BJP MP Anantkumar Hegde and Karnataka HC  
ಸುದ್ದಿಗಳು

ವಿದೇಶದಲ್ಲಿ ಓದುತ್ತಿರುವ ಪುತ್ರ ಅಶುತೋಷ್‌ನನ್ನು ಗಲಾಟೆ ಪ್ರಕರಣದಿಂದ ಕೈಬಿಡಲು ಬಿಜೆಪಿಯ ಅನಂತಕುಮಾರ್‌ ಹೆಗಡೆ ಮನವಿ

ಅಶುತೋಷ್‌ ವಿದೇಶದಲ್ಲಿ ವ್ಯಾಸಾಂಗ ಮಾಡುತ್ತಿದ್ದು, ಹಾಲಿ ಪ್ರಕರಣವು ಅವರ ಪಾಸ್‌ಪೋರ್ಟ್‌ ಪಡೆಯುವುದಕ್ಕೆ ಅಡ್ಡಿಯಾಗಿದೆ. ಹೀಗಾಗಿ, ಅವರ ವಿರುದ್ಧದ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿದ ಅನಂತಕುಮಾರ್‌ ಹೆಗಡೆ ಪರ ವಕೀಲ ಪವನ್‌ಚಂದ್ರ ಶೆಟ್ಟಿ.

Bar & Bench

“ಪುತ್ರ ಅಶುತೋಷ್‌ ಹೆಗಡೆ ಅವರು ವಿದೇಶದಲ್ಲಿ ವ್ಯಾಸಾಂಗ ಮಾಡುತ್ತಿದ್ದು, ಗಲಾಟೆ ಪ್ರಕರಣದಿಂದಾಗಿ ಅವರು ಪಾಸ್‌ಪೋರ್ಟ್‌ ಪಡೆಯಲು ಸಮಸ್ಯೆಯಾಗಿದೆ. ಹೀಗಾಗಿ, ಅವರನ್ನು ಕೈಬಿಡಬೇಕು” ಎಂದು ಬಿಜೆಪಿ ನಾಯಕ ಹಾಗೂ ಮಾಜಿ ಸಂಸದ ಅನಂತಕುಮಾರ್‌ ಹೆಗಡೆ ಪರ ವಕೀಲರು ಕರ್ನಾಟಕ ಹೈಕೋರ್ಟ್‌ಗೆ ಈಚೆಗೆ ಮನವಿ ಮಾಡಿದರು.

ಬೆಂಗಳೂರಿನ ದಾಬಸ್‌ಪೇಟೆ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದತಿ ಕೋರಿ ಅನಂತಕುಮಾರ್‌ ಹೆಗಡೆ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಸುನೀಲ್‌ ದತ್‌ ಯಾದವ್‌ ಅವರ ಏಕಸದಸ್ಯ ಪೀಠ ನಡೆಸಿತು.

ಅನಂತಕುಮಾರ್‌ ಹೆಗಡೆ ಪ್ರತಿನಿಧಿಸಿದ್ದ ವಕೀಲ ಪವನ್‌ಚಂದ್ರ ಶೆಟ್ಟಿ ಅವರು “ವಿದೇಶದಿಂದ ಬಂದಿದ್ದ ಪುತ್ರ ಅಶುತೋಷ್‌ ಹೆಗಡೆ ಅವರು ತನ್ನ ಅಜ್ಜಿ-ಅವರನ್ನು ನೋಡಲು ಅನಂತಕುಮಾರ್‌ ಜೊತೆ ಯಲ್ಲಾಪುರಕ್ಕೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಚತ್ತೀಸಗಢ ರಾಜ್ಯದಲ್ಲಿ ನೋಂದಣಿಯಾಗಿರುವ ಇನ್ನೋವಾ ಕ್ರಿಸ್ಟಾ ಕಾರು ತಮ್ಮ ಕಾರನ್ನು ಹಿಂದಿಕ್ಕಲು ಪ್ರಯತ್ನಿಸಿತ್ತು. ಒಮ್ಮೆ ಅನಂತಕುಮಾರ್‌ ಕಾರಿಗೂ ಡಿಕ್ಕಿ ಹೊಡೆಯಿತು. ಈ ಹಿನ್ನೆಲೆಯಲ್ಲಿ ಮಾಜಿ ಸಂಸದರ ಅಂಗ ರಕ್ಷಕ ಮತ್ತು ಚಾಲಕ ದೂರುದಾರರ ಜೊತೆ ವಾಗ್ವಾದ ನಡೆಸಿದ್ದರು. ಇದರಲ್ಲಿ ಅನಂತಕುಮಾರ್‌ ಪಾತ್ರವಾಗಲಿ, ಅವರ ಪುತ್ರ ಅಶುತೋಷ್‌ ಪಾತ್ರವಾಗಲಿ ಇಲ್ಲ” ಎಂದರು.

“ಇನ್ನೋವಾ ಕ್ರಿಸ್ಟಾ ಕಾರ್‌ನ ಹಿಂದಿನ ಸೀಟಿನಲ್ಲಿ ಅಶುತೋಷ್‌ ಕುಳಿತಿದ್ದರು. ಘಟನಾ ಸ್ಥಳಕ್ಕೆ ಅವರು ಬಂದೇ ಇರಲಿಲ್ಲ. ಮಧ್ಯದ ಸೀಟುಗಳನ್ನು ತೆಗೆದರೆ ಮಾತ್ರ ಅದರಿಂದ ಹಿಂದಿನ ಸೀಟಿನಲ್ಲಿರುವವರು ಇಳಿಯಲು ಸಾಧ್ಯ. ಹೀಗಿದ್ದರೂ ತನಿಖೆಯ ಸಂದರ್ಭದಲ್ಲಿ ತನಿಖಾಧಿಕಾರಿಯು ಅಶುತೋಷ್‌ ಅವರನ್ನು ಪ್ರಕರಣದಲ್ಲಿ ಸಿಲುಕಿಸಿದ್ದಾರೆ” ಎಂದು ಆಕ್ಷೇಪಿಸಿದರು.

“ಸಕ್ಷಮ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಅನಂತಕುಮಾರ್‌ ಅಥವಾ ಅಶುತೋಷ್‌ ಬಗ್ಗೆ ಒಂದೇ ಒಂದು ಸಾಲಿನ ಉಲ್ಲೇಖವಿಲ್ಲ. ಅಂಗ ರಕ್ಷಕ ಮತ್ತು ಚಾಕನ ಮೇಲೆ ಆರೋಪ ಮಾಡಲಾಗಿದೆ. ಘಟನೆ ನಡೆದಾಗ ಅನಂತ ಕುಮಾರ್‌ ಮತ್ತು ಅಶುತೋಷ್‌ ಕಾರಿನಿಂದ ಕೆಳಗೆ ಇಳಿದೇ ಇಲ್ಲ. ಅಶುತೋಷ್‌ ವಿರುದ್ಧ ದೂರು, ಎಫ್‌ಐಆರ್‌, ಆರೋಪ ಯಾವುದೂ ಇಲ್ಲ. ಅಶುತೋಷ್‌ ವಿದೇಶದಲ್ಲಿ ವ್ಯಾಸಾಂಗ ಮಾಡುತ್ತಿದ್ದು, ಹಾಲಿ ಪ್ರಕರಣವು ಅವರ ಪಾಸ್‌ಪೋರ್ಟ್‌ ಪಡೆಯುವುದಕ್ಕೆ ಅಡ್ಡಿಯಾಗಿದೆ. ಹೀಗಾಗಿ, ಅವರ ವಿರುದ್ಧದ ಪ್ರಕರಣ ರದ್ದುಪಡಿಸಬೇಕು” ಎಂದು ಕೋರಿದರು.

ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ “ಸದ್ಯಕ್ಕೆ ಆರೋಪಪಟ್ಟಿಯ ಪ್ರತಿ ಇಲ್ಲ. ಮುಂದಿನ ವಿಚಾರಣೆ ವೇಳೆಗೆ ನಾಲ್ಕನೇ ಆರೋಪಿ ಅಶುತೋಷ್‌ಗೆ ಸಂಬಂಧಿಸಿದಂತೆ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ಅನಂತಕುಮಾರ್‌ ಹೆಗಡೆ, ಅಂಗ ರಕ್ಷಕ ಮತ್ತು ಕಾರಿನ ಚಾಲಕ ಹಲ್ಲೆ ನಡೆಸುತ್ತಿರುವ ವಿಡಿಯೊ ಇದೆ” ಎಂದರು.

ದೂರುದಾರ ಸೈಫ್‌ ಖಾನ್‌ ಪರ ವಕೀಲೆ ನವ್ಯಾಶ್ರೀ ಅವರು ವಿಚಾರಣೆಯಲ್ಲಿ ಭಾಗಿಯಾಗಿದ್ದರು. ಎಲ್ಲರ ವಾದ ಆಲಿಸಿದ ನ್ಯಾಯಾಲಯವು ಏಪ್ರಿಲ್‌ ೧೬ರ ವಿಚಾರಣೆಯಂದು ಅಶುತೋಷ್‌ ಮನವಿ ಪರಿಗಣಿಸುವುದಾಗಿ ಹೇಳಿ, ವಿಚಾರಣೆ ಮುಂದೂಡಿತು.

ಪ್ರಕರಣದ ಹಿನ್ನೆಲೆ: ತುಮಕೂರಿನಲ್ಲಿ ಮದುಗೆ ಹೋಗಿ, ಏಳು ಮಂದಿ ಇನ್ನೋವಾ ಕಾರಿನಲ್ಲಿ ಹಳೇ ನಿಜಗಲ್‌ ಬಳಿ ಬರುತಿದ್ದಾಗ ಹಿಂದಿನಿಂದ ಅತಿವೇಗವಾಗಿ ಚಾಲನೆ ಮಾಡಿಕೊಂಡು ಬಂದ ಕಾರಿನ ಚಾಲಕ ನಮ್ಮ ಕಾರನ್ನು ನಿಲ್ಲಿಸುವಂತೆ ಹೇಳಿದರು. ಕಾರು ನಿಲುಗಡೆ ಮಾಡುತ್ತಿದ್ದಂತೆಯೇ ಮುಖಕ್ಕೆ ಗುದ್ದಿದರು. ಮತ್ತೊಬ್ಬ ವ್ಯಕ್ತಿ ನಮ್ಮನ್ನು ಕಾರಿನಿಂದ ಹೊರಗೆ ಎಳೆದುಕೊಂಡು ಹಲ್ಲೆ ನಡೆಸಿದರು. ಇದರಿಂದ‌ ಕಾರಿನಲ್ಲಿದ್ದ ಸಲ್ಮಾನ್‌ ಖಾನ್‌ ಅವರ ಮೂರು ಹಲ್ಲುಗಳು ಮುರಿದಿವೆ ಎಂದು ಗಾಯಾಳು, ಹಾಲೇನಹಳ್ಳಿಯ ಸೈಫ್‌ ಖಾನ್‌ ದೂರು ನೀಡಿದ್ದರು.

ಅನಂತ್‌ ಕುಮಾರ್‌ ಹೆಗಡೆ ಕಾರಿನಲ್ಲಿದ್ದರು. ಅವರು ಕರೆದ ತಕ್ಷಣವೇ ಉಳಿದವರು ಬಂದು ನಮ್ಮ ಮೇಲೆ ಹಲ್ಲೆ ಮಾಡಿದರು. ನಮ್ಮ ತಾಯಿ ಮೇಲೆ ಅನಂತ್‌ ಕುಮಾರ್‌ ಹಲ್ಲೆ ನಡೆಸಿದರು. ಭದ್ರತಾ ಸಿಬ್ಬಂದಿ ಪಿಸ್ತೂಲ್‌ ತೋರಿಸಿ ಜೀವ ಬೆದರಿಕೆ ಹಾಕಿದರು ಎಂದು ಅವರು ದೂರು ನೀಡಿದ್ದರು. ಇದನ್ನು ಆಧರಿಸಿ ದಾಬಸ್‌ ಠಾಣೆಯ ಪೊಲೀಸರು ಅನಂತ್‌ ಕುಮಾರ್‌ ಹೆಗಡೆ, ಭದ್ರತಾ ಸಿಬ್ಬಂದಿ ಶ್ರೀಧರ್‌ ಹಾಗೂ ಕಾರು ಚಾಲಕ ಮಹೇಶ್‌ ವಿರುದ್ಧ ಬಿಎನ್‌ಎಸ್‌ ಸೆಕ್ಷನ್‌ಗಳಾದ 117, 126, 74, 351(4) ಪ್ರಕರಣ ದಾಖಲಿಸಿದ್ದಾರೆ.