Karnataka High Court 
ಸುದ್ದಿಗಳು

ರಾಜ್ಯ ಎಸ್‌ಸಿ/ಎಸ್‌ಟಿ ಆಯೋಗದ ಅಧ್ಯಕ್ಷರ ನೇಮಕಕ್ಕೆ ಹೊರಮಿತಿ ನಿಗದಿಗೊಳಿಸಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ಹಿರಿಯ ಸಿವಿಲ್‌ ನ್ಯಾಯಾಧೀಶರಿಗೆ ಪದೋನ್ನತಿ ಆದೇಶ ಹೊರಡಿಸಿದ ಬಳಿಕ ಎಸ್‌ಸಿ/ಎಸ್‌ಟಿ ಕಾಯಿದೆ ಅಡಿ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯಗಳಲ್ಲಿ ಖಾಲಿ ಇರುವ ನ್ಯಾಯಾಧೀಶರ ಹುದ್ದೆ ಭರ್ತಿ ಮಾಡಲಾಗುವುದು ಎಂದು ರಾಜ್ಯ ಸರ್ಕಾರವು ಭರವಸೆ ನೀಡಿದೆ.

Bar & Bench

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗಕ್ಕೆ (ಎಸ್‌ಸಿ/ಎಸ್‌ಟಿ ಆಯೋಗ) ಅಧ್ಯಕ್ಷರನ್ನು ನೇಮಿಸುವ ಸಂಬಂಧ ಕಾಲಾವಧಿಯ ಹೊರಮಿತಿ ನಿಗದಿಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಸೋಮವಾರ ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದ್ದು, ಅದರೊಳಗೆ ಹುದ್ದೆ ಭರ್ತಿ ಮಾಡುವಂತೆ ಸೂಚಿಸಿದೆ.

ಎಸ್‌ಸಿ/ಎಸ್‌ಟಿ ಕಾಯಿದೆಯ ವಿವಿಧ ನಿಬಂಧನೆ ಮತ್ತು ನಿಯಮಗಳನ್ನು ವ್ಯವಸ್ಥಿತವಾಗಿ ಜಾರಿಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ವಿಶ್ವಜಿತ್‌ ಶೆಟ್ಟಿ ಅವರಿದ್ದ ವಿಭಾಗೀಯ ಪೀಠವು “ಮುಂದಿನ ವಿಚಾರಣೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರವು ನಿರ್ದಿಷ್ಟ ಅವಧಿಯೊಳಗೆ ಎಸ್‌ಸಿ/ಎಸ್‌ಟಿ ಆಯೋಗದ ಅಧ್ಯಕ್ಷರ ನೇಮಕಾತಿ ಮಾಡುವ ಸಂಬಂಧ ಕಾಲಾವಧಿಯ ಹೊರಮಿತಿಯ ಕುರಿತು ಹೇಳಿಕೆ ನೀಡಬೇಕು.ಆಯೋಗದಲ್ಲಿ ಖಾಲಿ ಹುದ್ದೆಗಳು ಇದ್ದರೆ ಅವುಗಳ ಭರ್ತಿಯ ಕುರಿತೂ ಮಾಹಿತಿ ನೀಡಬೇಕು” ಎಂದು ಆದೇಶ ಮಾಡಿದೆ. ಡಿಸೆಂಬರ್‌ 8ಕ್ಕೆ ವಿಚಾರಣೆ ಮುಂದೂಡಲಾಗಿದೆ.

ರಾಜ್ಯ ಸರ್ಕಾರವು ಹಿರಿಯ ಸಿವಿಲ್‌ ನ್ಯಾಯಾಧೀಶರುಗಳಿಗೆ ಪದೋನ್ನತಿ ನೀಡಿದ ತಕ್ಷಣವೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯಿದೆ – 1989ರ ಅಡಿ ವಿಶೇಷ ನ್ಯಾಯಾಲಯಗಳಲ್ಲಿ ಖಾಲಿ ಇರುವ ನ್ಯಾಯಾಧೀಶರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ನ್ಯಾಯಾಲಯಕ್ಕೆ ರಿಜಿಸ್ಟ್ರಾರ್‌ ಜನರಲ್‌ (ನ್ಯಾಯಿಕ) ಭರವಸೆ ನೀಡಿದರು.

ಹಿಂದಿನ ವಿಚಾರಣೆಯ ಸಂದರ್ಭದಲ್ಲಿ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ಖಾಲಿ ಇರುವ ಜಿಲ್ಲಾ ನ್ಯಾಯಾಧೀಶರ ಹುದ್ದೆ ಮತ್ತು ಎಸ್‌ಸಿ/ಎಸ್‌ಟಿ ಕಾಯಿದೆ ಅಡಿ ವಿಶೇಷ ನ್ಯಾಯಾಲಯಗಳಲ್ಲಿ ಬಾಕಿ ಇರುವ ನ್ಯಾಯಾಧೀಶರ ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ಕೈಗೊಂಡಿರುವ ಕ್ರಮಗಳನ್ನು ವಿವರಿಸಿ ವರದಿ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿತ್ತು. ನ್ಯಾಯಾಲಯದ ಹಿಂದಿನ ಆದೇಶಕ್ಕೆ ಸಂಬಂಧಿಸಿದಂತೆ ಪಾಲನಾ ವರದಿಯನ್ನು ರಾಜ್ಯ ಸರ್ಕಾರವು ಪೀಠಕ್ಕೆ ಸಲ್ಲಿಸಿಲ್ಲ ಎಂದು ಹಿರಿಯ ವಕೀಲ ಜೆಯ್ನಾ ಕೊಠಾರಿ ಗಮನಸೆಳೆದರು.

ಎಸ್‌ಸಿ/ಎಸ್‌ಟಿ ಕಾಯಿದೆ ಅಡಿ ರಾಜ್ಯದಲ್ಲಿ ದಾಖಲಿಸಲಾಗಿರುವ ಪ್ರಕರಣದ ದಾಖಲೆಯ ಪಟ್ಟಿಯನ್ನು ದಿನದಂತ್ಯಕ್ಕೆ ಸಲ್ಲಿಸಲಾಗುವುದು ಎಂದು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಪೀಠಕ್ಕೆ ತಿಳಿಸಿದರು. ರಾಜ್ಯದಲ್ಲಿ ಎಸ್‌ಸಿ/ಎಸ್‌ಟಿ ಕಾಯಿದೆ ಅಡಿ ದಾಖಲಿಸಲಾಗಿರುವ, ಬಾಕಿ ಇರುವ ಪ್ರಕರಣಗಳ ದಾಖಲೆ ಮತ್ತು ಎಸ್‌ಸಿ/ಎಸ್‌ಟಿ ಕಾಯಿದೆ ಅಡಿ ದೂರು ದಾಖಲಿಸಿ ದೋಷಮುಕ್ತ/ಪಾರು/ಅಪರಾಧಿ ಎಂದು ಸಾಬೀತಾದ ದಾಖಲೆಯ ಪಟ್ಟಿಯನ್ನು ಸಲ್ಲಿಸುವಂತೆ ಹಿಂದಿನ ವಿಚಾರಣೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರಕ್ಕೆ ಪೀಠ ಆದೇಶಿಸಿತ್ತು.