Karnataka High Court, Xiaomi 
ಸುದ್ದಿಗಳು

ಶಓಮಿ ಖಾತೆ ನಿರ್ಬಂಧ ಪ್ರಕರಣ: ಕಂಪೆನಿಯ ಪ್ರತ್ಯುತ್ತರ ಪರಿಶೀಲಿಸಲು ಇ ಡಿಗೆ ಕಾಲಾವಕಾಶ ನೀಡಿದ ಹೈಕೋರ್ಟ್‌

ಚೀನಾದ ತಂತ್ರಜ್ಞಾನ ಕಂಪೆನಿ ಶಓಮಿಯ ಬ್ಯಾಂಕ್‌ ಖಾತೆಯಲ್ಲಿನ ರೂ. 5,551.27 ಕೋಟಿ ಹಣ ವಶಕ್ಕೆ ಪಡೆದು ಆದೇಶ ಮಾಡಿರುವ ಜಾರಿ ನಿರ್ದೇಶನಾಲಯದ ಆದೇಶವನ್ನು ಪ್ರಶ್ನಿಸಲಾಗಿದೆ.

Bar & Bench

ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ (ಫೆಮಾ) ನಿಬಂಧನೆಗಳ ಉಲ್ಲಂಘನೆ ಅಡಿ ಚೀನಾದ ತಂತ್ರಜ್ಞಾನ ಕಂಪೆನಿ ಶಓಮಿಯ ಬ್ಯಾಂಕ್‌ ಖಾತೆಯಲ್ಲಿನ ರೂ. 5,551.27 ಕೋಟಿ ಹಣ ವಶಕ್ಕೆ ಪಡೆಯಲು ಜಾರಿ ನಿರ್ದೇಶನಾಲಯವು (ಇ ಡಿ) ಮಾಡಿದ್ದ ಆದೇಶವನ್ನು ಕಂಪೆನಿಯು ಪ್ರಶ್ನಿಸಿ ಸಲ್ಲಿಸಿರುವ ಮನವಿಗೆ ಪೂರಕವಾಗಿ ಹಾಗೂ ಪ್ರತಿವಾದಿಗಳ (ಇ ಡಿ) ಆದೇಶವನ್ನು ಆಕ್ಷೇಪಿಸಿ ಶಓಮಿಯು ಸೋಮವಾರ ಹೈಕೋರ್ಟ್‌ಗೆ ಪ್ರತ್ಯುತ್ತರ ಸಲ್ಲಿಸಿದೆ.

ಜಾರಿ ನಿರ್ದೇಶನಾಲಯದ ಆದೇಶ ಪ್ರಶ್ನಿಸಿ ಶಓಮಿ ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಜಿ ಪಂಡಿತ್ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

ಜಾರಿ ನಿರ್ದೇಶನಾಲಯವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಂ ಬಿ ನರಗುಂದ್‌ ಅವರು “ಶಓಮಿ ಇಂದು ನ್ಯಾಯಾಲಯಕ್ಕೆ ಪ್ರತ್ಯುತ್ತರ ಸಲ್ಲಿಸಿದೆ. ಇದನ್ನು ಪರಿಶೀಲಿಸಲು ಕಾಲಾವಕಾಶ ನೀಡಬೇಕು” ಎಂದು ಮನವಿ ಮಾಡಿದರು.

ಇದನ್ನು ಪುರಸ್ಕರಿಸಿದ ನ್ಯಾಯಾಲಯವು ಫೆಮಾ ನಿಬಂಧನೆಗಳ ಅಡಿ ಶಓಮಿಯ ಬ್ಯಾಂಕ್‌ ಖಾತೆಯಲ್ಲಿನ 5,551.27 ಕೋಟಿ ರೂಪಾಯಿಗಳನ್ನು ವಶಕ್ಕೆ ಪಡೆದ ಜಾರಿ ನಿರ್ದೇಶನಾಲಯದ ಆದೇಶಕ್ಕೆ ಮಧ್ಯಂತರ ತಡೆ ನೀಡಿರುವ ಆದೇಶವು ಮುದುವರಿಯಲಿದೆ ಎಂದು ಹೇಳಿದ್ದು, ವಿಚಾರಣೆಯನ್ನು ಜೂನ್‌ 1ಕ್ಕೆ ಮುಂದೂಡಿತು.

ಹಿಂದಿನ ವಿಚಾರಣೆಯಲ್ಲಿ ಪೀಠವು “ಜಾರಿ ನಿರ್ದೇಶನಾಲಯದ ಆಕ್ಷೇಪಿತ ಆದೇಶದ ಮೂಲಕ ನಿರ್ಬಂಧಿಸಲ್ಪಟ್ಟಿರುವ ಶಓಮಿ ಬ್ಯಾಂಕ್‌ ಖಾತೆಯ ಮೂಲಕ ದೈನಂದಿನ ಖರ್ಚು-ವೆಚ್ಚಗಳಿಗೆ ಹಣ ಬಳಕೆ ಮಾಡಬಹುದಾಗಿದೆ” ಎಂಬ ಷರತ್ತು ವಿಧಿಸಿ ಮುಂದಿನ ಆದೇಶದವರೆಗೆ ಜಾರಿ ನಿರ್ದೇಶನಾಲಯದ ಆಕ್ಷೇಪಿತ ಆದೇಶಕ್ಕೆ ತಡೆ ನೀಡಲಾಗಿದೆ ಎಂದು ನ್ಯಾ. ಎಸ್‌ ಸುನಿಲ್‌ ದತ್‌ ಯಾದವ್‌ ಅವರಿದ್ದ ರಜಾಕಾಲೀನ ಪೀಠ ಆದೇಶ ಮಾಡಿತ್ತು.

“ಪ್ರತಿವಾದಿಗಳನ್ನು ಆಲಿಸಿದ ಬಳಿಕ ಭಾರತದ ಹೊರಗಿರುವ ವಿದೇಶಿ ಕಂಪೆನಿಗಳಿಗೆ ಹಣ ಪಾವತಿಸಲು ಅನುಮತಿಸುವ ಮಧ್ಯಂತರ ಕೋರಿಕೆಯನ್ನು ಪರಿಗಣಿಸಲಾಗುವುದು. ಮಧ್ಯಂತರ ಆದೇಶದ ತೆರವುಗೊಳಿಸುವ, ಮಾರ್ಪಾಟುಗೊಳಿಸುವ ಸ್ವಾತಂತ್ರ್ಯವನ್ನು ಪ್ರತಿವಾದಿಗಳಿಗೆ ನೀಡಲಾಗಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದ್ದು, ಕಂಪೆನಿಯ ಆಸ್ತಿ ವಶಕ್ಕೆ ಪಡೆಯುವುದಕ್ಕೆ ತಡೆ ವಿಧಿಸಿ ಆದೇಶಿಸಿದೆ. ಈ ಆದೇಶವನ್ನು ತೆರವು ಮಾಡುವಂತೆ ಜಾರಿ ನಿರ್ದೇಶನಾಲಯವು ಅರ್ಜಿ ಸಲ್ಲಿಸಿದೆ.