[ಗೂಗಲ್‌ ಪ್ಲೇ ಸ್ಟೋರ್‌] ಎರಡು ಸುತ್ತಿನ ದಾವೆ ಬೇಡ, ಅಂತಿಮವಾಗಿ ಪ್ರಕರಣದ ವಿಚಾರಣೆ: ಹೈಕೋರ್ಟ್‌ಗೆ ಸಿಸಿಐ ವಿವರಣೆ

ಗೂಗಲ್‌ನ ಸುಧಾರಿತ ಪ್ಲೇ ಸ್ಟೋರ್‌ ನೀತಿಯ ಕುರಿತು ಕೆಲವು ನವೋದ್ಯಮಗಳು ನೀಡಿದ್ದ ಮಾಹಿತಿ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸುವಂತೆ ಆದೇಶಿಸಿದ್ದ ಆದೇಶದ ಕುರಿತಾದ ಮನವಿಯನ್ನು ವಿಲೇವಾರಿ ಮಾಡುವಂತೆ ಹೈಕೋರ್ಟ್‌ಗೆ ಸಿಸಿಐ ಕೋರಿದೆ.
Karnataka HC and Google play

Karnataka HC and Google play

ಗೂಗಲ್‌ ಪ್ಲೇ ಸ್ಟೋರ್‌ ನಿಯಮಗಳಿಗೆ ಸಂಬಂಧಿಸಿದಂತೆ ಎರಡು ಸುತ್ತಿನ ವಿಚಾರಣೆಗೆ ಬದಲಾಗಿ ಅಂತಿಮ ವಿಚಾರಣೆ ನಡೆಸಲಾಗುವುದು ಎಂದು ಭಾರತೀಯ ಸ್ಪರ್ಧಾ ಆಯೋಗವು (ಸಿಸಿಐ) ಬುಧವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ.

ಗೂಗಲ್‌ನ ಪ್ಲೇಸ್ಟೋರ್‌ ನಿಯಮಗಳಿಗೆ ಸಂಬಂಧಿಸಿದಂತೆ ಸಿಸಿಐ ಡಿಸೆಂಬರ್‌ 31ರ ಗಡುವು ವಿಧಿಸಿದ್ದನ್ನು ಪ್ರಶ್ನಿಸಿ ಗೂಗಲ್‌ ಮತ್ತು ಅದರ ಸಮೂಹ ಸಂಸ್ಥೆಗಳು ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ಬುಧವಾರ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ ಸಿಸಿಐ ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎನ್‌ ವೆಂಕಟರಾಮನ್‌ ಅವರು “ತನಿಖೆ ಪೂರ್ಣಗೊಳಿಸಲು ಸಿಸಿಐನ ಮಹಾನಿರ್ದೇಶಕರು 60 ದಿನಗಳ ಸಮಯ ವಿಸ್ತರಣೆ ಕೋರಿದ್ದಾರೆ. ಈ ಸಮಯದ ಒಳಗೆ ಅವರು ತನಿಖೆಯನ್ನು ಪೂರ್ಣಗೊಳಿಸಲಿದ್ದಾರೆ. ಹೀಗಾಗಿ, ಅಲಯನ್ಸ್‌ ಆಫ್‌ ಡಿಜಿಟಲ್‌ ಇಂಡಿಯಾ ಫೌಂಡೇಶನ್‌ ಕೋರಿರುವ ಮಧ್ಯಂತರ ಪರಿಹಾರ ಮನವಿಯನ್ನು ಪರಿಗಣಿಸುವುದಿಲ್ಲ. ಎರಡು ಸುತ್ತಿನ ದಾವೆಗೆ ಬದಲಾಗಿ ನಾವು ಅಂತಿಮ ವಿಚಾರಣೆಯನ್ನೇ ಮಾಡುತ್ತೇವೆ. ಹೀಗಾಗಿ, ತನ್ನ ವಿರುದ್ಧ ಗೂಗಲ್‌ ಸಲ್ಲಿಸಿರುವ ಮನವಿಯನ್ನು ವಿಲೇವಾರಿ ಮಾಡಬೇಕು” ಎಂದು ಕೋರಿದರು.

“ಮಹಾನಿರ್ದೇಶಕರ ತನಿಖೆಗೆ ಗೂಗಲ್‌ ಸಹಕರಿಸಬೇಕು ಮತ್ತು ಈಗಾಗಲೇ ಹೇಳಿರುವಂತೆ ಗೂಗಲ್‌ ಪ್ಲೇ ಸ್ಟೋರ್‌ ಬಿಲ್ಲಿಂಗ್‌ ವ್ಯವಸ್ಥೆಯನ್ನು ಮುಂಚಿತವಾಗಿ ಅನುಷ್ಠಾನಗೊಳಿಸಬಾರದು” ಎಂಬ ಷರತ್ತುಗಳನ್ನು ಸಿಸಿಐ ವಿಧಿಸಿದೆ ಎಂದರು.

ಗೂಗಲ್‌ ಪ್ರತಿನಿಧಿಸಿದ್ದ ಹಿರಿಯ ವಕೀಲರಾದ ಗೋಪಾಲ್‌ ಸುಬ್ರಮಣಿಯಮ್‌ ಮತ್ತು ಸಜ್ಜನ್‌ ಪೂವಯ್ಯ ಅವರು “ಸಿಸಿಐ ನಿಲುವಿಗೆ ಮೆಚ್ಚುಗೆ ಸೂಚಿಸಿದ್ದು, ಸಿಸಿಐ ವಿಧಿಸಿರುವ ಷರತ್ತುಗಳನ್ನು ಪಾಲನೆ ಮಾಡಲಾಗುತ್ತಿದೆ” ಎಂದು ತಿಳಿಸಿದರು.

“ಗೂಗಲ್‌ ಪ್ಲೇ ಬಿಲ್ಲಿಂಗ್‌ ವ್ಯವಸ್ಥೆಯು ಮಧ್ಯಂತರ ಪರಿಹಾರ ಕೋರಿರುವುದು ಅರ್ಜಿಯ ವಿಷಯವಾಗಿದ್ದು, ಅದನ್ನು ಅಕ್ಟೋಬರ್‌ 31ರವರೆಗೆ ಜಾರಿಗೊಳಿಸುವುದಿಲ್ಲ ಎಂದು ನಮ್ಮ ಕಕ್ಷಿದಾರರು ಹೇಳಿದ್ದಾರೆ. ನಮ್ಮ ನಿಲುವು ಸ್ಪಷ್ಟವಾಗಿದೆ. ತನಿಖಾ ಸಂಸ್ಥೆಗೆ ಸಹಕಾರ ನೀಡುವ ವಿಚಾರದಲ್ಲಿ ಈಗಾಗಲೇ ನಾವು ಸಹಕಾರ ನೀಡಿದ್ದೇವೆ. ಮುಂದೆಯೂ ನೀಡಲಿದ್ದೇವೆ. ತನಿಖೆ ಮುಂದುವರಿಯುವುದಾದರೆ ಮಧ್ಯಂತರ ಪರಿಹಾರ ಮನವಿಯು ಅನಗತ್ಯ. ಈ ವಿಚಾರದಲ್ಲಿ ಸಿಸಿಐ ಕೈಗೊಂಡಿರುವ ನಿಲುವಿನ ಬಗ್ಗೆ ನಮಗೆ ಮೆಚ್ಚುಗೆ ಇದೆ” ಎಂದು ಸುಬ್ರಮಣಿಯಮ್‌ ಹೇಳಿದರು.

Also Read
[ಪ್ಲೇಸ್ಟೋರ್ ವಿವಾದ] ಉತ್ತರಿಸಲು ಗೂಗಲ್‌ಗೆ ಜ.5ರ ವರೆಗೆ ಅವಕಾಶ; ಮಾಹಿತಿದಾರರ ಬೆನ್ನತ್ತಲು ಗೂಗಲ್‌ ಯತ್ನ ಎಂದ ಸಿಸಿಐ

ಅಲಯನ್ಸ್‌ ಆಫ್‌ ಡಿಜಿಟಲ್‌ ಇಂಡಿಯಾ ಫೌಂಡೇಶನ್‌ ಪ್ರತಿನಿಧಿಸಿದ್ದ ವಕೀಲ ಅಬೀರ್‌ ರಾಯ್‌ ಅವರು “ಈ ನಿರ್ಧಾರದಿಂದ ನಮ್ಮ ಕಕ್ಷಿದಾರರು ಮಧ್ಯಂತರ ಪರಿಹಾರ ಕೋರಿ ಮರು ಮನವಿ ಸಲ್ಲಿಸುವುದನ್ನು ಮುಂಚಿತವಾಗಿ ನಿರ್ಬಂಧಿಸುವಂತಾಗಬಾರದು” ಎಂದರು.

ಎಲ್ಲಾ ಪಕ್ಷಕಾರರನ್ನು ಪ್ರತಿನಿಧಿಸುವ ವಕೀಲರು ಒಪ್ಪಿಗೆಯನ್ನು ದಾಖಲೆಯಲ್ಲಿ ಸಲ್ಲಿಸುವಂತೆ ಆದೇಶಿಸಿದ ಪೀಠವು, ಜಂಟಿ ಮೆಮೊ ಸಲ್ಲಿಸಲು ಸೋಮವಾರದರೆಗೆ ಕಾಲಾವಕಾಶ ನೀಡಿ ವಿಚಾರಣೆ ಮುಂದೂಡಿತು.

Related Stories

No stories found.
Kannada Bar & Bench
kannada.barandbench.com