Dream 11 and Karnataka HC
Dream 11 and Karnataka HC 
ಸುದ್ದಿಗಳು

ಡ್ರೀಮ್ 11 ವಿರುದ್ಧ ಎಫ್‌ಐಆರ್‌: ಸಂಸ್ಥಾಪಕರಾದ ಭವಿತ್, ಹರ್ಷ್ ಜೈನ್ ವಿರುದ್ಧ ಕ್ರಮಕೈಗೊಳ್ಳದಂತೆ ಹೈಕೋರ್ಟ್‌ ಆದೇಶ

Bar & Bench

ಆನ್‌ಲೈನ್ ಗೇಮ್ ಅಪ್ಲಿಕೇಶನ್‌ ನಡೆಸುತ್ತಿರುವ ‘ಡ್ರೀಮ್-11’ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ದಾಖಲಿಸಿರುವ ಹಿನ್ನೆಲೆಯಲ್ಲಿ ಸಂಸ್ಥೆಯ ಸಂಸ್ಥಾಪಕರ ವಿರುದ್ಧ ಯಾವುದೇ ಒತ್ತಾಯದ ಕ್ರಮ ಜರುಗಿಸಬಾರದು ಎಂದು ಕರ್ನಾಟಕ ಹೈಕೋರ್ಟ್ ಗುರುವಾರ ಪೊಲೀಸರಿಗೆ ಆದೇಶಿಸಿದೆ.

ಕರ್ನಾಟಕ ಪೊಲೀಸ್ (ತಿದ್ದುಪಡಿ) ಕಾಯಿದೆಯ ಸೆಕ್ಷನ್ 79 ಹಾಗೂ 80 ಜಾರಿಗೆ ಬಂದಿದ್ದರೂ ಆನ್‌ಲೈನ್ ಜೂಜು ನಡೆಸುತ್ತಿರುವ ಆರೋಪದ ಮೇಲೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಡ್ರೀಮ್ 11 ಆ್ಯಪ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.

ತಮ್ಮ ವಿರುದ್ಧದ ಎಫ್‌ಐಆರ್‌ಗಳನ್ನು ರದ್ದುಪಡಿಸುವಂತೆ ಕೋರಿ ಡ್ರೀಮ್ 11 ಗೇಮ್ ಆ್ಯಪ್ ನಡೆಸುತ್ತಿರುವ ಸ್ಪೋರ್ಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥಾಪಕರಾದ ಭವಿತ್ ಸೇಟ್ ಹಾಗೂ ಹರ್ಷ್ ಜೈನ್ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ನೇತೃತ್ವದ ಏಕಸದಸ್ಯ ಪೀಠವು ಮುಂದಿನ ವಿಚಾರಣೆವರೆಗೂ ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಅನ್ನಪೂರ್ಣೇಶ್ವರಿ ಠಾಣಾ ಪೊಲೀಸರಿಗೆ ಸೂಚಿಸಿ ವಿಚಾರಣೆಯನ್ನು ನವೆಂಬರ್‌ 9ಕ್ಕೆ ಮುಂದೂಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು “ಅರ್ಜಿದಾರರ ವಿರುದ್ಧ ಆಧಾರರಹಿತವಾಗಿ ಅಸ್ಪಷ್ಟ ಆರೋಪ ಮಾಡಲಾಗಿದೆ. ಡ್ರೀಮ್ 11 ಆನ್ ಲೈನ್ ಗೇಮ್ ಮೂಲಕ ಜನ ಹಣ ಕಳೆದುಕೊಳ್ಳಲಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ, ಇದು ಸತ್ಯಕ್ಕೆ ದೂರವಾಗಿದೆ. ‘ಡ್ರೀಮ್ 11’ ಕೌಶಲ್ಯದ ಆಟವಾಗಿದೆ ಹೊರತು ಜೂಜಲ್ಲ. ಹೀಗಿದ್ದರೂ ಎಫ್‌ಐಆರ್ ದಾಖಲಿಸಿರುವುದು ಕಾನೂನು ಬಾಹಿರ ಕ್ರಮವಾಗಿದೆ ಎಂದು ವಾದಿಸಿದರು.

ಬೆಂಗಳೂರಿನ ನಾಗರಬಾವಿಯ ಮಂಜುನಾಥ್ ಎಂಬುವರು ನೀಡಿದ ದೂರಿನ ಮೇರೆಗೆ ಅಕ್ಟೋಬರ್‌ 7ರಂದು ಡ್ರೀಮ್ 11 ಆ್ಯಪ್ ಸಂಸ್ಥಾಪಕರ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ಗಳನ್ನು ರದ್ದುಪಡಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.