ಶಬರಿಮಲೆ ದೇವಸ್ಥಾನದಲ್ಲಿ ದ್ವಾರಪಾಲಕ ಮೂರ್ತಿಗಳಿಗೆ ಹೊದಿಸಲಾದ ಚಿನ್ನ ಲೇಪಿತ ತಾಮ್ರದ ತಗಡುಗಳಿಂದ ಚಿನ್ನ ಕಾಣೆಯಾದ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಕೋರಿ ಬಿಜೆಪಿಯ ಕೇರಳ ಘಟಕದ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಸೋಮವಾರ ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ [ರಾಜೀವ್ ಚಂದ್ರಶೇಖರ್ ಮತ್ತಿತರರು ಹಾಗೂ ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ತಾನು ಅಯಪ್ಪ ಸ್ವಾಮಿಯ ಭಕ್ತ ಎಂದು ತಿಳಿಸಿರುವ ಮಾಜಿ ಕೇಂದ್ರ ಸಚಿವರೂ ಆದ ರಾಜೀವ್ ಚಂದ್ರಶೇಖರ್ ಶಬರಿಮಲೆ ದೇವಸ್ಥಾನದ ದ್ವಾರಪಾಲಕರ ಚಿನ್ನದ ತಗಡು ಕಳವು ವಿಚಾರದಲ್ಲಿ ತಿರುವಾಂಕೂರು ದೇವಸ್ವಂ ಮಂಡಳಿಯಿಂದ ಉಂಟಾಗಿರುವ ಗಂಭೀರ ಮತ್ತು ವ್ಯವಸ್ಥಿತ ವೈಫಲ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಅರ್ಜಿಯ ಕೆಲ ತಾಂತ್ರಿಕ ದೋಷಗಳ ಬಗ್ಗೆ ಪ್ರಸ್ತಾಪಿಸಿದ ನ್ಯಾಯಮೂರ್ತಿಗಳಾದ ರಾಜ ವಿಜಯರಾಘವನ್ ವಿ ಮತ್ತು ನ್ಯಾ. ಕೆ ವಿ ಜಯಕುಮಾರ್ ಅವರಿದ್ದ ಪೀಠ ಅವುಗಳನ್ನು ಸರಿಪಡಿಸುವಂತೆ ಸೂಚಿಸಿ ಮುಂದಿನ ವಿಚಾರಣೆಯನ್ನು ಡಿಸೆಂಬರ್ 9, 2025ಕ್ಕೆ ನಿಗದಿಪಡಿಸಿತು.
ಇದೇ ಪೀಠ ಚಿನ್ನಗಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ದಾಖಲಿಸಿಕೊಂಡಿರುವ ಸ್ವಯಂ ಪ್ರೇರಿತ ಪ್ರಕರಣವನ್ನೂ ಆಲಿಸುತ್ತಿದೆ. ಹಿಂದಿನ ವಿಚಾರಣೆ ವೇಳೆ ನಿವತ್ತ ನ್ಯಾಯಾಧೀಶರೊಬ್ಬರಿಗೆ ತನಿಖೆ ನಡೆಸುವಂತೆ ಸೂಚಿಸಿದ್ದು ಚಿನ್ನ ದುರುಪಯೋಗ ಆರೋಪ ಕುರಿತಂತೆ ವಿಸ್ತೃತ ತನಿಖೆ ಕೈಗೊಳ್ಳಲು ವಿಶೇಷ ತನಿಖಾ ತಂಡವನ್ನೂ ರಚಿಸಿತ್ತು.
1999ರಲ್ಲಿ ದೇವಸ್ಥಾನಕ್ಕೆ ದಾನ ನೀಡಲಾಗಿದ್ದ ಚಿನ್ನದ ಹೊದಿಕೆ ಇದ್ದ ದ್ವಾರಪಾಲಕ ವಿಗ್ರಹಗಳನ್ನು 2019ರಲ್ಲಿ ದುರಸ್ತಿ ಹೆಸರಿನಲ್ಲಿ ಚೆನ್ನೈಗೆ ಕಳುಹಿಸಲಾಯಿತು. ಆದರೆ ದಾಖಲೆಗಳಲ್ಲಿ ತಾಮ್ರದ ಹೊದಿಕೆ ಇರುವ ವಿಗ್ರಹ ಎಂದಷ್ಟೇ ಉಲ್ಲೇಖಿಸಲಾಗಿದೆ ಎಂದು ಅರ್ಜಿ ದೂರಿದೆ.
2025ರಲ್ಲಿ ಮತ್ತೆ ದುರಸ್ತಿಗೆ ಕಳಿಸುವಾಗ ಹೈಕೋರ್ಟ್ ಅಥವಾ ವಿಶೇಷ ಆಯುಕ್ತರಿಂದ ಪೂರ್ವಾನುಮತಿ ಪಡೆದಿಲ್ಲ. 42.8 ಕಿಲೋ ತೂಕದ ವಿಗ್ರಹ ಹಿಂತಿರುಗಿದಾಗ 38 ಕಿಲೋ ಮಾತ್ರ ಇದ್ದು 4.54ರಷ್ಟು ಕೆಜಿ ತೂಕ ಇಳಿದಿದೆ. ತಿರುವಾಂಕೂರು ಕೊಚ್ಚಿ ಹಿಂದೂ ಧಾರ್ಮಿಕ ಸಂಸ್ಥೆಗಳ ಕಾಯಿದೆ 1950ರ ಪ್ರಕಾರ ತಿರುವಾಂಕೂರು ದೇವಸ್ವಂ ಮಂಡಳಿ ತನ್ನ ಕಾನೂನುಬದ್ಧ ಕರ್ತವ್ಯ ನಿರ್ವಹಿಸಲು ವಿಫಲವಾಗಿದೆ ಎಂದು ರಾಜೀವ್ ಚಂದ್ರಶೇಖರ್ ಆರೋಪಿಸಿದ್ದಾರೆ.
ಪ್ರಕರಣದಲ್ಲಿ ರಾಜಕೀಯವಾಗಿ ಪ್ರಭಾವಿಯಾಗಿರುವವರು ಶಾಮೀಲಾಗಿರುವ ಸಾಧ್ಯತೆಗಳಿದ್ದು ಬಂಗಾರವನ್ನು ರಾಜ್ಯದಾಚೆಗೆ ಸಾಗಿಸಿರಬಹುದಾದ ಅನುಮಾನ ಇದ್ದು ರಾಜ್ಯ ಪೊಲೀಸರು ತಟಸ್ಥವಾಗಿ ತನಿಖೆ ನಡೆಸುವುದಿಲ್ಲ ಎಂದಿದ್ದಾರೆ.