ಬಿಟ್‌ಕಾಯಿನ್ ಕಾನೂನುಬಾಹಿರವೇ ಅಲ್ಲವೇ ಎಂಬ ಕುರಿತು ತನ್ನ ನಿಲುವು ಸ್ಪಷ್ಟಪಡಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ [ಅಜಯ್ ಭಾರದ್ವಾಜ್ ಮತ್ತು ಕೇಂದ್ರ ಸರ್ಕಾರ ನಡುವಣ ಪ್ರಕರಣ].
ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುತ್ತಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಐಶ್ವರ್ಯಾ ಭಾಟಿ ಅವರಿಗೆ ಈ ಕುರಿತಂತೆ ತಿಳಿಸಲು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಸೂರ್ಯ ಕಾಂತ್ ಅವರಿದ್ದ ಪೀಠ ತಿಳಿಸಿತು. ಅದಕ್ಕೆ ಪೂರಕವಾಗಿ ಎಎಸ್‌ಜಿ ಭಾಟಿ ಪ್ರತಿಕ್ರಿಯಿಸಿದರು.
ಗೈನ್‌ಬಿಟ್ ಕಾಯಿನ್ ಹಗರಣದ ಆರೋಪಿಗಳಲ್ಲಿ ಒಬ್ಬರಾದ ಅಜಯ್ ಭಾರದ್ವಾಜ್ ಅವರು ತಮ್ಮ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಪ್ರಕರಣದ ಸೂತ್ರಧಾರ ಮತ್ತು ತನ್ನ ಸಹೋದರ ಅಮಿತ್ ಭಾರದ್ವಾಜ್ ಜೊತೆಗೂಡಿ ಹೂಡಿಕೆದಾರರಿಗೆ ಭಾರಿ ಲಾಭದ ಭರವಸೆ ನೀಡುವ ಮಲ್ಟಿ-ಲೆವೆಲ್ ಮಾರ್ಕೆಟಿಂಗ್ ಯೋಜನೆ ನಡೆಸುತ್ತಿದ್ದಾರೆ ಎಂಬುದು ಅಜಯ್ ಅವರ ವಿರುದ್ಧ ಮಾಡಲಾಗಿರುವ ಆರೋಪ.
ಡಿಜಿಟಲ್ ಸುದ್ದಿತಾಣ Inc42 ಪ್ರಕಾರ ₹ 2,000 ಕೋಟಿಗಳಷ್ಟಿದ್ದ ಹಗರಣದ ಗಾತ್ರ ಬಿಟ್‌ಕಾಯಿನ್ ಮೌಲ್ಯ ಹೆಚ್ಚಳವಾದ ನಂತರ ₹ 20,000 ಕೋಟಿಗೆ ಜಿಗಿಯಿತು. ಪ್ರಕರಣದ ಕೇಂದ್ರದಲ್ಲಿ 87,000 ಬಿಟ್‌ಕಾಯಿನ್‌ಗಳಿವೆ. ಆದರೆ, ಆರೋಪಿಯು ತನಿಖೆಗೆ ಸಹಕರಿಸುತ್ತಿಲ್ಲ ಎಂದು ಎಎಸ್‌ಜಿ ಭಾಟಿ ಶುಕ್ರವಾರ ನ್ಯಾಯಾಲಯಕ್ಕೆ ತಿಳಿಸಿದರು. ತನಿಖೆಗೆ ಸಹಕರಿಸುವಂತೆ ಅಜಯ್ ಅವರಿಗೆ ನ್ಯಾಯಾಲಯ ಸೂಚಿಸಿತು. ಇದೇ ವೇಳೆ ಅವರಿಗೆ ಬಂಧನದಿಂದ ರಕ್ಷಣೆಯನ್ನೂ ಪೀಠ ನೀಡಿತು.