Delhi High Court 
ಸುದ್ದಿಗಳು

ವಿಧಿವಿಜ್ಞಾನ ವರದಿ ಪ್ರಾಸಿಕ್ಯೂಷನ್‌ಗೆ ಪೂರಕವಾಗಿಲ್ಲ: ಗಲಭೆ ಆರೋಪಿಗೆ ಜಾಮೀನು ನೀಡಿದ ದೆಹಲಿ ಹೈಕೋರ್ಟ್

ಆರೋಪಿ ಯೋಗೇಶ್ ಅವರ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಸುರೇಶ ಕೈಟ್ ಅವರ ಏಕಸದಸ್ಯ ಪೀಠವು ಆದೇಶ ನೀಡಿದೆ.

Bar & Bench

ವಿಧಿವಿಜ್ಞಾನ ವರದಿಯು (ಎಫ್‌ಎಸ್‌ಎಲ್‌) ಪ್ರಾಸಿಕ್ಯೂಷನ್‌ ವಾದಕ್ಕೆ ಪೂರಕವಾಗಿಲ್ಲ ಮತ್ತು ಆರೋಪಿಯು ಅಪರಾಧ ಕೃತ್ಯ ನಡೆದ ಸ್ಥಳದಲ್ಲಿದ್ದನ್ನು ಸಾಬೀತುಪಡಿಸುವ ದಾಖಲೆಗಳು ಲಭ್ಯವಾಗಿಲ್ಲ ಎಂದು ದೆಹಲಿ ಗಲಭೆಯ ಆರೋಪಿಗೆ ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಸುರೇಶ್‌ ಕೈಟ್‌ ಅವರಿದ್ದ ಏಕಸದಸ್ಯ ಪೀಠವು ಜಾಮೀನು ಮಂಜೂರು ಮಾಡಿದೆ (ಯೋಗೇಶ್‌ ವರ್ಸಸ್‌ ಸ್ಟೇಟ್).

ಆರೋಪಿ ಯೋಗೇಶ್‌ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್‌ಗಳಾದ 147/148/149/302/153- A/436/505/34/120B ಅಡಿ ಎಫ್‌ಐಆರ್‌ ದಾಖಲಿಸಲಾಗಿತ್ತು. ಫೆಬ್ರುವರಿ 25ರಂದು ಚರಂಡಿಯಲ್ಲಿ ಮೃತದೇಹವು ಕೊಳತೆ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅದರಲ್ಲಿ ಎರಡು ಬುಲೆಟ್‌ ಗಾಯ ಮತ್ತು 17 ಸೀಳಿರುವ ಗಾಯಗಳು ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದೆ ಎಂದಿರುವ ಪ್ರಾಸಿಕ್ಯೂಷನ್‌, ಆರೋಪಿಯ ಜಾಮೀನಿಗೆ ವಿರೋಧ ವ್ಯಕ್ತಪಡಿಸಿತು. ಮತ್ತೊಂದು ಎಫ್‌ಐಆರ್‌ಗೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿದಾಗ ಹಾಲಿ ಪ್ರಕರಣದಲ್ಲಿ ಭಾಗಿಯಾಗಿರುವ ಕುರಿತು ಆರೋಪಿ ಬಾಯಿಬಿಟ್ಟಿದ್ದಾನೆ ಎಂದೂ ವಾದಿಸಲಾಗಿತ್ತು.

ಜಾಮೀನು ಕೋರಿರುವ ಆರೋಪಿಯು ಮುಸ್ಲಿಮ್‌ ವಿರೋಧಿ ಘೋಷಣೆಗಳನ್ನು ಕೂಗುತ್ತಾ ಉದ್ರಿಕ್ತರ ಗುಂಪನ್ನು ಮುನ್ನಡೆಸುತ್ತಿದ್ದುದಾಗಿ ಇಬ್ಬರು ಸಾಕ್ಷಿಗಳು ಹಾಗೂ ಮತ್ತೊಬ್ಬರು ಗುರುತಿಸಿದ್ದಾರೆ ಎಂದು ಪ್ರಾಸಿಕ್ಯೂಷನ್‌ ವಾದಿಸಿತ್ತು.

ಆದರೆ, ಎಫ್‌ಎಸ್‌ಎಲ್‌ ವರದಿ ಹಾಗೂ ವಿಡಿಯೋ ದೃಶ್ಯಾವಳಿಗಳು ಪ್ರಾಸಿಕ್ಯೂಷನ್ ವಾದವನ್ನು ಸಮರ್ಥಿಸುತ್ತಿಲ್ಲ ಎನ್ನುವುದನ್ನು ನ್ಯಾಯಾಲಯ ಪರಿಗಣಿಸಿತು. “ಈ ನ್ಯಾಯಾಲಯದ ಆದೇಶದಂತೆ ಎಫ್‌ಎಸ್‌ಎಲ್‌ ಮತ್ತು ಡಿವಿಆರ್‌ಗಳ ಫಲಿತಾಂಶಗಳು ಸಲ್ಲಿಕೆಯಾಗಿವೆ. ಎಫ್‌ಎಸ್‌ಎಲ್‌ ವರದಿಯ ಫಲಿತಾಂಶದ ಪ್ರಕಾರ ಮೃತದೇಹದಲ್ಲಿ ದೊರೆತ ಮೂರು ಬುಲೆಟ್‌ಗಳು ದೇಶಿ ನಿರ್ಮಿತ ಪಿಸ್ತೂಲಿನಿಂದ ಆರಿಸಿದ್ದಲ್ಲ..” ಎಂದು ನ್ಯಾಯಾಲಯವು ಹೇಳಿತು.

ಮುಂದುವರೆದು, “ಡಿವಿಆರ್‌ ನಂಬರ್‌ 3ರಲ್ಲಿ ದೊರೆತ ದತ್ತಾಂಶವನ್ನು ಪಡೆಯಲಾಗುತ್ತಿಲ್ಲ. ಈ ಘಟನೆ ನಡೆದ ಸ್ಥಳದಲ್ಲಿ ಸಿಸಿಟಿವಿ ಅವಳವಡಿಸಿದ್ದರಿಂದ ಡಿವಿಆರ್‌ 3ರ ದತ್ತಾಂಶ ಅತ್ಯಂತ ಮುಖ್ಯವಾಗಿದೆ. ಚಾನೆಲ್‌ ನಂಬರ್‌ 1ನ್ನು 08.54.51ರ ಸಮಯದಲ್ಲಿ ಬೇರೆ ಕಡೆಗೆ ತಿರುಗಿಸಲಾಗಿದೆ. ಚಾನೆಲ್‌ ನಂಬರ್‌ 2ನ್ನು 08.54.12ರ ಸಮಯದಲ್ಲಿ ಬದಲಿಸುವ ಮೂಲಕ ಸಿಸಿಟಿವಿ ದೃಶ್ಯಾವಳಿ ಸಂಗ್ರಹವಾಗದಂತೆ ಮಾಡಲಾಗಿದೆ. ಡಿವಿಆರ್‌ ನಂಬರ್‌ 2 ಸಮೀಪದ ಸ್ಥಳದ ದೃಶ್ಯಾವಳಿಯನ್ನು ಮಾತ್ರ ಸಂಗ್ರಹಿಸಿದೆ,” ಎಂದು ಪೀಠವು ವಿವರಿಸಿತು.

ಎಫ್‌ಎಸ್‌ಎಸಲ್‌ ವರದಿಯು ಪ್ರಾಸಿಕ್ಯೂಷನ್‌ ವಾದ ಮತ್ತು ಡಿವಿಆರ್‌ ಫಲಿತಾಂಶಕ್ಕೆ ಪೂರಕವಾಗಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕಿದೆ. ಹಾಲಿ ಪ್ರಕರಣ ಘಟಿಸಿದಾಗ ಅರ್ಜಿದಾರರು ಸ್ಥಳದಲ್ಲಿದ್ದರು ಎಂದು ಸಾಬೀತುಪಡಿಸಲಾಗಿಲ್ಲ. ಈ ಹಿನ್ನೆಲೆಯಲ್ಲಿ ಪ್ರಾಸಿಕ್ಯೂಷನ್‌ ವಾದದ ಅರ್ಹತೆಯ ಮೇಲೆ ಪ್ರತಿಕ್ರಿಯಿಸದೇ, ಅರ್ಜಿದಾರರು ಜಾಮೀನಿಗೆ ಅರ್ಹರು ಎಂದು ನನಗನ್ನಿಸುತ್ತದೆ.
ದೆಹಲಿ ಹೈಕೋರ್ಟ್
ಮುಂದುವರೆದ ಪೀಠವು, “ ವಿಚಾರಣಾ ನ್ಯಾಯಾಲಯವು ಪ್ರಕರಣದ ಸಂಬಂಧ ಆದೇಶ ಹೊರಡಿಸುವಾಗ ಈ ನ್ಯಾಯಾಲಯ ಗಮನಿಸಿದ ಅಂಶಗಳಿಂದ ಪ್ರಭಾವಿತಗೊಳ್ಳಬಾರದು” ಎಂದು ಸ್ಪಷ್ಟಪಡಿಸಿತು.

ವಕೀಲ ಗೌರವ್‌ ವರ್ಮಾ ಅವರು ಜಾಮೀನು ಕೋರಿರುವ ಆರೋಪಿಯ ಪರ ವಾದಿಸಿದರೆ, ಹೆಚ್ಚುವರಿ ಸರ್ಕಾರಿ ಅಭಿಯೋಜಕ ಮನೋಜ್‌ ಚೌಧರಿ ಅವರು ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದರು.