ʼಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಅವರನ್ನು ಅತ್ಯಾಚಾರ ಆರೋಪದಿಂದ ಮುಕ್ತಗೊಳಿಸಿರುವ ಸೆಷನ್ಸ್ ಕೋರ್ಟ್ ಆದೇಶ ಪ್ರಶ್ನಿಸಿದ ಕ್ರಿಮಿನಲ್ ಅರ್ಜಿಗಳ ವಿಚಾರಣೆಗೆ ಸಂಬಂಧಿಸಿದಂತೆ ಮುಂದುವರಿದ ವಾದವನ್ನು ಆಲಿಸಲು ಸಮಯಾವಕಾಶ ಕಡಿಮೆ ಇರುವ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯುತ್ತಿದ್ದೇನೆʼ ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎನ್ ಕೆ ಸುಧೀಂದ್ರ ರಾವ್ ಹೇಳಿದ್ದು ವಿಚಾರಣೆಯಿಂದ ಬಿಡುಗಡೆ ಹೊಂದಿದ್ದಾರೆ.
‘ಸ್ವಾಮೀಜಿ ಅವರನ್ನು ಆರೋಪದಿಂದ ಮುಕ್ತಗೊಳಿಸಿ ನ್ಯಾಯಾಧೀಶ ಜಿ ಬಿ ಮುದಿಗೌಡರ್ 2016ರ ಮಾರ್ಚ್ 31ರಂದು ಹೊರಡಿಸಿದ ಆದೇಶ ರದ್ದುಗೊಳಿಸಬೇಕು’ ಎಂದು ಕೋರಿ ಸಂತ್ರಸ್ತೆ ರಾಮಕಥಾ ಗಾಯಕಿ ಮತ್ತು ಪ್ರಾಸಿಕ್ಯೂಷನ್ ಸಲ್ಲಿಸಿರುವ ಮೇಲ್ಮನವಿಗಳ ವಿಚಾರಣೆ ನಡೆಸುತ್ತಿದ್ದ ಏಕಸದಸ್ಯ ಪೀಠದ ನ್ಯಾಯಮೂರ್ತಿ ಎನ್ ಕೆ ಸುಧೀಂದ್ರ ರಾವ್ ಅವರು ಮುಂದಿನ ತಿಂಗಳ 3ಕ್ಕೆ ನಿವೃತ್ತಿ ಹೊಂದಲಿದ್ದಾರೆ.
ರಾಘವೇಶ್ವರ ಭಾರತೀ ಸ್ವಾಮೀಜಿ ವಿರುದ್ಧದ ವ್ಯಾಜ್ಯಗಳಲ್ಲಿ ಈವರೆಗೆ ಹಲವು ನ್ಯಾಯಮೂರ್ತಿಗಳು ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ. ಇದೀಗ ಪಾರ್ಟ್ ಹರ್ಡ್ (ವಾದವನ್ನು ಅರ್ಧ ಆಲಿಸಿದ್ದ) ಪ್ರಕರಣದ ವಿಚಾರಣೆಯಿಂದ ನ್ಯಾಯಮೂರ್ತಿ ಸುಧೀಂದ್ರ ರಾವ್ ಬಿಡುಗಡೆ ಹೊಂದಿದ್ದಾರೆ. ಈ ಪ್ರಕರಣದ ವಿಚಾರಣೆ ಈಗ ಪುನಾ ಮತ್ತೊಂದು ನ್ಯಾಯಪೀಠದ ಮುಂದೆ ನಿಗದಿಯಾಗಬೇಕಿದ್ದು, ಪ್ರಾಥಮಿಕ ಹಂತದಿಂದ ವಾದ–ಪ್ರತಿವಾದ ಪ್ರಕ್ರಿಯೆ ನಡೆಯಬೇಕಿದೆ.
‘ರಾಘವೇಶ್ವರ ಭಾರತೀ ಸ್ವಾಮೀಜಿ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಈ ಬಗ್ಗೆ ಸೂಕ್ತ ಸಾಕ್ಷಾಧಾರಗಳಿವೆ. ಪ್ರಕರಣದಲ್ಲಿ ಸಾಮೀಜಿ ವಿರುದ್ಧ ಸಿಐಡಿ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಆದರೂ, ಅತ್ಯಾಚಾರ ನಡೆಸಿದ ಬಗ್ಗೆ ಸಾಕ್ಷಾಧಾರಗಳಿಲ್ಲ ಎಂದು ಸೆಷನ್ಸ್ ನ್ಯಾಯಾಧೀಶ ಜಿ.ಬಿ.ಮುದಿಗೌಡರ್ ಅಭಿಪ್ರಾಯಪಟ್ಟಿದ್ದಾರೆ. ಇದು ತಪ್ಪು’ ಎಂಬುದು ಅರ್ಜಿದಾರರ ವಾದವಾಗಿದೆ.