ಕ್ರಿಮಿನಲ್ ಪ್ರಕರಣಗಳಲ್ಲಿ ಜಾಮೀನು ನೀಡಿದರೆ ವರ್ಗಾವಣೆಯಾಗುವ ಇಲ್ಲವೇ ಬಡ್ತಿ ಅವಕಾಶ ಕಳೆದುಕೊಳ್ಳುವ ಅಪಾಯ ಎದುರಾಗುತ್ತದೆ ಎಂಬ ಕಾರಣಕ್ಕೆ ಅಂತಹ ಪ್ರಕರಣಗಳಲ್ಲಿ ಜಾಮೀನು ನೀಡಲು ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ಹಿಂಜರಿಯುತ್ತಾರೆ ಎಂದು ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಹೇಳಿದರು.
ಸಿಕ್ಕಿಂ ನ್ಯಾಯಾಂಗ ಅಕಾಡೆಮಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ರಾಜ್ಯಸಭಾ ಸದಸ್ಯರೂ ಆಗಿರುವ ಸಿಬಲ್ ಈ ವಿಚಾರ ತಿಳಿಸಿದರು.
ನಿರ್ದಿಷ್ಟ ರೀತಿಯಲ್ಲಿ ಪ್ರಕರಣಗಳ ತೀರ್ಪು ನೀಡಿದ್ದರಿಂದ ಒರಿಸ್ಸಾ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಸ್ ಮುರಳೀಧರ್ (ಈಗ ಹಿರಿಯ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ) ಮತ್ತು ರಾಜಸ್ಥಾನ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಅಕಿಲ್ ಕುರೇಶಿ ಅವರಂತಹವರನ್ನೇ ವರ್ಗಾವಣೆ ಮಾಡಲಾಗಿದೆ. ಹೀಗೆ ಹೈಕೋರ್ಟ್ ನ್ಯಾಯಮೂರ್ತಿಗಳನ್ನೇ ವರ್ಗಾವಣೆ ಮಾಡಬಹುದಾದರೆ ಅಧೀನ ನ್ಯಾಯಾಲಯಗಳ ನ್ಯಾಯಾಧೀಶರಿಗೆ ವರ್ಗಾವಣೆ ಭೀತಿ ಇರುವುದಿಲ್ಲವೇ ಎಂದು ಸಿಬಲ್ ಪ್ರಶ್ನಿಸಿದರು.
ಜಾಮೀನು ನೀಡಿ ಅಥವಾ ನಿರಾಕರಿಸಿ ತೀರ್ಪು ನೀಡಿದರೆ ನ್ಯಾಯಾಧೀಶರ ವೃತ್ತಿಜೀವನದ ಮೇಲೆ ಪರಿಣಾಮ ಬೀರಬಹುದು ಎಂಬುದು ಸಮಸ್ಯೆಯ ಕೇಂದ್ರಬಿಂದುವಾಗಿದೆ ಎಂದು ಅವರು ಹೇಳಿದರು.
ಈಚೆಗೆ ನ್ಯಾಯಾಧೀಶೆಯೊಬ್ಬರು ಗಣ್ಯ ವ್ಯಕ್ತಿಯೊಬ್ಬರಿಗೆ ಸಂಬಂಧಿಸಿದಂತೆ ಆದೇಶ ನೀಡಿದರು. ತಕ್ಷಣವೇ ಆ ನ್ಯಾಯಾಧೀಶರನ್ನು ಬದಲಿಸಲಾಯಿತು. ಇದನ್ನು ಯಾವ ನ್ಯಾಯಾಧೀಶರೂ ಬಯಸುವುದಿಲ್ಲ ಎಂದು ಸಿಬಲ್ ಹೇಳಿದರು. (ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾಮೀನು ನೀಡಿದ ದೆಹಲಿ ನ್ಯಾಯಾಲಯದ ನ್ಯಾಯಾಧೀಶೆ ನಿಯಯ್ ಬಿಂದು ಅವರನ್ನು ವರ್ಗಾವಣೆ ಮಾಡಿದ್ದನ್ನು ಸಿಬಲ್ ಪರೋಕ್ಷವಾಗಿ ಪ್ರಸ್ತಾಪಿಸಿದರು. )
ಇದು ಭಾರತದಲ್ಲಿ ನ್ಯಾಯಾಧೀಶರನ್ನು ನೇಮಕ ಮಾಡುವ ವಿಧಾನಕ್ಕೆ ಸಂಬಂಧಿಸಿದೆ. ಪ್ರಸ್ತುತ ಕೊಲಿಜಿಯಂ ವ್ಯವಸ್ಥೆ ಅಧಿಕಾರದ ಕೇಂದ್ರೀಕರಣ ವಿಧಾನ ಒಳಗೊಂಡಿದ್ದು, ಅದನ್ನು ತೆಗೆದುಹಾಕಬೇಕು ಎಂದು ಸಿಬಲ್ ಹೇಳಿದರು.
ಅಖಿಲ ಭಾರತ ನ್ಯಾಯಾಂಗ ಸೇವೆಗಳು ಅಥವಾ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಸಮಿತಿ (NJAC) ಕೊಲಿಜಿಯಂ ವ್ಯವಸ್ಥೆಗೆ ಪರ್ಯಾಯವಲ್ಲ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು.
ನ್ಯಾಯಾಧೀಶರನ್ನು ನೇಮಿಸುವ ಪರ್ಯಾಯ ವಿಧಾನ ಯಾವುದೇ ಸಂದರ್ಭದಲ್ಲಿ ವ್ಯಾಪಕ ಶ್ರೇಣಿಯ ಭಾಗೀದಾರರನ್ನು ಒಳಗೊಂಡಿರಬೇಕು. ಪ್ರಸ್ತುತ ವ್ಯವಸ್ಥೆಯಲ್ಲಿ ಸಕ್ರಿಯ ಪಾಲನ್ನು ಹೊಂದಿರುವವರನ್ನು ಹೊರಗಿಡಬೇಕು ಎಂದು ಅವರು ಹೇಳಿದರು.
ಇದೇ ವೇಳೆ ಉದಾರಿ ನ್ಯಾಯಾಧೀಶರು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗುತ್ತಿದ್ದರಂತೆ ಅವರು ನೀಡುವ ತೀರ್ಪಿನಲ್ಲಿ ಬದಲಾವಣೆಗಳಾಗುತ್ತವೆ ಎಂದು ಕೂಡ ಅವರು ಗಮನ ಸೆಳೆದರು. ಅರ್ಹತೆಯ ಮೇಲೆ ಕೊಲಿಜಿಯಂ ನ್ಯಾಯಾಧೀಶರನ್ನು ಆಯ್ಕೆ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.