Sudarshan TV- UPSC Jihad 
ಸುದ್ದಿಗಳು

"ಯುಪಿಎಸ್‌ಸಿ ಜಿಹಾದ್" ಪ್ರಕರಣದಲ್ಲಿ ಮಧ್ಯಪ್ರವೇಶಕ್ಕೆ ಆಗ್ರಹಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ನಿವೃತ್ತ ಅಧಿಕಾರಿಗಳು

ದ್ವೇಷ ಭಾಷೆಯ ವ್ಯಾಪ್ತಿ ಮತ್ತು ಅರ್ಥದ ಕುರಿತು ಸುಪ್ರೀಂ ಕೋರ್ಟ್ ಅಧಿಕಾರಿಯುತ ಆದೇಶ ಹೊರಡಿಸಿದರೆ ನಾಗರಿಕರು, ಪ್ರಾಧಿಕಾರಗಳು ಮತ್ತು ನ್ಯಾಯಾಲಯಗಳಿಗೆ ಇದಕ್ಕೆ ಸಂಬಂಧಿಸಿದಂತೆ ಸ್ಪಷ್ಟತೆ ದೊರೆಯಲಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

Bar & Bench

ಭಾರತೀಯ ನಾಗರಿಕ ಸೇವೆಗಳಲ್ಲಿ ಹೇಗೆ ಮುಸ್ಲಿಮರು ನುಸುಳಿಸಿದ್ದಾರೆ ಎಂಬ ವಿವಾದಾತ್ಮಕ ಸುದರ್ಶನ್ ಟಿವಿಯ “ಯುಪಿಎಸ್‌ಸಿ ಜಿಹಾದ್” ಕಾರ್ಯಕ್ರಮ ಪ್ರಸಾರಕ್ಕೆ ತಡೆ ವಿಧಿಸುವಂತೆ ಕೋರಿರುವ ಅರ್ಜಿ ವಿಚಾರಣೆಯಲ್ಲಿ ತಮ್ಮನ್ನು ಅರ್ಜಿದಾರರನ್ನಾಗಿ ಮಧ್ಯಪ್ರವೇಶಿಸಲು ಅನುಮತಿ ಕೋರಿ ಮಾಜಿ ನಾಗರಿಕ ಸೇವಾ ಅಧಿಕಾರಿಗಳ ತಂಡ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.

ನಾಗರಿಕ ಸೇವೆಗಳ ಮಾಜಿ ಅಧಿಕಾರಿಗಳಾದ ಅರ್ಜಿದಾರರು ಸಾಂವಿಧಾನಿಕ ನಡವಳಿಕೆ ಗುಂಪಿನ (ಕಾನ್ಸ್ ಸ್ಟಿಟ್ಯೂಷನಲ್ ಕಂಡಕ್ಟ್ ಗ್ರೂಪ್) ಭಾಗವಾಗಿದ್ದಾರೆ. ಹಿರಿಯ ವಕೀಲ ಗೌತಮ್ ಭಾಟಿಯಾ ಹಾಗೂ ಅಡ್ವೊಕೇಟ್ ಆನ್ ರೆಕಾರ್ಡ್ ಅನಸ್ ತನ್ವೀರ್ ಅವರು ಅರ್ಜಿದಾರರ ಪರವಾಗಿ ಮನವಿ ಸಲ್ಲಿಸಿದ್ದು, ದ್ವೇಷ ಭಾಷೆಗೆ ಸಂಬಂಧಿಸಿದಂತೆ ಅಧಿಕಾರಿಯುತ ಆದೇಶ ನೀಡುವಂತೆ ಕೋರಲಾಗಿದೆ.

ಕಳೆದ ವಾರ ಸುಪ್ರೀಂ ಕೋರ್ಟ್ 'ಯುಪಿಎಸ್‌ಸಿ ಜಿಹಾದ್' ಕಾರ್ಯಕ್ರಮದ ಮೇಲೆ ಪೂರ್ವ ಪ್ರಸರಣ ನಿರ್ಬಂಧ ಹೇರಲು ನಿರಾಕರಿಸಿತ್ತು. ಆದರೆ, ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿತ್ತು. ಕಾರ್ಯಕ್ರಮದ ವಿಷಯವು ದೇಶದಲ್ಲಿ ಕೋಮು ದಳ್ಳುರಿಗೆ ಕಾರಣವಾಗಬಹುದು ಎಂದು ಅರ್ಜಿದಾರರು ಆರೋಪಿಸಿದ್ದರು.

ಸದರಿ ಪ್ರಕರಣದಲ್ಲಿ ಎದ್ದಿರುವ ವಾಕ್ ಸ್ವಾತಂತ್ರ್ಯ ಮತ್ತು ಇತರ ಸಾಂವಿಧಾನಿಕ ಮೌಲ್ಯಗಳನ್ನು ಪರಿಗಣಿಸುವ ಇಚ್ಛೆಯನ್ನು ನ್ಯಾಯಾಲಯ ವ್ಯಕ್ತಪಡಿಸಿದೆ. ಇದನ್ನು ಮಾಡುವುದು ನ್ಯಾಯಾಲಯದ ದೃಷ್ಟಿಯಿಂದ ಅಗತ್ಯ ಎಂದು ಮಧ್ಯಪ್ರವೇಶಕಾರರು ಹೇಳಿದ್ದಾರೆ.

ಸೆಪ್ಟೆಂಬರ್ 1ರಂದು ಕಾನ್ಸ್‌ಸ್ಟಿಟ್ಯೂಷನಲ್ ಕಂಡಕ್ಟ್ ಗ್ರೂಪ್‌ನ 91 ಸದಸ್ಯರ ನಿಯೋಗವು ಗೃಹ ಸಚಿವ ಹಾಗೂ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರಿಗೆ ಮನವಿ ಸಲ್ಲಿಸಿದೆ. ಇದರಲ್ಲಿ ಉದ್ದೇಶಿತ ಕಾರ್ಯಕ್ರಮವು “ದೇಶದ ಅತಿದೊಡ್ಡ ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ದ್ವೇಷ ವ್ಯಾಪಿಸಲು ಕಾರಣವಾಗಲಿದೆ. ನಾಗರಿಕ ಸೇವೆಗಳಲ್ಲಿ ಮುಸ್ಲಿಮರ ಪ್ರಾತಿನಿಧ್ಯ ಹೆಚ್ಚಾಗಿದೆ ಎಂಬುದು ಸುಳ್ಳುಗಳಿಂದ ಕೂಡಿದೆ. ಇದರಿಂದ ದೇಶದ ನಾಗರಿಕ ಆಡಳಿತವು ಧಾರ್ಮಿಕ ಬಿಂದುವಿನ ಮೇಲೆ ಇಬ್ಭಾಗವಾಗುವ ಸಾಧ್ಯತೆ ಉಂಟು” ಎಂದು ಹೇಳಿದೆ.

ದ್ವೇಷ ಭಾಷೆಯ ವ್ಯಾಪ್ತಿ ಮತ್ತು ಅರ್ಥದ ಕುರಿತು ಸುಪ್ರೀಂ ಕೋರ್ಟ್ ಅಧಿಕಾರಿಯುತ ಆದೇಶ ಹೊರಡಿಸಿದರೆ ನಾಗರಿಕರು, ಸಂಬಂಧಪಟ್ಟ ಪ್ರಾಧಿಕಾರಗಳು ಮತ್ತು ನ್ಯಾಯಾಲಯಗಳಿಗೆ ಇದಕ್ಕೆ ಸಂಬಂಧಿಸಿದಂತೆ ಸ್ಪಷ್ಟತೆ ದೊರೆಯಲಿದೆ. ಇದರಿಂದ ರಕ್ಷಣೆಯ ವ್ಯಾಪ್ತಿಯೊಳಗೆ ಬರುವ ಹೇಳಿಕೆಗಳು ಮತ್ತು ಅದರ ಹೊರಗಿರುವ ಹೇಳಿಕೆಗಳ ಬಗ್ಗೆ ತಿಳಿಯಲಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

“ಆಡಳಿತ ಪಕ್ಷಕ್ಕೆ ಅನುಕೂಲಕರವಾದ ಅಥವಾ ಯಾವುದಕ್ಕೆ ಸಾರ್ವಜನಿಕ ಒಪ್ಪಿಗೆ ದೊರಯಬಹುದು ಎಂಬುದಕ್ಕೆ ಮಾತ್ರ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಸೀಮಿತವಾಗಿಲ್ಲ. ಅದರಲ್ಲಿ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯ, ಯಥಾರೀತಿ ಸ್ವೀಕೃರಿಸಲ್ಪಟ್ಟ ತಿಳಿವಳಿಕೆಯನ್ನು ಮತ್ತು ಸ್ಥಾಪಿತ ಸಾಮಾಜಿಕ ನಂಬಿಕೆಗಳನ್ನು ಪ್ರಶ್ನಿಸುವ ಸ್ವಾತಂತ್ರ್ಯ ಹಾಗೂ ನೋಯಿಸುವ, ದಿಗ್ಭ್ರಾಂತಗೊಳಿಸುವ ಮತ್ತು ಮಾನಸಿಕವಾಗಿ ಅಲ್ಲಾಡಿಸುವ ಸಂಗತಿಗಳೂ ಇವೆ .”
ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾದ ಮಧ್ಯಪ್ರವೇಶ ಕೋರಿಕೆ ಮನವಿ

“ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ನಿರ್ಬಂಧಗಳನ್ನು ಸಮರ್ಥಿಸಿಕೊಳ್ಳುವ ಗುರುತರ ಹೊರೆ ಸರ್ಕಾರದ ಮೇಲಿದೆ” ಎಂದು ಮಧ್ಯಪ್ರವೇಶಕಾರರು ವಿವರಿಸಿದ್ದಾರೆ.

ದ್ವೇಷ ಭಾಷೆಯ ಅಪರಾಧವು ನಿರ್ದಿಷ್ಟ ವ್ಯಕ್ತಿಗಳಿಗೆ ತೊಂದರೆ ಮಾಡುತ್ತದೆ ಎಂಬುದಲ್ಲ. ಆದರೆ, ಅದು “ನಿರ್ದಿಷ್ಟ ಗುಂಪುಗಳ ಸದಸ್ಯತ್ವ ಹೊಂದಿದ್ದಾರೆ ಎಂಬ ಕಾರಣಕ್ಕೆ ಅವರ ಸಾಮಾಜಿಕ ನಿಲುವನ್ನು ಕೇಂದ್ರೀಕರಿಸಿ ಅವರ ವಿರುದ್ಧ ಹಗೆತನ, ತಾರತಮ್ಯ ಮತ್ತು ಹಿಂಸಾಚಾರ ನಡೆಸಲಾಗುತ್ತದೆ" ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

“ದ್ವೇಷ ಭಾಷೆ ಮತ್ತು ಘಾಸಿಗೊಳಿಸುವ ಭಾಷೆಯ ನಡುವೆ ಸ್ಪಷ್ಟ ರೇಖೆ ಕಾಣಸಿಗುವುದಿಲ್ಲ. ಹಾಗಾಗಿ ಪ್ರತಿ ಪ್ರಕರಣಕ್ಕೂ ನ್ಯಾಯಿಕ ವಿವೇಚನೆಯನ್ನು ಬಳಸುವುದು ಅಗತ್ಯ.”
ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾದ ಮಧ್ಯಪ್ರವೇಶ ಕೋರಿಕೆ ಮನವಿ