ಶಓಮಿ ಬ್ಯಾಂಕ್‌ ಖಾತೆ ನಿರ್ಬಂಧಿಸಿದ್ದ ಜಾರಿ ನಿರ್ದೇಶನಾಲಯದ ಆದೇಶಕ್ಕೆ ತಡೆ ನೀಡಿದ್ದ ಆದೇಶ ವಿಸ್ತರಿಸಿದ ಹೈಕೋರ್ಟ್‌

ಶಓಮಿ ಇಂಡಿಯಾ ತನ್ನ ಸ್ಮಾರ್ಟ್‌ಫೋನ್‌ಗಳ ತಯಾರಿಕೆ ಮತ್ತು ಮಾರಾಟಕ್ಕೆ ಅಗತ್ಯವಾದ ವಸ್ತುಗಳನ್ನು ಆಮದು ಮಾಡಿಕೊಳ್ಳಲು ವಿದೇಶಿ ಸಂಸ್ಥೆಗಳಿಗೆ ಹಣ ಪಾವತಿ ಮಾಡಲು ಅನುಮತಿಸಲಾಗಿದೆ ಎಂದು ಪೀಠವು ಆದೇಶದಲ್ಲಿ ಹೇಳಿದೆ.
Karnataka High Court, Xiaomi
Karnataka High Court, Xiaomi

ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ (ಫೇಮಾ) ನಿಬಂಧನೆಗಳ ಅಡಿ ಚೀನಾದ ತಂತ್ರಜ್ಞಾನ ಕಂಪೆನಿ ಶಓಮಿಯ ಬ್ಯಾಂಕ್‌ ಖಾತೆಯಲ್ಲಿನ 5,551.27 ಕೋಟಿ ರೂಪಾಯಿಗಳನ್ನು ವಶಕ್ಕೆ ಪಡೆದು ಆದೇಶ ಮಾಡಿರುವ ಜಾರಿ ನಿರ್ದೇಶನಾಲಯದ ಆದೇಶಕ್ಕೆ ಮಧ್ಯಂತರ ತಡೆ ನೀಡಿರುವುದನ್ನು ಕರ್ನಾಟಕ ಹೈಕೋರ್ಟ್‌ ಗುರುವಾರ ವಿಸ್ತರಿಸಿದೆ.

ಜಾರಿ ನಿರ್ದೇಶನಾಲಯದ ಆದೇಶ ಪ್ರಶ್ನಿಸಿ ಶಓಮಿ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಸುನಿಲ್‌ ದತ್‌ ಯಾದವ್ ಅವರ ನೇತೃತ್ವದ ರಜಾಕಾಲೀನ ಏಕಸದಸ್ಯ ಪೀಠವು ನಡೆಸಿತು. ಶಓಮಿ ಇಂಡಿಯಾ ತನ್ನ ಸ್ಮಾರ್ಟ್‌ಫೋನ್‌ಗಳ ತಯಾರಿಕೆ ಮತ್ತು ಮಾರಾಟಕ್ಕೆ ಅಗತ್ಯವಾದ ವಸ್ತುಗಳನ್ನು ಆಮದು ಮಾಡಿಕೊಳ್ಳಲು ವಿದೇಶಿ ಸಂಸ್ಥೆಗಳಿಗೆ ಹಣ ಪಾವತಿ ಮಾಡಲು ಅನುಮತಿಸಲಾಗಿದೆ ಎಂದು ಪೀಠವು ಆದೇಶದಲ್ಲಿ ಹೇಳಿದೆ.

“ಚೀನಾದ ತಂತ್ರಜ್ಞಾನ ಕಂಪೆನಿ ಶಓಮಿ ಬ್ಯಾಂಕ್‌ ಖಾತೆಗಳನ್ನು ನಿರ್ಬಂಧಿಸಿದ್ದ ಜಾರಿ ನಿರ್ದೇಶನಾಲಯದ ಆದೇಶಕ್ಕೆ ನೀಡಿದ್ದ ಮಧ್ಯಂತರ ತಡೆ ಆದೇಶ ಮುಂದುವರಿಯಲಿದೆ. ತಡೆಯಾಜ್ಞೆ ತೆರವುಗೊಳಿಸುವುದಕ್ಕೆ ಸಂಬಂಧಿಸಿದಂತೆ ದಿನದಂತ್ಯಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಂ ಬಿ ನರಗುಂದ್‌ ತಿಳಿಸಿದ್ದಾರೆ. ಅರ್ಜಿದಾರರು ಕೋರಿರುವಂತೆ ಮಧ್ಯಂತರ ಆದೇಶ ಮಾಡಲು ಹೆಚ್ಚಿನ ವಿಚಾರಣೆ ನಡೆಸಬೇಕಿದೆ. ಸಮಯದ ಕೊರತೆಯಿಂದ ಇಂದು ಮನವಿಯ ವಿಚಾರಣೆ ನಡೆಸಲಾಗದು. ರಾಯಧನ ಹೊರತುಪಡಿಸಿ ಬಾಕಿ ಹಣವನ್ನು ಶಓಮಿಯು ಖಾತೆಯಿಂದ ತೆಗೆದುಕೊಂಡು ವೆಚ್ಚ ಪಾವತಿಸಬಹುದಾಗಿದೆ. ಇದು ಕಂಪೆನಿ ಮತ್ತು ಬ್ಯಾಂಕ್‌ಗೆ ಸಂಬಂಧಿಸಿದ ವಿಚಾರವಾಗಿದೆ” ಎಂದು ಪೀಠ ಆದೇಶದಲ್ಲಿ ಹೇಳಿದ್ದು, ಮೇ 23ಕ್ಕೆ ವಿಚಾರಣೆ ಮುಂದೂಡಿದೆ.

ಶಓಮಿ ಪ್ರತಿನಿಧಿಸಿದ್ದ ಹಿರಿಯ ವಕೀಲ ಎಸ್‌ ಗಣೇಶ್‌ ಅವರು ರಾಯಧನವನ್ನು ಹೊರತುಪಡಿಸಿ ವಿದೇಶಿ ಕಂಪೆನಿಗಳಿಗೆ ಹಣ ಪಾವತಿಸುವುದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಹಿಂದಿನ ಆದೇಶದ ಕುರಿತು ಸ್ಪಷ್ಟನೆ ಪಡೆಯುವಂತೆ ಬ್ಯಾಂಕ್‌ಗಳು ಕೋರಿವೆ ಎಂದರು. “ದಿನನಿತ್ಯ ನಾವು ವಿದೇಶಿ ಕಂಪೆನಿಗಳಿಗೆ ಹಣ ಪಾವತಿಸಬೇಕಿದೆ. ಜಾರಿ ನಿರ್ದೇಶನಾಲಯದ ಆದೇಶವು ರಾಯಧನಕ್ಕೆ ಸೀಮಿತವಾಗಿದೆ” ಎಂದರು.

“ಶಓಮಿ ಕಂಪೆನಿಯು ಕಳೆದ ಎಂಟು ವರ್ಷಗಳಲ್ಲಿ ಅಂದಾಜು ಒಂದು ಲಕ್ಷ ಕೋಟಿ ಮೊತ್ತವನ್ನು ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಪಾವತಿ ಮಾಡಿದೆ. ಕಾನೂನು ಚೌಕಟ್ಟಿನಲ್ಲೇ ತನ್ನ ವಹಿವಾಟು ಮುಂದುವರಿಸಿದೆ. ಆದರೆ, ಈಗ ಜಾರಿ ನಿರ್ದೇಶನಾಲಯವು ಅಕ್ರಮ ವರ್ಗಾವಣೆ ನೆಪದಲ್ಲಿ ಬಹುಕೋಟಿ ಹಣವನ್ನು ಜಪ್ತಿ ಮಾಡಿರುವುದು ಕಾನೂನಿಗೆ ವಿರುದ್ಧವಾಗಿದೆ” ಎಂದು ಆಕ್ಷೇಪಿಸಿದರು.

ಇದಕ್ಕೆ ಇ ಡಿ ಪರ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಂ ಬಿ ನರಗುಂದ ಅವರು ಭಾರತದ ನೆಲದಲ್ಲಿ ಗಳಿಸಿರುವ ಲಾಭದ ಹಣವನ್ನು ಶಓಮಿ ವಿದೇಶಿ ಕಂಪನಿಗಳಿಗೆ ರಾಯಧನದ ಹೆಸರಿನಲ್ಲಿ ಅಕ್ರಮವಾಗಿ ವರ್ಗಾವಣೆ ಮಾಡಿದೆ. ಕಂಪೆನಿಯ ಈ ಕ್ರಮವನ್ನು ಜಾರಿ ನಿರ್ದೇಶನಾಲಯವು ಕಾನೂನು ವ್ಯಾಪ್ತಿಯಲ್ಲಿಯೇ ಪ್ರಶ್ನಿಸಿದೆ. ಈ ಸಂಬಂಧ ಅದು ಕೈಗೊಂಡಿರುವ ಕ್ರಮಗಳು ಕಾನೂನು ಬದ್ಧವಾಗಿಯೇ ಇವೆ. ಇದಕ್ಕೆ ಕಂಪೆನಿ ತಕರಾರು ತೆಗೆದಿರುವುದು ಸರಿಯಲ್ಲ" ಎಂದರು.

"ಭಾರತದ ನೆಲದಲ್ಲಿ ಬಂಡವಾಳ ಹೂಡಿ ಕೋಟ್ಯಂತರ ರೂಪಾಯಿಯನ್ನು ಕಂಪೆನಿಯು ಲಾಭ ಮಾಡಿಕೊಂಡಿದೆ. ಅದಕ್ಕೇ ಲಕ್ಷಗಟ್ಟಲೆ ತೆರಿಗೆ ಕಟ್ಟಿದೆ. ಅದು ಬಿಟ್ಟು ಕಂಪೆನಿಯು ಧರ್ಮಕ್ಕೆ ತೆರಿಗೆ ಕಟ್ಟಿದೆಯೇ? ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದಿರುವ ಹಣವನ್ನು ಶಓಮಿ ಬ್ಯಾಂಕ್‌ನಲ್ಲಿ ಇಡಲಿ. ಉಳಿದ ಹಣವನ್ನು ಬಳಕೆ ಮಾಡಬಹುದು” ಎಂದರು. ಅಲ್ಲದೇ, ಆಕೇಪಣೆಯನ್ನೂ ಸಲ್ಲಿಸಲಾಗಿದೆ ಎಂದು ಪೀಠದ ಗಮನಸೆಳೆದರು.

Also Read
ಶಿಯೋಮಿ ಬ್ಯಾಂಕ್‌ ಖಾತೆ ನಿರ್ಬಂಧಿಸಿದ್ದ ಜಾರಿ ನಿರ್ದೇಶನಾಲಯದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್‌ ತಡೆ

ಕಳೆದ ವಿಚಾರಣೆಯಲ್ಲಿ “ಭಾರತದ ಹೊರಗಿರುವ ಮೂರು ವಿದೇಶಿ ತಂತ್ರಜ್ಞಾನ ಕಂಪೆನಿಗಳಿಗೆ ರಾಯಧನ ಪಾವತಿಸಿರುವುದು ವಿದೇಶಿ ವಿನಿಮಯ ನಿರ್ವಹಣೆ ಕಾಯಿದೆ ಸೆಕ್ಷನ್‌ 4ರ ಉಲ್ಲಂಘನೆ ಎನಿಸಿಕೊಳ್ಳುವುದಿಲ್ಲ. ಆದಾಯ ತೆರಿಗೆ ಇಲಾಖೆಯು ಇದನ್ನು ಕಾನೂನಾತ್ಮಕ ಎಂದು ಪರಿಗಣಿಸಿದ್ದು, ಕಡಿತ ಎಂದು ಪರಿಗಣಿಸಿದೆ. ತಂತ್ರಜ್ಞಾನ ರಾಯಧನ ಪಾವತಿಯನ್ನು 2015-16ರಿಂದ ಇಲ್ಲಿಯವರೆಗೆ ನೋಂದಾಯಿತ ಡೀಲರ್‌ಗಳ ಮೂಲಕ ಕಂಪೆನಿಯು ಪಾವತಿಸಿದ್ದು, ಶಓಮಿ ಭಾರತದ ಹೊರಗೆ ವಿದೇಶಿ ವಿನಿಮಯ ಹೊಂದಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯವಿಲ್ಲ. ಹೀಗಾಗಿ, ಫೇಮಾದ ಸೆಕ್ಷನ್‌ 37ಎ ಅಡಿ ಜಾರಿ ನಿರ್ದೇಶನಾಲಯವು ಮಾಡಿರುವ ಆದೇಶವು ನಿಲ್ಲುವುದಿಲ್ಲ” ಶಓಮಿ ಪರ ವಕೀಲರು ವಾದಿಸಿದ್ದರು.

Related Stories

No stories found.
Kannada Bar & Bench
kannada.barandbench.com