Bitcoin, Supreme Court
Bitcoin, Supreme Court 
ಸುದ್ದಿಗಳು

ಗೈನ್‌ಬಿಟ್‌ ಕಾಯಿನ್‌ ಹಗರಣ: ಇ ಡಿಗೆ ಯೂಸರ್‌ನೇಮ್‌, ಪಾಸ್‌ವರ್ಡ್‌ ತಿಳಿಸುವಂತೆ ಆರೋಪಿಗೆ ಸೂಚಿಸಿದ ಸುಪ್ರೀಂ

Bar & Bench

ತನ್ನ ಕ್ರಿಪ್ಟೋವಾಲೆಟ್‌ ಯೂಸರ್‌ನೇಮ್‌ ಮತ್ತು ಪಾಸ್‌ವರ್ಡನ್ನು ಜಾರಿ ನಿರ್ದೇಶನಾಲಯಕ್ಕೆ (ಇಡಿ) ತಿಳಿಸುವಂತೆ ಗೈನ್‌ಬಿಟ್‌ಕಾಯಿನ್ ಹಗರಣದ ಆರೋಪಿಗಳಲ್ಲಿ ಒಬ್ಬರಾದ ಅಜಯ್ ಭಾರದ್ವಾಜ್‌ಗೆ ಸುಪ್ರೀಂ ಕೋರ್ಟ್ ಸೋಮವಾರ ಸೂಚಿಸಿದೆ [ಅಜಯ್ ಭಾರದ್ವಾಜ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಜಾರಿ ನಿರ್ದೇಶನಾಲಯದ ಪರವಾಗಿ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ "ಪ್ರಕರಣದಲ್ಲಿ ಯೂಸರ್‌ ನೇಮ್‌ ಮತ್ತು ಪಾಸ್‌ವರ್ಡ್ ನಿರ್ಣಾಯಕವಾಗಿದೆ. ಈ ಪ್ರಕರಣಕ್ಕೂ ಕ್ರಿಪ್ಟೋಕರೆನ್ಸಿ ಸಕ್ರಮಗೊಳಿಸುವುದಕ್ಕೂ ಯಾವುದೇ ಸಂಬಂಧವಿಲ್ಲ" ಎಂದು ತಿಳಿಸಿದರು.

ಬಳಿಕ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠ ಆರೋಪಿ ತನಿಖೆಗೆ ಸಹಕರಿಸಬೇಕು. ಯೂಸರ್‌ ನೇಮ್‌ ಮತ್ತು ಪಾಸ್‌ವರ್ಡ್ ಜೊತೆಗೆ ಎಲ್ಲಾ ವಿಚಾರಗಳನ್ನು ಬಹಿರಂಗಪಡಿಸಬೇಕು ಎಂದು ಸೂಚಿಸಿತು. ಹಗರಣದ ಆರೋಪಿಗಳ ವಿರುದ್ಧ ಬಾಕಿ ಉಳಿದಿರುವ ಎಲ್ಲಾ ಪ್ರಕರಣಗಳ ಪಟ್ಟಿಯನ್ನು ಸಲ್ಲಿಸುವಂತೆ ದೂರುದಾರರ ಪರ ವಕೀಲ ಶೋಯಬ್ ಆಲಂ ಅವರನ್ನು ನ್ಯಾಯಾಲಯ ಕೇಳಿತು.

ಗೈನ್‌ಬಿಟ್‌ ಕಾಯಿನ್ ಹಗರಣದ ಆರೋಪಿಗಳಲ್ಲಿ ಒಬ್ಬರಾದ ಅಜಯ್ ಭಾರದ್ವಾಜ್ ಅವರು ತಮ್ಮ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಪ್ರಕರಣದ ಸೂತ್ರಧಾರ ಮತ್ತು ತನ್ನ ಸಹೋದರ ಅಮಿತ್ ಭಾರದ್ವಾಜ್ ಜೊತೆಗೂಡಿ ಹೂಡಿಕೆದಾರರಿಗೆ ಭಾರಿ ಲಾಭದ ಭರವಸೆ ನೀಡುವ ಮಲ್ಟಿ-ಲೆವೆಲ್ ಮಾರ್ಕೆಟಿಂಗ್ ಯೋಜನೆ ನಡೆಸುತ್ತಿದ್ದಾರೆ ಎಂಬುದು ಅಜಯ್‌ ಅವರ ವಿರುದ್ಧ ಮಾಡಲಾಗಿರುವ ಆರೋಪ.

ಡಿಜಿಟಲ್‌ ಸುದ್ದಿತಾಣ Inc42 ಪ್ರಕಾರ ₹ 2,000 ಕೋಟಿಗಳಷ್ಟಿದ್ದ ಹಗರಣದ ಗಾತ್ರ ಬಿಟ್‌ಕಾಯಿನ್ ಮೌಲ್ಯ ಹೆಚ್ಚಳವಾದ ನಂತರ ₹ 20,000 ಕೋಟಿಗೆ ಜಿಗಿಯಿತು. ಪ್ರಕರಣದ ಕೇಂದ್ರದಲ್ಲಿ 87,000 ಬಿಟ್‌ಕಾಯಿನ್‌ಗಳಿವೆ. ಆದರೆ, ಆರೋಪಿ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಎಎಸ್‌ಜಿ ಭಾಟಿ ಈ ಹಿಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ತಿಳಿಸಿದ್ದರು. ತನಿಖೆಗೆ ಸಹಕರಿಸುವಂತೆ ಅಜಯ್‌ ಅವರಿಗೆ ಸೂಚಿಸಿದ್ದ ನ್ಯಾಯಾಲಯ ಬಂಧನದಿಂದ ರಕ್ಷಣೆಯನ್ನೂ ನೀಡಿತ್ತು. ಇದೇ ವೇಳೆ ಬಿಟ್‌ಕಾಯಿನ್ ಕಾನೂನುಬಾಹಿರವೇ ಅಥವಾ ಅಲ್ಲವೇ ಎಂಬುದರ ಕುರಿತು ತನ್ನ ನಿಲುವು ಸ್ಪಷ್ಟಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಅದು ಕೇಳಿತ್ತು.