ಮಾಜಿ ಸಂಸದ ಡಿ ಕೆ ಸುರೇಶ್ ಅವರ ಸಹೋದರಿ ಎಂದು ನಂಬಿಸಿ ಚಿನ್ನ ಪಡೆದು ವಂಚಿಸಿದ ಪ್ರಕರಣದ ಆರೋಪಿಗಳಾದ ಐಶ್ವರ್ಯಾ ಗೌಡ ಮತ್ತು ಆಕೆಯ ಪತಿ ಕೆ ಎನ್ ಹರೀಶ್ ಅವರನ್ನು ತಕ್ಷಣ ಬಿಡುಗಡೆ ಮಾಡಲು ಕರ್ನಾಟಕ ಹೈಕೋರ್ಟ್ ಮಂಗಳವಾರ ಆದೇಶಿಸಿದೆ.
ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಚಿನ್ನದ ಅಂಗಡಿಯ ಮಾಲಕಿ ವನಿತಾ ಐತಾಳ್ ಅವರಿಗೆ ವಂಚಿಸಿದ ಆರೋಪದಲ್ಲಿ ಬಂಧಿತರಾಗಿದ್ದ ಐಶ್ವರ್ಯಾ ಗೌಡ ಮತ್ತು ಆಕೆಯ ಪತಿ ಕೆ ಎನ್ ಹರೀಶ್ ಅವರು ತಮ್ಮನ್ನು ಕಾನೂನುಬಾಹಿರವಾಗಿ ಬಂಧಿಸಲಾಗಿದೆ ಎಂದು ಆಕ್ಷೇಪಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
“ಸುಪ್ರೀಂ ಕೋರ್ಟ್ ಪ್ರಬೀರ್ ಪುರಕಾಯಸ್ಥ ಮತ್ತು ಪಂಕಜ್ ಬನ್ಸಲ್ ಪ್ರಕರಣಗಳಲ್ಲಿ ಯಾವುದೇ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸುವಾಗ ಅವರಿಗೆ ಬಂಧನದ ಆಧಾರವನ್ನು ಲಿಖಿತವಾಗಿ ತಿಳಿಸಬೇಕು ಎಂದು ತೀರ್ಪು ನೀಡಿದೆ. ಆದರೆ, ಹಾಲಿ ಪ್ರಕರಣದಲ್ಲಿ ಆ ತೀರ್ಪನ್ನು ತನಿಖಾಧಿಕಾರಿ ಪಾಲಿಸಿಲ್ಲ. ಹೀಗಾಗಿ, ತಕ್ಷಣ ಅವರನ್ನು ಬಿಡುಗಡೆ ಮಾಡಬೇಕು” ಎಂದು ನ್ಯಾಯಾಲಯವು ನಿರ್ದೇಶಿಸಿದೆ.
ಅಲ್ಲದೇ, “ತನಿಖಾಧಿಕಾರಿಯು ಅರ್ಜಿದಾರರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಶೋಧ ಮತ್ತು ಜಫ್ತಿ ನಡೆಸಲು ಮತ್ತು ತನಿಖೆ ಮುಂದುವರಿಸಲು ಸ್ವತಂತ್ರರಾಗಿದ್ದಾರೆ. ಅರ್ಜಿದಾರರು ತನಿಖೆಗೆ ಸಹಕರಿಸಬೇಕು. ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷಿಯನ್ನು ತಿರುಚುವುದು ಅಥವಾ ನಾಶಪಡಿಸುವಂತಿಲ್ಲ. ಈ ಆದೇಶವನ್ನು ಸರ್ಕಾರದ ವಕೀಲರು ಜೈಲು ಅಧಿಕಾರಿಗಳಿಗೆ ತಿಳಿಸುವ ಮೂಲಕ ಅರ್ಜಿದಾರರ ಬಿಡುಗಡೆಗೆ ಕ್ರಮವಹಿಸಬೇಕು” ಎಂದು ಆದೇಶಿಸಿದೆ.
ಇದಕ್ಕೂ ಮುನ್ನ, ಅರ್ಜಿದಾರರ ಪರವಾಗಿ ವಾದಿಸಿದ ಹಿರಿಯ ವಕೀಲ ಸಂದೇಶ್ ಚೌಟ ಅವರು “ಎಂಟು ತಿಂಗಳ ಬಳಿಕ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳ ವಿರುದ್ಧ ದಾಖಲಿಸಿರುವ ಅಪರಾಧಗಳನ್ನು ನೋಡಿದರೆ ಅವುಗಳಿಗೆ ಗರಿಷ್ಠ ಏಳು ವರ್ಷ ಶಿಕ್ಷೆ ವಿಧಿಸಬಹುದಾಗಿದೆ ಅಷ್ಟೆ. ಬಿಎನ್‌ಎಸ್‌ಎಸ್ 47ರ ಅಡಿ ಅರ್ಜಿದಾರರಿಗೆ ಬಂಧನದ ಆಧಾರ ತಿಳಿಸದೇ ಡಿಸೆಂಬರ್ 28ರಂದು ಬಂಧಿಸಲಾಗಿದೆ. ಅಂದೇ ಮಧ್ಯಂತರ ಜಾಮೀನು ಕೋರಿ ಮ್ಯಾಜಿಸ್ಟ್ರೇಟ್ ಮುಂದೆ ಅರ್ಜಿ ಸಲ್ಲಿಸಲಾಗಿತ್ತು. ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಮಧ್ಯಂತರ ಜಾಮೀನು ಅರ್ಜಿಯನ್ನು ವಜಾ ಮಾಡಿದೆ. ಮಾರನೇಯ ದಿನ ಅರ್ಜಿದಾರರ ಮನೆಯಲ್ಲಿ ಶೋಧ ಮತ್ತು ಪೊಲೀಸ್ ಕಸ್ಟಡಿಗೆ ಕೋರಿ ತನಿಖಾಧಿಕಾರಿ ಮನವಿ ಮಾಡಿದ್ದರು. ಇದಕ್ಕೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಅನುಮತಿಸಿತ್ತು” ಎಂದರು.
“ರಿಮ್ಯಾಂಡ್ ಅರ್ಜಿಯಲ್ಲಿ ಬಂಧನಕ್ಕೆ ಕಾರಣಗಳನ್ನು ನೀಡಲಾಗಿದೆ. ಇದು ಪ್ರಬೀರ್ ಪುರಕಾಯಸ್ಥ ಮತ್ತು ಪಂಕಜ್ ಬನ್ಸಲ್ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿಗೆ ವಿರುದ್ಧವಾಗಿದೆ. ಆರೋಪಿಯ ಬಂಧನದ ಆಧಾರವನ್ನು ಲಿಖಿತವಾಗಿ ತನಿಖಾಧಿಕಾರಿ ನೀಡಬೇಕು ಎಂದು ಪ್ರಬೀರ್ ಪುರಕಾಯಸ್ಥ ಅವರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ. ಹೀಗಾಗಿ, ಕಾನೂನಿನಗೆ ವಿರುದ್ಧವಾಗಿ ಅರ್ಜಿದಾರರನ್ನು ಬಂಧಿಸಿರುವುದರಿಂದ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು. ತನಿಖೆ ಮುಂದುವರಿಯಬಹುದು” ಎಂದರು.
ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಚಿನ್ನದ ಅಂಗಡಿಯ ಮಾಲಕಿ ವನಿತಾ ಐತಾಳ್ ಅವರನ್ನು ಪ್ರತಿನಿಧಿಸಿದ್ದ ವಕೀಲರು “ವಾರಾಹಿ ಗೋಲ್ಡ್‌ನಿಂದ ಪಡೆದಿರುವ ಚಿನ್ನವನ್ನು ಎಲ್ಲಿ ಇಡಲಾಗಿದೆ ಎಂಬುದನ್ನು ಪತ್ತೆ ಮಾಡಬೇಕಿದೆ. ಈ ಪ್ರಕರಣದಲ್ಲಿ ಎಸಿಪಿ ಅವರೇ ಆರೋಪಿಗಳನ್ನು ಬಂಧಿಸಿದ್ದಾರೆ. ಸಿಆರ್‌ಪಿಸಿ ಸೆಕ್ಷನ್ 41ಎ ಅಡಿ ಅರ್ಜಿದಾರರಿಗೆ ಬಂಧನದ ಕಾರಣಗಳನ್ನು ತಿಳಿಸಿದ್ದಾರೆ” ಎಂದರು.
ಪ್ರಕರಣದ ಹಿನ್ನೆಲೆ: ಮಾಜಿ ಸಂಸದ ಡಿ ಕೆ ಸುರೇಶ್ ಅವರ ಸಹೋದರಿ ಎಂದು ನಂಬಿಸಿ ಖರೀದಿ ನೆಪದಲ್ಲಿ ಐಶ್ವರ್ಯಾ ಗೌಡ ಮತ್ತು ಆಕೆಯ ಪತಿ ಹರೀಶ್ ಅವರು 9.82 ಕೋಟಿ ಮೌಲ್ಯದ 14 ಕೆ ಜಿ 660 ಗ್ರಾಂ ಚಿನ್ನ ವಂಚಿಸಿದ್ದಾರೆ ಎಂದು ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಚಿನ್ನದ ಅಂಗಡಿಯ ಮಾಲಕಿ ವನಿತಾ ಎಸ್. ಐತಾಳ್ ಅವರು ಬೆಂಗಳೂರಿನ ಚಂದ್ರಲೇಔಟ್ ಠಾಣೆಗೆ ಡಿಸೆಂಬರ್ ೨೩ರಂದು ದೂರು ನೀಡಿದ್ದರು. ಇದಕ್ಕೆ ಪೂರಕವಾಗಿ ಚಿನ್ನ ಖರೀದಿ ದಾಖಲೆಗಳು ಹಾಗೂ ಆಡಿಯೊ ಕ್ಲಿಪಿಂಗ್‌ಗಳನ್ನು ಪೊಲೀಸರಿಗೆ ನೀಡಿದ್ದರು.
ಡಿ ಕೆ ಸುರೇಶ್ ಅವರ ಧ್ವನಿಯಲ್ಲಿ ಮಾತನಾಡಿದ ಆರೋಪ ಕನ್ನಡದ ನಟ ಧರ್ಮೇಂದ್ರ ಅವರ ಮೇಲಿದೆ. ಬಂಧನದ ಭೀತಿಯ ಹಿನ್ನೆಲೆಯಲ್ಲಿ ಧರ್ಮೇಂದ್ರ ಅವರು ತಲೆಮರೆಸಿಕೊಂಡಿದ್ದಾರೆ. ಹೀಗಾಗಿ, ಐಶ್ವರ್ಯಾ ಗೌಡ, ಹರೀಶ್ ಮತ್ತು ಧರ್ಮೇಂದ್ರ ಮತ್ತಿತರರ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 406, 419, 420, 120B, 504, 506, 34 ಅಡಿ ಪ್ರಕರಣ ದಾಖಲಿಸಲಾಗಿದೆ.