ವಕೀಲರ ನೆರವಿಗೆ 5 ಕೋಟಿ ರೂ. ಬಿಡುಗಡೆಗೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ; ಪಾರದರ್ಶಕ ಯೋಜನೆಗೆ ಕೌನ್ಸಿಲ್‌ ಗೆ ಸೂಚನೆ

ಕೋವಿಡ್‌ ಸಾಂಕ್ರಾಮಿಕತೆಯಿಂದ ಸಂಕಷ್ಟಕ್ಕೆ ಸಿಲುಕಿರುವ ವಕೀಲರಿಗೆ ರೂ.5 ಕೋಟಿ ಹಣ ವಿತರಿಸಲು ನ್ಯಾಯಯುತ ಮತ್ತು ಪಾರದರ್ಶಕ ಯೋಜನೆ ರೂಪಿಸಲು ರಾಜ್ಯ ವಕೀಲರ ಪರಿಷತ್‌ಗೆ (ಕೆಎಸ್‌ಬಿಸಿ) ಸೂಚಿಸಿದ ಹೈಕೋರ್ಟ್‌.
ವಕೀಲರ ನೆರವಿಗೆ 5 ಕೋಟಿ ರೂ. ಬಿಡುಗಡೆಗೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ; ಪಾರದರ್ಶಕ ಯೋಜನೆಗೆ ಕೌನ್ಸಿಲ್‌ ಗೆ ಸೂಚನೆ
Published on

ಕೋವಿಡ್‌ ಸಾಂಕ್ರಾಮಿಕತೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ವಕೀಲರಿಗೆ ಸಹಾಯ ಮಾಡುವ ಸಲುವಾಗಿ ರೂ.5 ಕೋಟಿ ನೆರವನ್ನು ತಕ್ಷಣವೇ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವಂತೆ ಕರ್ನಾಟಕ ಹೈಕೋರ್ಟ್‌ ಹಿಂದಿನ ವಾರವಷ್ಟೇ ರಾಜ್ಯ ಸರ್ಕಾರಕ್ಕೆ ತಿಳಿಸಿತ್ತು. ಹಣವನ್ನು ರಾಜ್ಯ ವಕೀಲರ ಪರಿಷತ್ ಗೆ (ಕೆಎಸ್‌ಬಿಸಿ) ಬಿಡುಗಡೆ ಮಾಡುವಂತೆ ಸೂಚಿಸಿತ್ತು.

ರಾಜ್ಯ ಸರ್ಕಾರದಿಂದ ಈವರೆಗೆ ಹಣ ಬಿಡುಗಡೆಯಾಗಿಲ್ಲ ಎಂದು ಕೆಎಸ್‌ಬಿಸಿಯು ನ್ಯಾಯಾಲಯದ ಗಮನ ಸೆಳೆದ ಪರಿಣಾಮ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು. ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌ ಕಿಣಗಿ ನೇತೃತ್ವದ ದ್ವಿಸದಸ್ಯ ಪೀಠವು ಈ ಕುರಿತ ಆದೇಶ ನೀಡಿದ್ದು, ಈ ರೀತಿ ಹೇಳಿದೆ:

ರಾಜ್ಯ ವಕೀಲರ ಪರಿಷತ್ತಿ‌ಗೆ ಈವರೆಗೆ ರೂ.5 ಕೋಟಿ ಹಣ ಬಿಡುಗಡೆಯಾಗಿಲ್ಲ ಎಂದು ಕೆಎಸ್‌ಬಿಸಿ ಪರ ವಕೀಲರು ಹೇಳಿದ್ದಾರೆ. ಕೂಡಲೇ ಹಣ ವರ್ಗಾವಣೆಯಾಗುವಂತೆ ರಾಜ್ಯ ಸರ್ಕಾರವು ಕ್ರಮ ಕೈಗೊಳ್ಳಬೇಕು.
ಕರ್ನಾಟಕ ಹೈಕೋರ್ಟ್

ಅಗತ್ಯವಿರುವ ವಕೀಲರಿಗೆ ಸೂಚಿಸಲಾದ ಹಣವನ್ನು ವಿತರಿಸುವ ಸಲುವಾಗಿ ನ್ಯಾಯಯುತ ಮತ್ತು ಪಾರದರ್ಶಕ ಯೋಜನೆಯನ್ನು ರೂಪಿಸುವಂತೆ ಕೆಎಸ್‌ ಬಿಸಿಗೆ ನಿರ್ದೇಶಿಸಿತ್ತು. “ವಕೀಲರಿಗೆ ಸಹಾಯ ಮಾಡಲು ರಾಜ್ಯ ಸರ್ಕಾರವು ಸಾರ್ವಜನಿಕ ಹಣವನ್ನು ಬಳಸುತ್ತಿರುವುದರಿಂದ, ಅಗತ್ಯವಿರುವ ವಕೀಲರಿಗೆ ಹಣವನ್ನು ವಿತರಿಸಲು ಕೆ ಎಸ್‌ ಬಿ ಸಿ ನ್ಯಾಯಯುತ ಮತ್ತು ಪಾರದರ್ಶಕ ಯೋಜನೆಯೊಂದನ್ನು ರೂಪಿಸಬೇಕು,” ಎಂದು ಪೀಠವು ಸೂಚಿಸಿತು. ಮುಂದಿನ ವಿಚಾರಣೆಯ ಸಂದರ್ಭದಲ್ಲಿ ವಿಸ್ತೃತ ಯೋಜನೆ ಸಲ್ಲಿಸುವಂತೆ ಪೀಠವು ಕೆ ಎಸ್‌ ಬಿ ಸಿ ಗೆ ಹೇಳಿದೆ.

ಇದೇ ವೇಳೆ, ಈವರೆಗೆ ವಕೀಲ ಗುಮಾಸ್ತರ ಸಹಾಯಕ್ಕಾಗಿ ಸಂಗ್ರಹಿಸಿರುವ ಹಣದ ಕುರಿತಾಗಿ ಹೇಳಿಕೆ ಸಲ್ಲಿಸುವಂತೆ ಧಾರವಾಡ ವಕೀಲರ ಪರಿಷತ್‌ಗೆ ಪೀಠ ಸೂಚಿಸಿದೆ. ಮುಂದುವರೆದು, ಬೆಂಗಳೂರು ವಕೀಲರ ಪರಿಷತ್‌ನ ಉದಾಹರಣೆಯನ್ನು ಅನುಸರಿಸುವಂತೆ ಕಲಬುರ್ಗಿ ವಕೀಲರ ಪರಿಷತ್‌ಗೆ ತಿಳಿಸಿದೆ.

Kannada Bar & Bench
kannada.barandbench.com