BJP MLA Madal Virupakshappa, his son Prashanth and Bengaluru city civil court 
ಸುದ್ದಿಗಳು

ಶಾಸಕ ವಿರೂಪಾಕ್ಷಪ್ಪ, ಪುತ್ರ ಪ್ರಶಾಂತ್‌ ವಿರುದ್ಧ ಮಾನಹಾನಿ ಸುದ್ದಿ ಪ್ರಕಟಿಸದಂತೆ ಮಾಧ್ಯಮಗಳಿಗೆ ಪ್ರತಿಬಂಧಕಾದೇಶ

ಮುಂದಿನ ವಿಚಾರಣೆಯವರೆಗೆ ಮಾದ್ಯಮಗಳು ಯಾವುದೇ ತೆರನಾದ ಚರ್ಚೆ ನಡೆಸದಂತೆ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಪ್ರತಿವಾದಿಗಳಿಗೆ ಸಮನ್ಸ್‌ ಜಾರಿ ಮಾಡಲಾಗಿದ್ದು, ವಿಚಾರಣೆಯನ್ನು ಏಪ್ರಿಲ್‌ 20ಕ್ಕೆ ಮುಂದೂಡಿದ ನ್ಯಾಯಾಲಯ.

Siddesh M S

ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆಗೆ (ಕೆಎಸ್‌ಡಿಎಲ್‌) ಕಚ್ಚಾ ಸಾಮಗ್ರಿ ಪೂರೈಸುವ ಗುತ್ತಿಗೆಯ ಕಾರ್ಯಾದೇಶ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿರುವ ಪ್ರಕರಣದಲ್ಲಿ ಆರೋಪಿಗಳಾಗಿರುವ ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ, ಅವರ ಪುತ್ರ ಬೆಂಗಳೂರು ಜಲ ಮಂಡಳಿಯಲ್ಲಿ ಮುಖ್ಯ ಲೆಕ್ಕಾಧಿಕಾರಿ ಎಂ ವಿ ಪ್ರಶಾಂತ್‌ ಕುಮಾರ್‌ ಅವರ ವಿರುದ್ಧ ಯಾವುದೇ ತೆರನಾದ ಮಾನಹಾನಿ ಸುದ್ದಿ ಪ್ರಕಟಿಸದಂತೆ ಬೆಂಗಳೂರಿನ ಸತ್ರ ನ್ಯಾಯಾಲಯವು ಸೋಮವಾರ ಮಾಧ್ಯಮಗಳ ವಿರುದ್ಧ ಏಕಪಕ್ಷೀಯ ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡಿದೆ.

ಮಾಡಾಳ್‌ ವಿರೂಪಾಕ್ಷಪ್ಪ ಮತ್ತು ಪ್ರಶಾಂತ್‌ ಕುಮಾರ್‌ ಅವರು ದಾಖಲಿಸಿರುವ ದಾವೆಯ ವಿಚಾರಣೆ ನಡೆಸಿದ ಬೆಂಗಳೂರಿನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಾಲಗೋಪಾಲ ಕೃಷ್ಣ ಅವರು ಈ ಆದೇಶ ಮಾಡಿದ್ದಾರೆ.

“ಸುದ್ದಿ ಚಾನೆಲ್‌ಗಳು, ಮಾಧ್ಯಮಗಳಲ್ಲಿ ಫಿರ್ಯಾದಿಗಳ ವಿರುದ್ಧ ಯಾವುದೇ ತೆರೆನಾದ ಮಾನಹಾನಿ ಅಭಿಪ್ರಾಯ ಪ್ರಸಾರ, ಪ್ರಚಾರ, ಅಭಿವ್ಯಕ್ತಿ ಮಾಡದಂತೆ ಪ್ರತಿವಾದಿ ಮಾಧ್ಯಮಗಳನ್ನು ನಿರ್ಬಂಧಿಸಲಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿವಾದಿಗಳನ್ನು ಮುಂದಿನ ವಿಚಾರಣೆಯವರೆಗೆ ಯಾವುದೇ ತೆರನಾದ ಚರ್ಚೆ (ಪ್ಯಾನಲ್‌ ಡಿಸ್ಕಷನ್‌) ನಡೆಸದಂತೆ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ” ಎಂದು ಆದೇಶದಲ್ಲಿ ಹೇಳಲಾಗಿದೆ. ಪ್ರತಿವಾದಿಗಳಿಗೆ ಸಮನ್ಸ್‌ ಜಾರಿ ಮಾಡಲಾಗಿದ್ದು, ವಿಚಾರಣೆಯನ್ನು ಏಪ್ರಿಲ್‌ 20ಕ್ಕೆ ಮುಂದೂಡಲಾಗಿದೆ.

ಫಿರ್ಯಾದಿಗಳು ಸಮಾಜದಲ್ಲಿ ಗಳಿಸಿರುವ ಉತ್ತಮ ಹೆಸರಿಗೆ ಕಳಂಕ ಉಂಟು ಮಾಡಲು ಮಾಧ್ಯಮಗಳು ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ವಿದ್ಯುನ್ಮಾನ ಮಾಧ್ಯಮಗಳು ಸುದ್ದಿ ಪ್ರಸಾರ ಮಾಡುತ್ತಿವೆ. ಸತ್ಯವನ್ನು ಪರಿಶೀಲಿಸದೇ ಸುದ್ದಿ ಪ್ರಸಾರ ಮಾಡುತ್ತಿರುವ ಮಾಧ್ಯಮಗಳ ಕೆಲಸದಲ್ಲಿ ಪ್ರಾಮಾಣಿಕತೆ ಕಾಣುತ್ತಿಲ್ಲ. ಹೀಗಾಗಿ, ಏಕಪಕ್ಷೀಯ ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡಲು ಇದು ಸೂಕ್ತ ಪ್ರಕರಣವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಅರ್ಜಿದಾರರ ಪರ ವಕೀಲರು “ಲೋಕಾಯುಕ್ತ ಪೊಲೀಸರು ಆರೋಪಿಯ ಕಚೇರಿ ದಾಳಿ ನಡೆಸಿ ಕಂತೆಗಟ್ಟಲೆ ಹಣ ಜಫ್ತಿ ಮಾಡಿದ್ದರೂ ಫಿರ್ಯಾದಿಗಳು ಭಾರಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂಬ ತೀರ್ಮಾನಕ್ಕೆ ಬರಲಾಗದು. ಹಣ ಜಫ್ತಿ ಮಾಡಿದ ಕಾರಣಕ್ಕೆ ಫಿರ್ಯಾದಿಗಳು ಕಡು ಭ್ರಷ್ಟರು ಎನ್ನುವ ನಿರ್ಣಯ ಮಾಡಲಾಗದು. ಹೈಕೋರ್ಟ್‌ ಆದೇಶದ ಪ್ರಕಾರ ತನಿಖೆ ಬಾಕಿ ಇರುವಾಗ ತನಿಖಾ ಸಂಸ್ಥೆಯು ಡೈರಿಯ ವಿಚಾರಗಳನ್ನು ಇತರರಿಗೆ ಸೋರಿಕೆ ಮಾಡುವಂತಿಲ್ಲ. ಮಾಹಿತಿ ಸೋರಿಕೆ ಮಾಡಿದರೆ ತನಿಖೆಯ ಹಳಿ ತಪ್ಪಲಿದೆ. ವಿಸ್ತೃತ ನೆಲೆಯಲ್ಲಿ ಸಾರ್ವಜನಿಕರ ದೃಷ್ಟಿಯಿಂದ ಮಾಧ್ಯಮಗಳು ಪ್ರಸಾರ ಮಾಡುವ ವಿಚಾರಗಳು ಸತ್ಯದಿಂದ ಕೂಡಿರಬೇಕು. ಫಿರ್ಯಾದಿಗಳು ಭ್ರಷ್ಟರು ಎಂಬುದನ್ನು ಒಪ್ಪಬಹುದು, ಮೇಲಿಂದ ಮೇಲೆ ಸುದ್ದಿ ಚಾನೆಲ್‌ಗಳು ನಡೆಸುತ್ತಿರುವ ಚರ್ಚೆಗಳು ಫಿರ್ಯಾದಿಗಳ ಚಾರಿತ್ರ್ಯಹನನವಲ್ಲದೇ ಬೇರೇನೂ ಅಲ್ಲ. ಸತ್ಯವಿದ್ದರೆ ಮಾಧ್ಯಮಗಳು ಸುದ್ದಿ ಪ್ರಕಟಿಸಬಹುದು. ಅದನ್ನು ಪರಿಶೀಲಿಸಿ ಪ್ರಕಟಿಸಬೇಕಿದೆ. ಮಾಧ್ಯಮಗಳಿಗೆ ದೊರೆತಿರುವ ಸಾಂವಿಧಾನಿಕ ಹಕ್ಕುಗಳನ್ನು ಅವುಗಳು ದುರ್ಬಳಕೆ ಮಾಡುವಂತಿಲ್ಲ” ಎಂದು ವಾದಿಸಿದ್ದರು.

ಅರ್ಜಿದಾರರ ಪರವಾಗಿ ಹಿರಿಯ ವಕೀಲ ಎಂ ಎಸ್‌ ಶ್ಯಾಮ್‌ಸುಂದರ್‌ ಮತ್ತು ವಕೀಲೆ ಪಿ ಎಲ್‌ ವಂದನಾ ವಾದಿಸಿದರು.