ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಗದೀಶ್ ಸಿಂಗ್ ಖೇಹರ್, ಹಿರಿಯ ವಕೀಲ ಸಿ.ಎಸ್.ವೈದ್ಯನಾಥನ್ ಅವರು ಈ ಬಾರಿ ಪದ್ಮ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ನ್ಯಾ. ಖೇಹರ್ ಅವರಿಗೆ ಪದ್ಮವಿಭೂಷಣ ಹಾಗೂ ವೈದ್ಯನಾಥನ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ರಾಷ್ಟ್ರಪತಿಗಳು ಗಣರಾಜ್ಯೋತ್ಸವ ಮುನ್ನಾದಿನವಾದ ಶನಿವಾರ ಅಂಕಿತ ಹಾಕಿದರು.
ನ್ಯಾಯಮೂರ್ತಿ ಖೇಹರ್ ಅವರು 1977ರಲ್ಲಿ ಚಂಡೀಗಢದ ಪಂಜಾಬ್ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪೂರ್ಣಗೊಳಿಸಿದರು ಮತ್ತು ನಂತರ ಅದೇ ವಿಶ್ವವಿದ್ಯಾಲಯದಿಂದ 1979ರಲ್ಲಿ ಎಲ್‌ಎಲ್‌ಎಂ ಪದವಿ ಪಡೆದರು.
1979 ರಲ್ಲಿ ವಕೀಲರಾಗಿ ಸೇವೆ ಆರಂಭಿಸಿದ ಅವರು ಮುಖ್ಯವಾಗಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್, ಹಿಮಾಚಲ ಪ್ರದೇಶ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ಪ್ರಾಕ್ಟೀಸ್ ಮಾಡಿದರು. ಅವರನ್ನು ಹಿರಿಯ ವಕೀಲರಾಗಿ ನೇಮಿಸಿದ್ದು ಫೆಬ್ರವರಿ 1995ರಲ್ಲಿ.
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ಫೆಬ್ರವರಿ 8, 1999 ರಂದು ನೇಮಕಗೊಂಡ ಅವರು ಉತ್ತರಾಖಂಡ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನವೆಂಬರ್ 29, 2009ರಂದು ಪದೋನ್ನತಿ ಪಡೆದರು. ಆಗಸ್ಟ್ 2010 ರಲ್ಲಿ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ವರ್ಗಾವಣೆಗೊಂಡರು. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಅವರು ಅಧಿಕಾರ ವಹಿಸಿಕೊಂಡಿದ್ದು ಸೆಪ್ಟೆಂಬರ್ 13, 2011ರಂದು. ಜನವರಿ 4, 2017 ರಂದು ಭಾರತದ ಮುಖ್ಯ ನ್ಯಾಯಮೂರ್ತಿಯಾದ ಅವರು ನಿವೃತ್ತರಾದದ್ದು ಆಗಸ್ಟ್ 27, 2017ರಲ್ಲಿ.
ಈ ವರ್ಷ, ರಾಷ್ಟ್ರಪತಿಗಳು ಒಟ್ಟು 139 ಪದ್ಮ ಪ್ರಶಸ್ತಿಗಳನ್ನು ಅನುಮೋದಿಸಿದರು, ಇದರಲ್ಲಿ 7 ಪದ್ಮ ವಿಭೂಷಣ, 19 ಪದ್ಮಭೂಷಣ ಹಾಗೂ 113 ಪದ್ಮಶ್ರೀ ಪುರಸ್ಕಾರ ಸೇರಿವೆ. ಪ್ರಶಸ್ತಿಗಳನ್ನು ಸಾಮಾನ್ಯವಾಗಿ ಪ್ರತಿ ವರ್ಷ ಮಾರ್ಚ್ ಇಲ್ಲವೇ ಏಪ್ರಿಲ್‌ನಲ್ಲಿ ರಾಷ್ಟ್ರಪತಿ ಭವನದಲ್ಲಿ ಭಾರತದ ರಾಷ್ಟ್ರಪತಿಗಳು ಪ್ರದಾನ ಮಾಡುತ್ತಾರೆ.
[ಪದ್ಮ ಪ್ರಶಸ್ತಿ ಪುರಸ್ಕೃತ 2025ನೇ ಸಾಲಿನ ಎಲ್ಲಾ ಕ್ಷೇತ್ರಗಳ ಪದ್ಮ ಪ್ರಶಸ್ತಿ ಪುರಸ್ಕೃತರ ಪಟ್ಟಿಗಾಗಿ ಕೆಳಗೆ ಕ್ಲಿಕ್ಕಿಸಿ]