ಬಾಲಿವುಡ್ ಚಲನಚಿತ್ರ ನಿರ್ಮಾಪಕ ಸುನೀಲ್ ದರ್ಶನ್ ಅವರು ನೀಡಿರುವ ಹಕ್ಕುಸ್ವಾಮ್ಯ ಉಲ್ಲಂಘನೆ ದೂರಿಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಗೂಗಲ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ), ಸುಂದರ್ ಪಿಚ್ಚೈ ಮತ್ತು ಯೂಟ್ಯೂಬ್ ವ್ಯವಸ್ಥಾಪಕ ನಿರ್ದೇಶಕ ಗೌತಮ್ ಆನಂದ್ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.
ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎ ಎ ಪಂಚಭಾಯ್ ಅವರ ಆದೇಶದ ಮೇರೆಗೆ ಸಿಆರ್‌ಪಿಸಿ ಸೆಕ್ಷನ್ 156 (3) ಅಡಿಯಲ್ಲಿ ದೂರು ದಾಖಲಾಗಿದೆ. 2017ರ 'ಏಕ್ ಹಸೀನಾ ಥಿ ಏಕ್ ದೀವಾನಾ ಥಾ' ಚಿತ್ರದ ಹಕ್ಕುಸ್ವಾಮ್ಯವನ್ನು ಯಾರಿಗೂ ಮಾರಾಟ ಮಾಡದಿದ್ದರೂ ಯೂಟ್ಯೂಬ್‌ನಲ್ಲಿ ಚಿತ್ರವನ್ನು ಅಕ್ರಮವಾಗಿ ಅಪ್ಲೋಡ್ ಮಾಡಲಾಗಿದೆ ಎಂದು ದೂರಿ ಅರ್ಜಿದಾರ ದರ್ಶನ್ ಮುಂಬೈ ನ್ಯಾಯಾಲಯದ ಮೊರೆ ಹೋಗಿದ್ದರು.
ಯೂಟ್ಯೂಬ್‌ನಲ್ಲಿ ಅಕ್ರಮವಾಗಿ ಚಿತ್ರವನ್ನು ಅಪ್‌ಲೋಡ್ ಮಾಡಿದ ಬಳಿಕ ಅದನ್ನು ಕೋಟಿಗಟ್ಟಲೆ ಬಾರಿ ವೀಕ್ಷಿಸಲಾಗಿದೆ. ಇದರಿಂದ ಆದಾಯ ಬರುತ್ತಿದ್ದರೂ ಅದರ ಫಲ ನನಗೆ ದೊರೆಯುತ್ತಿಲ್ಲ. ಎಂದು ದರ್ಶನ್ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಸ್ತುತ ಪ್ರಕರಣದ ಯಾವುದೇ ಕಕ್ಷಿದಾರರಿಗೆ ತಾವು ಚಿತ್ರದ ಹಕ್ಕುಗಳನ್ನು ನೀಡದಿದ್ದರೂ ತಮ್ಮ ಹಕ್ಕುಗಳನ್ನು ನಿರ್ದಯವಾಗಿ ಉಲ್ಲಂಘಿಸಲಾಗಿದೆ. ಯೂಟ್ಯೂಬ್ ಮತ್ತು ಗೂಗಲ್‌ಗೆ ಹಲವು ಬಾರಿ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ಸುಂದರ್ ಪಿಚ್ಚೈ, ಆನಂದ್ ಗೌತಮ್ ಮಾತ್ರವಲ್ಲದೆ ಗೂಗಲ್‌ನ ಕುಂದುಕೊರತೆ ಅಧಿಕಾರಿ ಹಾಗೂ ಸಂಸ್ಥೆಯ ಮೂವರು ಕಾರ್ಯಕಾರಿ ಅಧಿಕಾರಿಗಳ ವಿರುದ್ಧವೂ ದೂರು ನೀಡಲಾಗಿದೆ.
ತಂತ್ರಜ್ಞಾನದ ಕ್ಷಿಪ್ರ ಪ್ರಗತಿಯಿಂದಾಗಿ ಪೈರಸಿ ಮತ್ತು ಹಕ್ಕುಸ್ವಾಮ್ಯ ಉಲ್ಲಂಘನೆ ಎಂಬುದು ಬೆದರಿಕೆಯಾಗಿ ಪರಿಣಮಿಸಿದೆ . ಇದು ಚಲನಚಿತ್ರ ಮತ್ತು ದೂರದರ್ಶನ ಉದ್ಯಮಕ್ಕೆ ದೊಡ್ಡ ಪ್ರಮಾಣದ ನಷ್ಟವನ್ನು ಉಂಟುಮಾಡುತ್ತದೆ ಎಂದು ಮ್ಯಾಜಿಸ್ಟ್ರೇಟ್ ಹೇಳಿದರು.