Kapil Sibal 
ಸುದ್ದಿಗಳು

ವಕೀಲರ ಕಲ್ಯಾಣಕ್ಕೆ ₹43 ಕೋಟಿ ಸಂಗ್ರಹಿಸಿದ ಎಸ್‌ಸಿಬಿಎ; ವೈದ್ಯಕೀಯ ವಿಮೆ, ಆರ್ಥಿಕ ಸವಲತ್ತು ಒದಗಿಸುವ ಉದ್ದೇಶ

ಎಸ್‌ಸಿಬಿಎ ಅಧ್ಯಕ್ಷ ಗಾದಿಗೆ ನಡೆದ ಚುನಾವಣೆ ವೇಳೆ ಸಿಬಲ್ ಅವರು ನೀಡಿದ್ದ ಭರವಸೆಯಂತೆ ಸಿಎಸ್ಆರ್ ಕೊಡುಗೆ ಮೂಲಕ ಹಣ ಸಂಗ್ರಹಿಸಲಾಗಿದೆ.

Bar & Bench

ನ್ಯಾಯವಾದಿಗಳ ಕಲ್ಯಾಣಕ್ಕಾಗಿ ಸುಪ್ರೀಂ ಕೋರ್ಟ್‌ ವಕೀಲರ ಸಂಘ (ಎಸ್‌ಸಿಬಿಎ) ₹43 ಕೋಟಿಗೂ ಹೆಚ್ಚು ಹಣ ಸಂಗ್ರಹಿಸಿದ ಹಿನ್ನೆಲೆಯಲ್ಲಿ ಸಂಘದ ಅಧ್ಯಕ್ಷ ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರನ್ನು ವಕೀಲ ಸಮುದಾಯ ಬುಧವಾರ ಸನ್ಮಾನಿಸಿದೆ.

ಎಸ್‌ಸಿಬಿಎ ಪ್ರಕಾರ, ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್‌) ಉಪಕ್ರಮಗಳ ಮೂಲಕ ಒಟ್ಟು ₹43,43,50,000 ಸಂಗ್ರಹಿಸಲಾಗಿದೆ. ಎಸ್‌ಸಿಬಿಎ ಅಧ್ಯಕ್ಷ ಗಾದಿಗೆ ನಡೆದ ಚುನಾವಣೆ ವೇಳೆ ಸಿಬಲ್ ಅವರು ನೀಡಿದ್ದ ಭರವಸೆಯಂತೆ ಸಿಎಸ್ಆರ್ ಕೊಡುಗೆ ಮೂಲಕ ನಿಧಿ ಸಂಗ್ರಹಿಸಲಾಗಿದೆ.

ವಕೀಲರ ವೈದ್ಯಕೀಯ ವಿಮೆ, ಆರ್ಥಿಕ ಸೌಲಭ್ಯಕ್ಕಾಗಿ ಕಲ್ಯಾಣ ನಿಧಿಯನ್ನು ವಿನಿಯೋಗಿಸಲಾಗುವುದು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ವಕೀಲರ ಅಕಡೆಮಿಕ್‌ ಸಮೂಹವಾದ ಫ್ರೈಡೇ ಗ್ರೂಪ್‌ನ ಸದಸ್ಯರು ಸಿಬಲ್‌ ಅವರನ್ನು ಏಪ್ರಿಲ್ 9ರಂದು ಸುಪ್ರೀಂ ಕೋರ್ಟ್ ಆವರಣದಲ್ಲಿರುವ ಲೈಬ್ರರಿ 2ರಲ್ಲಿ ಸನ್ಮಾನಿಸಿದರು.

ಈ ವೇಳೆ ಮಾತನಾಡಿದ ಸಿಬಲ್‌, ಇದು ವಕೀಲ ಸಮುದಾಯಕ್ಕಾಗಿ ಮೀಸಲಿರಿಸಿದ ಹಣ ಎಂದು. ನಾವು ವಕೀಲರ ಕಲ್ಯಾಣಕ್ಕಾಗಿ ಹಣ ಕೇಳಿದಾಗ ಉದ್ಯಮಿ ಅಂಬಾನಿ ಸೇರಿದಂತೆ ಯಾರೂ ತಮ್ಮ ಬೇಡಿಕೆಯನ್ನು ತಿರಸ್ಕರಿಸಲಿಲ್ಲ ಎಂದು ಅವರು ನುಡಿದರು.

 "ಯಾರೂ ನನಗೆ ಇಲ್ಲ ಎಂದು ಹೇಳಲಿಲ್ಲ. ಮುಖೇಶ್ ಅಂಬಾನಿಯಿಂದ ಟೊರೆಂಟ್ ಕಂಪೆನಿಯವರೆಗೆ, ಯಾರೂ ನನಗೆ ಇಲ್ಲ ಎಂದು ಹೇಳಲಿಲ್ಲ” ಎಂದರು. ಇದೇ ವೇಳೆ ₹50 ಕೋಟಿಯ ಮೂಲ ಗುರಿಯನ್ನು ಏಪ್ರಿಲ್ ಅಂತ್ಯದ ವೇಳೆಗೆ ಮುಟ್ಟಲಾಗುವುದು ಎನ್ನುವ ಭರವಸೆ ವ್ಯಕ್ತಪಡಿಸಿದರು.

ಅಂಬಾನಿಯಿಂದ ಟೊರೆಂಟ್ ಕಂಪೆನಿಯವರೆಗೆ, ಯಾರೂ ನನಗೆ ಇಲ್ಲ ಎಂದು ಹೇಳಲಿಲ್ಲ.
ಕಪಿಲ್ ಸಿಬಲ್

ವಕೀಲರಿಗಾಗಿ ಸುಸ್ಥಿರ ವಿಮಾ ಯೋಜನೆ ರೂಪಿಸುವುದು ತಮ್ಮ ದೀರ್ಘಕಾಲದ ಆಲೋಚನೆಯಾಗಿದೆ. ಇದಕ್ಕಾಗಿ ₹120 ಕೋಟಿ ಕೋಟಿ ಅಗತ್ಯವಿದ್ದು, ಇದರಲ್ಲಿ ₹ 60 ಕೋಟಿ ಹಣವನ್ನು ಎಸ್‌ಸಿಬಿಎ ಸಂಗ್ರಹಿಸಲಿದ್ದು, ತತ್ಸಮಾನ ಹಣವನ್ನು ಸುಪ್ರೀಂ ಕೋರ್ಟ್‌ ಒದಗಿಸುವ ವಿಶ್ವಾಸವನ್ನು ಸಿಬಲ್‌ ವ್ಯಕ್ತಪಡಿಸಿದರು. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವ ಭರವಸೆಯನ್ನು ಸಿಜೆಐ ಸಂಜೀವ್‌ ಖನ್ನಾ ಅವರು ನೀಡಿದ್ದಾರೆ ಎಂದು ತಿಳಿಸಿದರು.

ದೇಶಾದ್ಯಂತ ಇರುವ ವಕೀಲರ ಸಂಘಗಳು ಇಂತಹ ಯೋಜನೆಯನ್ನು ಪುನರಾವರ್ತಿಸಬೇಕೆಂದು ಫ್ರೈಡೇ ಗ್ರೂಪ್‌ನ ಸಂಸ್ಥಾಪಕ ವಕೀಲ ಜಿ ಶೇಷಗಿರಿ ಈ ವೇಳೆ  ಕರೆ ನೀಡಿದರು.