<div class="paragraphs"><p>Amazon, Future, Supreme Court</p></div>

Amazon, Future, Supreme Court

 
ಸುದ್ದಿಗಳು

ಫ್ಯೂಚರ್- ಅಮೆಜಾನ್ ಪ್ರಕರಣ: ದೆಹಲಿ ಹೈಕೋರ್ಟ್ ಮೊರೆ ಹೋಗಲು ಫ್ಯೂಚರ್‌ಗೆ ಸುಪ್ರೀಂ ಕೋರ್ಟ್‌ ಅನುಮತಿ

Bar & Bench

ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್‌ ಜೊತೆಗಿನ ತನ್ನ ರೂ. 27,513 ಕೋಟಿ ವಹಿವಾಟಿನ ಒಪ್ಪಂದಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ (ಎನ್‌ಸಿಎಲ್‌ಟಿ) ವಿಚಾರಣೆ ಪುನರಾರಂಭಿಸಲು ಅನುಮತಿ ನೀಡುವಂತೆ ಕೋರಿ ದೆಹಲಿ ಹೈಕೋರ್ಟ್‌ಗೆ ಮೊರೆ ಹೋಗಲು ಫ್ಯೂಚರ್ ರೀಟೇಲ್ ಲಿಮಿಟೆಡ್‌ಗೆ ಸುಪ್ರೀಂ ಕೋರ್ಟ್‌ ಮಂಗಳವಾರ ಹಸಿರು ನಿಶಾನೆ ತೋರಿದೆ.

ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಮತ್ತು ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಹಾಗೂ ಹಿಮಾ ಕೊಹ್ಲಿ ಅವರಿದ್ದ ಪೀಠ ಈ ಆದೇಶ ನೀಡಿದೆ.

"ಎನ್‌ಸಿಎಲ್‌ಟಿ ಪ್ರಕ್ರಿಯೆಗಳನ್ನು ಪುನರಾರಂಭಿಸಲು ಅರ್ಜಿಯನ್ನು ಸಲ್ಲಿಸಲು ನಾವು ಫ್ಯೂಚರ್‌ ಸಂಸ್ಥೆಯನ್ನು ಹೈಕೋರ್ಟ್‌ಗೆ ಸಂಪರ್ಕಿಸಲು ಅವಕಾಶ ನೀಡುತ್ತೇವೆ ಮತ್ತು ಅದಕ್ಕೆ ಸಂಬಂಧಿಸಿದಂತೆ ಆದೇಶಗಳನ್ನು ರವಾನಿಸಲು ಏಕ-ಸದಸ್ಯ ಪೀಠವನ್ನು ವಿನಂತಿಸುತ್ತೇವೆ" ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಅಮೆಜಾನ್-ಫ್ಯೂಚರ್ ಗ್ರೂಪ್ ವಿವಾದಕ್ಕೆ ಸಂಬಂಧಿಸಿದ ಪ್ರಕರಣಗಳು ನ್ಯಾಯಮೂರ್ತಿ ಸಿ ಹರಿಶಂಕರ್ ಅವರಿರುವ ಏಕಸದಸ್ಯ ಪೀಠದ ಮುಂದೆ ಇವೆ.

ಎನ್‌ಸಿಎಲ್‌ಟಿಯಿಂದ ಅನುಮೋದನೆ ಪಡೆಯಲು ಹಲವು ಹಂತಗಳಿದ್ದು ಇದಕ್ಕೆ ಕೆಲವು ತಿಂಗಳೇ ಹಿಡಿಯುತ್ತದೆ. ಆದ್ದರಿಂದ ಪ್ರಕ್ರಿಯೆ ಮುಂದುವರಿಸಲು ನ್ಯಾಯಾಲಯವು ಅನುಮತಿಸಬೇಕು ಎಂದು ಫ್ಯೂಚರ್ ರಿಟೇಲ್ ಸರ್ವೋಚ್ಚ ನ್ಯಾಯಾಲಯವನ್ನು ಕೋರಿತ್ತು.

ಒಪ್ಪಂದಕ್ಕೆ ಮುಂದಾಗದಂತೆ ಫ್ಯೂಚರ್‌ ಗ್ರೂಪ್‌ ಅನ್ನು ನಿರ್ಬಂಧಿಸಿದ್ದ ಸಿಂಗಪೊರ್ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ (ಎಸ್‌ಐಎಸಿ) ಹೊರಡಿಸಿದ್ದ ತುರ್ತು ಪರಿಹಾರ ಆದೇಶಕ್ಕೆ ತಡೆ ನೀಡಲು ನಿರಾಕರಿಸಿ ದೆಹಲಿ ಹೈಕೋರ್ಟ್‌ ಕಳೆದ ವರ್ಷದ ಅಕ್ಟೋಬರ್‌ 29ರಂದು ಹೊರಡಿಸಿದ್ದ ಆದೇಶವನ್ನು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಬದಿಗೆ ಸರಿಸಿತ್ತು. ಪ್ರಕರಣವನ್ನು ಹೊಸದಾಗಿ ಪರಿಗಣಿಸುವಂತೆ ದೆಹಲಿ ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್‌ ಈ ವೇಳೆ ಸೂಚಿಸಿತ್ತು.