Harvard Vs Trump 
ಸುದ್ದಿಗಳು

ವಿದೇಶಿ ವಿದ್ಯಾರ್ಥಿಗಳಿಗೆ ಪ್ರವೇಶ ನಿಷೇಧ: ಟ್ರಂಪ್ ನೀತಿಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿದ ಅಮೆರಿಕ ನ್ಯಾಯಾಲಯ

ಟ್ರಂಪ್ ಸರ್ಕಾರವು ಮೇ 22, 2025ರಂದು, ಎಫ್-1 ಮತ್ತು ಜೆ-1 ವೀಸಾ ಯೋಜನೆಯಡಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಆತಿಥ್ಯ ನೀಡುವ ಹಾರ್ವರ್ಡ್ ವಿಶ್ವವಿದ್ಯಾಲಯದ ಮಾನ್ಯತೆಯನ್ನು ರದ್ದುಗೊಳಿಸಿತು. ಹೀಗಾಗಿ ವಿವಿ ನ್ಯಾಯಾಲಯದ ಮೊರೆ ಹೋಗಿತ್ತು.

Bar & Bench

ಅಮೆರಿಕದಲ್ಲಿ ಶಿಕ್ಷಣ ಪಡೆಯದಂತೆ ವಿದೇಶಿ ವಿದ್ಯಾರ್ಥಿಗಳಿಗೆ ನಿರ್ಬಂಧ ಹೇರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸರ್ಕಾರದ ಆದೇಶಕ್ಕೆ ಅಲ್ಲಿನ ಫೆಡರಲ್ ನ್ಯಾಯಾಲಯ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಹಾರ್ವರ್ಡ್‌ ವಿಶ್ವವಿದ್ಯಾಲಯದ ಪರವಾಗಿ ನಾಲ್ಕು ಕಾನೂನು ಸಂಸ್ಥೆಗಳು ಸರ್ಕಾರದ ಆದೇಶ ಪ್ರಶ್ನಿಸಿದ್ದವು.

ಸರ್ಕಾರದ ಹಿಂದೆಂದೂ ಇರದಂತಹ  ಪ್ರತೀಕಾರದ ಕ್ರಮ ಕೈಗೊಂಡಿದ್ದು 7,000ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುವುದನ್ನು  ಪ್ರಶ್ನಿಸಿ ವಿಶ್ವವಿದ್ಯಾನಿಲಯವು 72 ಪುಟಗಳ ದೂರನ್ನು ಸಲ್ಲಿಸಿತ್ತು ಅದಾದ ಒಂದು ದಿನದ ನಂತರ ಅಮೆರಿಕ ಡಿಸ್ಟ್ರಿಕ್ಟ್‌ ಜಡ್ಜ್‌ ಆಲಿಸನ್ ಡಿ. ಬರೋಸ್ ಅವರು  ತುರ್ತು ಪರಿಹಾರಕೋರಿ ಹಾರ್ವರ್ಡ್‌ ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿದರು.

ಟ್ರಂಪ್  ಸರ್ಕಾರ ಮೇ 22, 2025 ರಂದು ಎಫ್-1 ಮತ್ತು ಜೆ-1 ವೀಸಾ ಯೋಜನೆಯಡಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಆತಿಥ್ಯ ನೀಡುವ ಹಾರ್ವರ್ಡ್ ವಿಶ್ವವಿದ್ಯಾಲಯದ ಮಾನ್ಯತೆಯನ್ನು ರದ್ದುಗೊಳಿಸಿತು. ಹೀಗಾಗಿ ವಿವಿ ನ್ಯಾಯಾಲಯದ ಮೊರೆ ಹೋಗಿತ್ತು. ಹಾರ್ವರ್ಡ್ ತನ್ನ ಆಡಳಿತ, ಅಧ್ಯಾಪಕರ ನೇಮಕಾತಿ, ವಿದ್ಯಾರ್ಥಿಗಳ ಪ್ರವೇಶ ಮತ್ತು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಮೇಲ್ವಿಚಾರಣೆ ವಿಷಯಗಳಲ್ಲಿ ವ್ಯಾಪಕ ಬದಲಾವಣೆಗಳನ್ನು ಜಾರಿಗೆ ತರುವ ಸರ್ಕಾರದ ಸೂಚನೆಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಮಾನ್ಯತೆ ರದ್ದುಗೊಳಿಸಲಾಗಿತ್ತು.

ಹಾರ್ವರ್ಡ್‌ ವಿಶ್ವವಿದ್ಯಾಲಯವು ಅಮೆರಿಕದ ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆ ಸೇರಿದಂತೆ ವಿವಿಧ ಸರ್ಕಾರಿ ಸಂಸ್ಥೆಗಳ ವಿರುದ್ಧ ಮೊಕದ್ದಮೆ ಹೂಡಿತ್ತು. ಟ್ರಂಪ್ ಸರ್ಕಾರ  $2.2 ಬಿಲಿಯನ್ ಸರ್ಕಾರಿ ನಿಧಿಯನ್ನು ಸ್ಥಗಿತಗೊಳಿಸಿದ್ದನ್ನು ಅದು ಪ್ರಶ್ನಿಸಿತ್ತು.

ಅಂತೆಯೇ ಮಾನ್ಯತೆ ರದ್ದತಿ ಕಾನೂನುಬಾಹಿರ ಮಾತ್ರವಲ್ಲದೆ ಪ್ರತೀಕಾರಾತ್ಮಕ ಕ್ರಮ ಎಂದು ಕಟು ಪದಗಳಿಂದ ಕೂಡಿದ ದೂರಿನಲ್ಲಿ ಹಾರ್ವರ್ಡ್‌ ಆರೋಪಿಸಿತ್ತು. ಸರ್ಕಾರದ ಸೈದ್ಧಾಂತಿಕ ಬೇಡಿಕೆಗಳಿಗೆ ಮಣಿಯದ ವಿವಿಯನ್ನು ಶಿಕ್ಷಿಸುವುದಕ್ಕಾಗಿ ಸರ್ಕಾರ ತನ್ನ ವಿರುದ್ಧ ಸಂಘಟಿತ ಪ್ರಚಾರಾಂದೋಲನದ ಭಾಗವಾಗಿ ಈ ಕೃತ್ಯ ಎಸಗಿದೆ ಎಂದು ಅದು ಆತಂಕ ವ್ಯಕ್ತಪಡಿಸಿತ್ತು.

ಹಾರ್ವರ್ಡ್‌ ವಿವಿಯ ಪರವಾಗಿ ವಾದ ಮಂಡಿಸಿರುವ ಕಾನೂನು ಸಂಸ್ಥೆಗಳಾದ ಜೆನ್ನರ್ & ಬ್ಲಾಕ್ , ಕ್ವಿನ್ ಇಮ್ಯಾನುಯೆಲ್ ಉರ್ಕ್ಹಾರ್ಟ್ & ಸುಲ್ಲಿವನ್, ಕಿಂಗ್‌ & ಸ್ಪಾಲ್ಡಿಂಗ್‌ ಹಾಗೂ ಲೆಹೋಟ್ಸ್ಕಿ ಕೆಲ್ಲರ್ ಕೋನ್ ನ್ಯಾಯಾಲಯದಿಂದ ತಾತ್ಕಾಲಿಕ ತಡೆಯಾಜ್ಞೆ ಪಡೆದಿವೆ.

ಹಾರ್ವರ್ಡ್‌ ವಿವಿಯ ದೂರಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ:

Harvard_Visa_Complaint.pdf
Preview

ನ್ಯಾಯಾಲಯದ ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ:

Harvard_order.pdf
Preview