First Woman Mace Bearer The Hindu
ಸುದ್ದಿಗಳು

ಮೊದಲ ಮಹಿಳಾ ಮೇಸ್ ಬೇರರ್ ನೇಮಕ ಮಾಡಿಕೊಂಡ ಮದ್ರಾಸ್ ಹೈಕೋರ್ಟ್

ನ್ಯಾಯಮೂರ್ತಿ ಆರ್ ಎನ್ ಮಂಜುಳಾ ಅವರು ಮಹಿಳಾ ಚೋಬ್ದಾರ್ ಸೇವೆ ಬಳಸಿಕೊಂಡ ನ್ಯಾಯಾಲಯದ ಮೊದಲ ನ್ಯಾಯಮೂರ್ತಿ.

Bar & Bench

ಮೇಸ್‌ ಬೇರರ್‌ ಅಥವಾ ದಂಡಪಾಣಿ ಹುದ್ದೆಗೆ ಮದ್ರಾಸ್‌ ಹೈಕೋರ್ಟ್‌ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರನ್ನು ನೇಮಕಮಾಡಿಕೊಂಡಿರುವುದು ವರದಿಯಾಗಿದೆ.

ನ್ಯಾಯಮೂರ್ತಿಗಳು ತಮ್ಮ ಕೋಣೆಯಿಂದ ನ್ಯಾಯಾಲಯದ ಕಲಾಪ ನಡೆಯುವ ಅಂಗಳಕ್ಕೆ ತೆರಳುವಾಗ ದಂಡಪಾಣಿ ಕೂಡ ಅವರ ಜೊತೆ ದಂಡವನ್ನು ಹಿಡಿದು ಸಾಗುತ್ತಾರೆ.

ನ್ಯಾಯಮೂರ್ತಿ ಆರ್ ಎನ್ ಮಂಜುಳಾ ಅವರು ಮಹಿಳಾ ದಂಡಪಾಣಿ ಸೇವೆ ಬಳಸಿಕೊಂಡ ನ್ಯಾಯಾಲಯದ ಮೊದಲ ನ್ಯಾಯಮೂರ್ತಿ ಎನಿಸಿಕೊಂಡಿದ್ದಾರೆ. ನ್ಯಾ. ಮಂಜುಳಾ ಅವರು ಪ್ರಸ್ತುತ ಮದ್ರಾಸ್‌ ಹೈಕೋರ್ಟ್‌ ಪ್ರಧಾನ ಪೀಠದಲ್ಲಿ ಲಿಂಗ ಸೂಕ್ಷ್ಮತೆ ಆಂತರಿಕ ದೂರುಗಳ ಸಮಿತಿಯ (ಐಸಿಸಿ) ಸದಸ್ಯರಾಗಿದ್ದಾರೆ.

ಕಳೆದ ವರ್ಷ ಮಾರ್ಚ್ 14ರಂದು, ಹೈಕೋರ್ಟ್ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ವಿವಿಧ ಹುದ್ದೆಗಳೊಡನೆ 40 ಚೋಬ್ದಾರ್‌ಗಳನ್ನು ನೇಮಕ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿತ್ತು.

2021ರ ನೇಮಕಾತಿ ಅಧಿಸೂಚನೆಯ ಪ್ರಕಾರ ಮೇಸ್ ಬೇರರ್ ಆಗಿ ನೇಮಕಗೊಳ್ಳಲು ಅರ್ಹತೆಯ ಮಾನದಂಡಗಳು ಹೀಗಿವೆ: ಎಂಟನೇ ತರಗತಿ ಅಥವಾ ತತ್ಸಮಾನ ತರಗತಿಯಲ್ಲಿ ತೇರ್ಗಡೆಯಾಗಿರಬೇಕು. ನೇಮಕಾತಿ ವಯೋಮಿತಿ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 30 ವರ್ಷ. (ಮೀಸಲು ವರ್ಗದ ಅಭ್ಯರ್ಥಿಗಳಿಗೆ 35 ವರ್ಷದವರೆಗೆ ಸಡಿಲಿಕೆ). ಅಭ್ಯರ್ಥಿಗಳು ಸಾಮಾನ್ಯ ಲಿಖಿತ ಪರೀಕ್ಷೆಯನ್ನು ಬರೆಯಬೇಕು. ನಂತರ ಪ್ರಾಯೋಗಿಕ ಮತ್ತು ಮೌಖಿಕ ಪರೀಕ್ಷೆ ಎದುರಿಸಬೇಕಾಗುತ್ತದೆ.