಡಿದ್ದ ₹5 ಕೋಟಿಯಲ್ಲಿ ನಿಗದಿತ ಅನುದಾನವನ್ನು ವಕೀಲ ಗುಮಾಸ್ತರಿಗೆ ವಿತರಿಸಲು ಪ್ರತ್ಯೇಕವಾಗಿ ಇಡುವಂತೆ ತಿಂಗಳ ಹಿಂದೆ ಕೆಎಸ್‌ಬಿಸಿಗೆ ಹೈಕೋರ್ಟ್ ಸೂಚಿಸಿತ್ತು. ನವೆಂಬರ್ 6ಕ್ಕೆ ವಿಚಾರಣೆ ಮುಂದೂಡಲಾಗಿದೆ.