<div class="paragraphs"><p>Karnataka HC and CBI</p></div>

Karnataka HC and CBI

 
ಸುದ್ದಿಗಳು

ಗಣಿಗಾರಿಕೆಗೆ ಅರಣ್ಯ ಭೂಮಿ ಮಂಜೂರು: ಸಿಬಿಐ ತನಿಖೆಗೆ ಆದೇಶಿಸುವುದಾಗಿ ಹೈಕೋರ್ಟ್‌ ಹೇಳಿದ್ದೇಕೆ?

Siddesh M S

ಮೀಸಲು ಅರಣ್ಯ ಭೂಮಿ ಎಂದು ಗೊತ್ತಿದ್ದರೂ ಅದನ್ನು ಗಣಿಗಾರಿಕೆ ನಡೆಸಲು ಗುತ್ತಿಗೆ (ಲೀಸ್‌) ನೀಡುವ ಮೂಲಕ ಪ್ರಮಾದ ಎಸಗಲಾಗಿದೆ. ಹೀಗಿದ್ದೂ, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಂಡಿಲ್ಲವೇಕೆ? ಹೀಗಾಗಿ ಪ್ರಕರಣವನ್ನು ಕೇಂದ್ರೀಯ ತನಿಖಾ ದಳದ (ಸಿಬಿಐ) ತನಿಖೆಗೆ ಒಪ್ಪಿಸುತ್ತೇವೆ ಎಂದು ಈಚೆಗೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಮೌಖಿಕವಾಗಿ ಚಳಿ ಬಿಡಿಸಿತು.

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಕೆಂಕೆರೆ ಗ್ರಾಮದಲ್ಲಿನ ಸರ್ವೆ ನಂ. 12 ಮತ್ತು 14ರಲ್ಲಿನ ಭೂಮಿಯು ಅರಣ್ಯ ಅಥವಾ ಕಂದಾಯ ಭೂಮಿಯೋ ಎಂಬುದನ್ನು ತಿಳಿಯಲು ಪ್ರತಿವಾದಿಗಳ ಜಂಟಿ ಸರ್ವೆಗೆ ಆದೇಶಿಸಬೇಕು ಎಂದು ವಾಣಿ ವಿಲಾಸ್‌ ಸಿಮೆಂಟ್ಸ್‌ ಪ್ರೈವೇಟ್‌ ಲಿಮಿಟೆಡ್‌ ವ್ಯವಸ್ಥಾಪಕ ನಿರ್ದೇಶಕ ಪವನ್‌ ರಾಮಸ್ವಾಮಿ ಅವರು ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“ರಾಜ್ಯ ಸರ್ಕಾರವು ಅಧಿಕಾರಿಗಳ ಪರವಾಗಿದೆಯೋ ಅಥವಾ ಅರ್ಜಿದಾರರ ಪರವಾಗಿದೆಯೋ? ಈ ಪ್ರಕರಣದಲ್ಲಿ ಯಾರೆಲ್ಲಾ ಇದ್ದಾರೆ. ಯಾರಿಗೆ ಹೇಗೆ ಸಂಬಂಧವಿದೆ? ಅರಣ್ಯ ಭೂಮಿಯನ್ನು ಹೇಗೆ ಗುತ್ತಿಗೆಗೆ ಪಡೆಯಲಾಗಿದೆ? ಇದರ ಹಿಂದೆ ಯಾರೆಲ್ಲರ ಪ್ರಭಾವ, ಇನ್ನೂ ಏನೇನೋ ಇರಬಹುದು. ಕೆಲವು ದೊಡ್ಡವರು ಇದರಲ್ಲಿ ಭಾಗಿಯಾಗಿರಬಹುದು” ಎಂಬುದನ್ನು ತಿಳಿಯಬೇಕಿದೆ ಎಂದು ಪೀಠ ಹೇಳಿದೆ.

“ರಾಜ್ಯ ಸರ್ಕಾರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಹೊಣೆ ನಿಗದಿಪಡಿಸಲಿ. ತಪ್ಪಿತಸ್ಥರಿಗೆ ಏನು ಶಿಕ್ಷೆ ನೀಡುತ್ತೇವೆ ಎಂಬುದರ ಪ್ರಸ್ತಾವ ಸಲ್ಲಿಸಲಿ. ಇಲ್ಲವಾದರೆ, ನಾವು ತನಿಖೆಗೆ ಆದೇಶಿಸುತ್ತೇವೆ. ನಾವು ತನಿಖೆಗೆ ಆದೇಶಿಸಿದರೆ ಏನಾಗುತ್ತದೆ ಎಂಬುದು ಸರ್ಕಾರಕ್ಕೆ ಗೊತ್ತಿದೆ. ಯಾವುದು ಸರಿ ಮತ್ತು ಯಾವುದು ತಪ್ಪು ಎಂಬುದನ್ನು ನಾವು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುತ್ತೇವೆ. ಸರ್ಕಾರ ದೋಷ ಸರಿಪಡಿಸಿಕೊಳ್ಳಲು, ಕೆಲಸದಲ್ಲಿ ಸುಧಾರಣೆ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದೆವು. ಆದರೆ, ಅದು ಅವರಿಗೆ ಅರ್ಥವಾಗುತ್ತಿಲ್ಲ” ಎಂದು ಪೀಠವು ಅಸಮಾಧಾನ ವ್ಯಕ್ತಪಡಿಸಿತು.

ಪ್ರಕರಣದ ಹಿನ್ನೆಲೆ

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಕೆಂಕೆರೆ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಸರ್ವೆ ನಂ. 10, 12, 13, 14, 15, 17/2, 18 ಮತ್ತು 19 ರಲ್ಲಿನ 525 ಎಕರೆ ಭೂಮಿಯನ್ನು 2002ರ ಫೆಬ್ರವರಿ 4ರಂದು ವಾಣಿ ವಿಲಾಸ್‌ ಸಿಮೆಂಟ್ಸ್‌ಗೆ ಗಣಿಗಾರಿಕೆ ನಡೆಸಲು ಗುತ್ತಿಗೆ ನೀಡಲಾಗಿತ್ತು. 2010ರ ಜನವರಿ 30ರಂದು ಚಿತ್ರದುರ್ಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯು ಸರ್ವೆ ನಂ. 12 ಮತ್ತು 14ರಲ್ಲಿನ ಭೂಮಿಯು ಜಾನಕಲ್‌ ಮೀಸಲು ಅರಣ್ಯ ಪ್ರದೇಶದ ವ್ಯಾಪ್ತಿಗೆ ಒಳಪಡಲಿದ್ದು, ಅರಣ್ಯ ಸಂರಕ್ಷಣಾ ಕಾಯಿದೆ 1980ರ ಅಡಿ ಅನುಮತಿ ಪಡೆಯುವವರೆವಿಗೂ ಗಣಿಗಾರಿಕೆ ನಡೆಸಬಾರದು ಎಂದು ಆದೇಶ ಮಾಡಿದ್ದಾರೆ. ಹೀಗಾಗಿ, ವಾಣಿ ವಿಲಾಸ್‌ ಸಿಮೆಂಟ್ಸ್‌ ನ್ಯಾಯಾಲಯದ ಕದತಟ್ಟಿದೆ.

ಅರ್ಜಿದಾರರ ಕೋರಿಕೆ

ಪ್ರತಿವಾದಿಗಳಾದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಕಾರ್ಯದರ್ಶಿ, ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಸಂರಕ್ಷಣಾ ಅಧಿಕಾರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕ, ಚಿತ್ರದುರ್ಗ ಜಿಲ್ಲಾಧಿಕಾರಿ, ಜಿಲ್ಲಾ ಅರಣ್ಯ ಉಪಸಂರಕ್ಷಣಾಧಿಕಾರಿ, ಹೊಸದುರ್ಗ ತಹಶೀಲ್ದಾರ್‌ ಅವರನ್ನು ಒಳಗೊಂಡು ಜಂಟಿ ಸರ್ವೆ ನಡೆಸುವ ಮೂಲಕ ಆಕ್ಷೇಪಾರ್ಹ ಸರ್ವೆ ನಂ. 12 ಮತ್ತು 14 ಅರಣ್ಯ ಅಥವಾ ಕಂದಾಯ ಭೂಮಿಯೋ ಎಂಬುದನ್ನು ಪತ್ತೆ ಮಾಡಬೇಕು. 2019ರ ಜೂನ್‌ 10ರಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕರು ಹೊರಡಿಸಿರುವ ಷೋಕಾಸ್‌ ನೋಟಿಸ್‌ ವಜಾ ಮಾಡಬೇಕು. ಸರ್ವೆ ನಂ. 12 ಮತ್ತು 14ರ ಮ್ಯುಟೇಷನ್‌ ಅನ್ನು ಏಕಪಕ್ಷೀಯವಾಗಿ ಅರಣ್ಯ ಇಲಾಖೆಗೆ ಬದಲಾಯಿಸಿರುವುದನ್ನು ಕಾನೂನುಬಾಹಿರ ಎಂದು ಘೋಷಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಅರ್ಜಿದಾರ- ಪ್ರತಿವಾದಿಗಳ ವಾದ

ವಾಣಿ ವಿಲಾಸ್‌ ಸಿಮೆಂಟ್ಸ್‌ ಪ್ರತಿನಿಧಿಸಿರುವ ಹಿರಿಯ ವಕೀಲ ವಿಕ್ರಂ ಹುಯಿಲಗೋಳ ಅವರು “2001ರ ಮಾರ್ಚ್‌ 21ರಂದು ಚಿತ್ರದುರ್ಗ ಜಿಲ್ಲಾಧಿಕಾರಿಯು ಆಕ್ಷೇಪಾರ್ಹವಾಗಿರುವ ಭೂಮಿಯು ಖರಾಬು ಮತ್ತು ಬಂಜರು ಭೂಮಿ ಎಂದು ತಿಳಿಸಿದ್ದಾರೆ. ಉಪ ವಿಭಾಗಾಧಿಕಾರಿ ಅವರು ಸಂಬಂಧಿತ ಭೂಮಿಗೆ ಗಣಿಗಾರಿಕೆ ಪರವಾನಗಿ ನೀಡಬಹುದು ಎಂದು ತಮ್ಮ ವರದಿಯಲ್ಲಿ ಹೇಳಿದ್ದು, ಯಾವುದೇ ಆಕ್ಷೇಪಣೆ ಇಲ್ಲ ಎಂದಿದ್ದಾರೆ. ಆಕ್ಷೇಪಾರ್ಹವಾದ ಭೂಮಿಯ ಗುತ್ತಿಗೆ ನೀಡುವಾಗ ಅರಣ್ಯ ಇಲಾಖೆಯ ಯಾವುದೇ ಅನುಮತಿ ಅಗತ್ಯವಿರಲಿಲ್ಲ. ಹೀಗಾಗಿ, ಆಕ್ಷೇಪಾರ್ಹ ಭೂಮಿಯು ಅರಣ್ಯ ಅಥವಾ ಕಂದಾಯ ಇಲಾಖೆಗೆ ಸೇರಿದೆಯೋ ಎಂಬುದನ್ನು ತಿಳಿಯಲು ಜಂಟಿ ಸರ್ವೆ ನಡೆಸಬೇಕು” ಎಂದು ವಾದಿಸಿದರು. ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಜಂಟಿ ಸರ್ವೆಗೆ ಕೋರಿದೆ.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿರುವ ವಕೀಲ ಎಸ್‌ ಎಸ್‌ ಮಹೇಂದ್ರ ಅವರು “ಹಿಂದಿನ ನಿರ್ದೇಶನದ ಹಿನ್ನೆಲೆಯಲ್ಲಿ ಆಕ್ಷೇಪಾರ್ಹವಾದ ಅರಣ್ಯ ಭೂಮಿಯನ್ನು ಗುತ್ತಿಗೆ ನೀಡಲಾಗಿದೆ. ಅರಣ್ಯ ಇಲಾಖೆಗೆ ಸೇರಿದ ಭೂಮಿಯನ್ನು ಗುತ್ತಿಗೆ ನೀಡಬಾರದಿತ್ತು” ಎಂದು ಪೀಠಕ್ಕೆ ತಿಳಿಸಿದರು.

ಪೀಠದ ಮುಂದಿರುವ ಪ್ರಶ್ನೆ

ಅರಣ್ಯ ಭೂಮಿ ಎಂದು ಸ್ಪಷ್ಟಪಡಿಸಲಾಗಿರುವ ಭೂಮಿಯನ್ನು ಗಣಿಗಾರಿಕೆಗೆ ಗುತ್ತಿಗೆ ನೀಡುವುದಾದರೂ ಹೇಗೆ? ಈ ನಿಯಮ ಉಲ್ಲಂಘಿಸಿದವರ ವಿರುದ್ಧ ಯಾವ ಕ್ರಮಕೈಗೊಳ್ಳಲಾಗಿದೆ? ಸರಿಯಾಗಿ ಪರಿಶೀಲಿಸದೆ ಹಾಗೂ ಅರಣ್ಯ ಇಲಾಖೆಯ ಅಭಿಪ್ರಾಯ ಪಡೆಯದೇ ಗುತ್ತಿಗೆ ನೀಡಿದವರು ಯಾರು? ಎಂಬ ಪ್ರಶ್ನೆಗಳು ಪೀಠದ ಮುಂದಿವೆ. ಸಂಬಂಧಿತ ಪ್ರಾಧಿಕಾರದ ಗಮನಕ್ಕೆ ವಾಸ್ತವಿಕ ವಿಚಾರಗಳನ್ನು ತಂದರೂ ಏಕೆ ಯಾವುದೇ ಕ್ರಮಕೈಗೊಂಡಿಲ್ಲ. ಅರ್ಜಿದಾರರು ಗುತ್ತಿಗೆ ಪಡೆದಿರುವ ಭೂಮಿಯಲ್ಲಿ ಯಾವುದೇ ಗಣಿಗಾರಿಕೆ ನಡೆಸದಿದ್ದರೂ ಅವಧಿ ಮುಗಿದ ಗುತ್ತಿಗೆ ಎಂದು ಏಕೆ ಘೋಷಿಸಬಾರದು ಎಂಬುದನ್ನು ವಿವರಿಸುವಂತೆ ಅರ್ಜಿದಾರರಿಗೆ 2019ರ ಜೂನ್‌ 10ರಂದು ಕಾರಣ ಕೇಳಿರುವ ಶೋಕಾಸ್‌ ನೋಟಿಸ್‌ ಹೇಗೆ ಜಾರಿ ಮಾಡಲಾಗಿದೆ ಎಂದು ಪೀಠವು ಪ್ರಶ್ನಿಸಿದೆ.

ಶೋಕಾಸ್ ನೋಟಿಸ್‌ ನೋಡಿದರೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಇನ್ನೂ ಆಕ್ಷೇಪಾರ್ಹವಾದ ಭೂಮಿಯನ್ನು ಗುತ್ತಿಗೆ ನೀಡಬಹುದಾದ ಭೂಮಿ ಎಂದು ಪರಿಗಣಿಸಿದಂತಿದೆ. ಹೀಗಾಗಿ, ತನಿಖೆ ನಡೆಸಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಿಸಬೇಕಿದೆ. ಅರಣ್ಯ ಇಲಾಖೆಯನ್ನು ಒಳಗೊಳ್ಳದೇ ಆಕ್ಷೇಪಾರ್ಹವಾದ ಭೂಮಿಯನ್ನು ಗುತ್ತಿಗೆ ನೀಡಲಾಗಿದೆ. ಆ ಬಳಿಕವೂ ತಪ್ಪನ್ನು ತಿದ್ದುಕೊಳ್ಳಲಾಗಿಲ್ಲ ಎಂದು ಪೀಠವು ಅಸಮಾಧಾನ ವ್ಯಕ್ತಪಡಿಸಿದೆ.

ತನಿಖೆಗೆ ಆದೇಶಿಸಲು ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ

ಮೇಲಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅರಣ್ಯ ಅಥವಾ ಬೇರಾವುದೇ ಭೂಮಿಯಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿರುವುದರ ಕುರಿತು ಪ್ರಧಾನ ಕಾರ್ಯದರ್ಶಿ ಅಥವಾ ಕಾರ್ಯದರ್ಶಿ ಶ್ರೇಣಿಯ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಸುವುದಕ್ಕೆ ಸಂಬಂಧಿಸಿದಂತೆ ಸೂಕ್ತ ಆದೇಶ ಹೊರಡಿಸಲು ಮುಖ್ಯ ಕಾರ್ಯದರ್ಶಿಗೆ ನ್ಯಾಯಾಲಯವು ನಿರ್ದೇಶಿಸಿದೆ. ನಿರ್ದಿಷ್ಟ ಕಾಲಮಿತಿಯಲ್ಲಿ ತನಿಖೆ ನಡೆಸಿ, ವಿಸ್ತೃತ ವರದಿಯನ್ನು ನ್ಯಾಯಾಲಯದ ಮುಂದೆ ಮಂಡಿಸಬೇಕು ಎಂದು ಪೀಠವು ಆದೇಶ ಮಾಡಿದ್ದು, ವಿಚಾರಣೆಯನ್ನು ಮಾರ್ಚ್‌ 31ಕ್ಕೆ ಮುಂದೂಡಿದೆ.