Chitrakoot gang rape
Chitrakoot gang rape  
ಸುದ್ದಿಗಳು

ಚಿತ್ರಕೂಟ ಸಾಮೂಹಿಕ ಅತ್ಯಾಚಾರ ಪ್ರಕರಣ: ಉ. ಪ್ರದೇಶ ಮಾಜಿ ಸಚಿವ ಗಾಯತ್ರಿ ಪ್ರಜಾಪತಿ ದೋಷಿ ಎಂದ ಲಖನೌ ನ್ಯಾಯಾಲಯ

Bar & Bench

ಚಿತ್ರಕೂಟ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶ ಮಾಜಿ ಸಚಿವ ಗಾಯತ್ರಿ ಪ್ರಜಾಪತಿ ಹಾಗೂ ಇತರ ಇಬ್ಬರು ಸಹ ಆರೋಪಿಗಳು ತಪ್ಪಿತಸ್ಥರು ಎಂದು ಲಖನೌ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.

ಸಂಸದ/ಶಾಸಕರ ವಿರುದ್ಧದ ಪ್ರಕರಣಗಳನ್ನು ವಿಚಾರಣೆ ನಡೆಸುವ ವಿಶೇಷ ನ್ಯಾಯಾಧೀಶ ಪವನ್ ಕುಮಾರ್ ರೈ ಅವರು ಪ್ರಜಾಪತಿ ತಪ್ಪಿತಸ್ಥರು ಎಂದು ಘೋಷಿಸಿದ್ದು, ಶಿಕ್ಷೆಯ ಪ್ರಮಾಣವನ್ನು ಶುಕ್ರವಾರ ಪ್ರಕಟಿಸುವುದಾಗಿ ತಿಳಿಸಿದರು.

2017ರಲ್ಲಿ, ಚಿತ್ರಕೂಟ ಜಿಲ್ಲೆಯ ಮಹಿಳೆಯೊಬ್ಬರು ಪ್ರಜಾಪತಿ ಮಾತ್ರವಲ್ಲದೆ ವಿಕಾಸ್ ವರ್ಮಾ, ಅಮರೇಂದ್ರ ಸಿಂಗ್, ಚಂದ್ರಪಾಲ್, ರೂಪೇಶ್ವರ್, ಆಶಿಶ್ ಶುಕ್ಲಾ ಮತ್ತು ಅಶೋಕ್ ತಿವಾರಿ ಅವರ ವಿರುದ್ಧವೂ ದೂರು ನೀಡಿದ್ದರು. ಫೆಬ್ರವರಿ 2017ರಲ್ಲಿ, ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿದ ಬಳಿಕ ಪ್ರಜಾಪತಿ ಮತ್ತಿತರ ಆರೋಪಿಗಳ ವಿರುದ್ಧ ಲಖನೌನ ಗೌತಂಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಪ್ರಕರಣದ ಎಲ್ಲಾ ಆರೋಪಿಗಳನ್ನು ಜೈಲಿಗೆ ಕಳುಹಿಸಲಾಗಿತ್ತು.

ಲಖನೌ ಜೈಲಿನಲ್ಲಿ 41 ತಿಂಗಳು ಕಳೆದ ಬಳಿಕ ವೈದ್ಯಕೀಯ ಕಾರಣಗಳಿಗಾಗಿ ಅಲಾಹಾಬಾದ್‌ ಹೈಕೋರ್ಟ್‌ ಲಖನೌ ಪೀಠ ಪ್ರಜಾಪತಿ ಅವರಿಗೆ ಸೆಪ್ಟೆಂಬರ್ 2020ರಲ್ಲಿ ಎರಡು ತಿಂಗಳ ಮಧ್ಯಂತರ ಜಾಮೀನು ನೀಡಿತ್ತು. ಆದರೆ ಎಲ್ಲಾ ಅಧಿಕೃತ ಸಾಕ್ಷ್ಯಗಳನ್ನು ಪರಿಗಣಿಸದ ಹಿನ್ನೆಲೆಯಲ್ಲಿ ಹೈಕೋರ್ಟ್‌ ಆದೇಶ ದೋಷಪೂರಿತವಾಗಿದೆ ಎಂದ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್ ಸುಭಾಷ್ ರೆಡ್ಡಿ ಹಾಗೂ ಎಂ ಆರ್ ಶಾ ಅವರಿದ್ದ ಸುಪ್ರೀಂಕೋರ್ಟ್ ಪೀಠ ಮಧ್ಯಂತರ ಜಾಮೀನು ರದ್ದುಗೊಳಿಸಿತ್ತು.