Justice V Ramaswami  
ಸುದ್ದಿಗಳು

ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ ರಾಮಸ್ವಾಮಿ ನಿಧನ

1991ರಲ್ಲಿ ಹಣಕಾಸಿಸು ಮತ್ತು ಅಧಿಕಾರ ದುರುಪಯೋಗದ ಆರೋಪಗಳಿಂದಾಗಿ ಪದಚ್ಯುತಿ ಪ್ರಕ್ರಿಯೆ ಎದುರಿಸಿದ ಮೊದಲ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ವಿ. ರಾಮಸ್ವಾಮಿ ಅವರಾಗಿದ್ದಾರೆ.

Bar & Bench

ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವೀರಸ್ವಾಮಿ ರಾಮಸ್ವಾಮಿ ಅವರು ಶನಿವಾರ ಬೆಳಿಗ್ಗೆ ಚೆನ್ನೈನ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 96 ವರ್ಷ ವಯಸ್ಸಾಗಿತ್ತು.

ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಅವಧಿಯಲ್ಲಿ ಆರ್ಥಿಕ ದುಮತ್ತು ಅಧಿಕಾರ ದುರುಪಯೋಗದ ಆರೋಪದ ಕಾರಣಕ್ಕೆ 1991ರಲ್ಲಿ ಪದಚ್ಯುತಿ ಪ್ರಕ್ರಿಯೆ ಎದುರಿಸಿದ  ಸುಪ್ರೀಂ ಕೋರ್ಟ್ ಮೊದಲ ನ್ಯಾಯಮೂರ್ತಿ ವಿ ರಾಮಸ್ವಾಮಿ ಅವರಾಗಿದ್ದಾರೆ.

ತಮ್ಮ ಅಧಿಕೃತ ನಿವಾಸಕ್ಕೆ ಸಂಬಂಧಿಸಿದಂತೆ ಅತಿಯಾದ ವೆಚ್ಚ ಮಾಡಿದ್ದಾರೆ ಎಂಬ ಆರೋಪದ ಬಗ್ಗೆ ಸಂಸದೀಯ ಸಮಿತಿ ಸಾಕ್ಷ್ಯಗಳನ್ನು ಸಂಗ್ರಹಿಸಿತ್ತು. 1993ರಲ್ಲಿ, ಲೋಕಸಭೆಯಲ್ಲಿ ಅವರ ವಿರುದ್ಧ ವಾಗ್ದಂಡನಾ ನಿರ್ಣಯ ಮಂಡಿಸಲಾಗಿತ್ತು. ಮೂರನೇ ಎರಡರಷ್ಟು ಬಹುಮತ ದೊರೆತಿತ್ತಾದರೂ ಕಾಂಗ್ರೆಸ್‌ ಸಂಸದರು ಗೈರಾಗಿದ್ದರಿಂದ ನಿರ್ಣಯಕ್ಕೆ ಸೋಲಾಗಿತ್ತು.

ಅವರನ್ನು ಸೇವೆಯ ವಜಾಗೊಳಿಸದಿದ್ದರೂ, ಈ ಪ್ರಕರಣ  ಭಾರತದ ನ್ಯಾಯಾಂಗ ಇತಿಹಾಸದಲ್ಲಿ ನ್ಯಾಯಾಂಗ ಹೊಣೆಗಾರಿಕೆಗೆ ಪೂರ್ವನಿದರ್ಶನವೊಂದನ್ನು ಹಾಕಿಕೊಟ್ಟಿತು.   

ನ್ಯಾಯಮೂರ್ತಿ ರಾಮಸ್ವಾಮಿ ಅವರು ಫೆಬ್ರವರಿ 15, 1929 ರಂದು ಜನಿಸಿದರು. ಅವರು ಶ್ರೀವಿಲ್ಲಿಪುತ್ತೂರಿನ ಹಿಂದೂ ಪ್ರೌಢಶಾಲೆಯಲ್ಲಿ ತಮ್ಮ ಆರಂಭಿಕ ಶಿಕ್ಷಣ ಪೂರ್ಣಗೊಳಿಸಿದರು, ನಂತರ ಮಧುರೈನ ಅಮೇರಿಕನ್ ಕಾಲೇಜಿನಿಂದ ಪದವಿ ಪಡೆದರು. ಬಳಿಕ ಮದ್ರಾಸ್‌ ಕಾನೂನು ಕಾಲೇಜಿನಿಂದ ಎಲ್‌ಎಲ್‌ಬಿ ಪದವಿ ಗಳಿಸಿದರು.

ಅವರು ಜುಲೈ 13, 1953 ರಂದು ಮದ್ರಾಸ್ ಹೈಕೋರ್ಟ್‌ನ ವಕೀಲರಾಗಿ ಸೇರ್ಪಡೆಗೊಂಡ ಅವರು, ಮೇಲ್ಮನವಿ ಮತ್ತು ಮೂಲ ನ್ಯಾಯವ್ಯಾಪ್ತಿಯಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ಕಾನೂನು ಎರಡನ್ನೂ ಅಭ್ಯಾಸ ಮಾಡಿದರು. ಜನವರಿ 31, 1971 ರಂದು ಮದ್ರಾಸ್ ಹೈಕೋರ್ಟ್‌ನ ಖಾಯಂ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ನವೆಂಬರ್ 12, 1987ರಂದು ಅವರನ್ನು ಮದ್ರಾಸ್ ಹೈಕೋರ್ಟ್‌ನಿಂದ ವರ್ಗಾವಣೆ ಮಾಡಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಯಿತು.

ನ್ಯಾಯಮೂರ್ತಿ ರಾಮಸ್ವಾಮಿ ಅವರನ್ನು ಅಕ್ಟೋಬರ್ 6, 1989 ರಂದು ಭಾರತದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿ ನೇಮಿಸಲಾಯಿತು. ಫೆಬ್ರವರಿ 14, 1994ರಂದು ನಿವೃತ್ತರಾಗುವವರೆಗೂ ಅವರು ಸುಪ್ರೀಂ ಕೋರ್ಟ್‌ನಲ್ಲಿ ಸೇವೆ ಸಲ್ಲಿಸಿದರು.