ramesh sogemane
ramesh sogemane
ಸುದ್ದಿಗಳು

ಆಟ ಆಡಲು ಇದು ಜಿಲ್ಲಾ ನ್ಯಾಯಾಲಯ ಅಲ್ಲ: ಗೈನ್‌ಬಿಟ್‌ ಕಾಯಿನ್‌ ಹಗರಣದ ಆರೋಪಿ ವಿರುದ್ಧ ಸುಪ್ರೀಂ ಕೋರ್ಟ್‌ ಗರಂ

Bar & Bench

ಗೈನ್‌ಬಿಟ್‌ ಕಾಯಿನ್ ಹಗರಣದ ಆರೋಪಿ ಅಜಯ್ ಭಾರದ್ವಾಜ್ ತನ್ನ ಕ್ರಿಪ್ಟೋವಾಲೆಟ್‌ನ ಯೂಸರ್‌ನೇಮ್‌ ಮತ್ತು ಪಾಸ್‌ವರ್ಡನ್ನು ಜಾರಿ ನಿರ್ದೇಶನಾಲಯಕ್ಕೆ (ಇಡಿ) ಕೊಡದೇ ಇರುವುದಕ್ಕೆ ಸುಪ್ರೀಂ ಕೋರ್ಟ್‌ ಸೋಮವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಸುಪ್ರೀಂ ಕೋರ್ಟ್‌ನ ಹಿಂದಿನ ಆದೇಶ ಪಾಲಿಸದ ಕಾರಣ ತನ್ನ ವಿರುದ್ಧದ ಪ್ರಕರಣ ರದ್ದುಗೊಳಿಸುವಂತೆ ಕೋರಿ ಅಜಯ್‌ ಸಲ್ಲಿಸಿರುವ ಮನವಿಯನ್ನು ವಜಾಗೊಳಿಸಬೇಕು ಎಂದು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಸೂರ್ಯಕಾಂತ್ ಅವರಿದ್ದ ಪೀಠ ಅಭಿಪ್ರಾಯಪಟ್ಟಿತು.

ಭಾರದ್ವಾಜ್ ಅವರ ಕ್ರಿಪ್ಟೋವಾಲೆಟ್‌ನ ಯೂಸರ್‌ನೇಮ್‌ ಮತ್ತು ಪಾಸ್‌ವರ್ಡನ್ನು ಜಾರಿ ನಿರ್ದೇಶನಾಲಯಕ್ಕೆ ನೀಡುವಂತೆ ಮಾರ್ಚ್ 28ರಂದು ಸುಪ್ರೀಂ ಕೋರ್ಟ್‌ ಸೂಚಿಸಿತ್ತು. ಆದರೆ ಅದನ್ನು ಪಾಲಿಸದ ಕಾರಣ ಪೀಠ ಕಿಡಿಕಾರಿದೆ.

ನೀವು ಈ ರೀತಿ ಆಡಲು ಇದು ಯಾವುದೋ ತೀಸ್‌ ಹಜಾರಿ ನ್ಯಾಯಾಲಯ ಅಲ್ಲ. ಮೊದಲು ಆದೇಶ ಪಾಲಿಸಿ, ನಂತರ ಇಲ್ಲಿಗೆ ಬನ್ನಿ.
ಸುಪ್ರೀಂ ಕೋರ್ಟ್‌

"ಇಮೇಲ್ ಮತ್ತು ಪಾಸ್‌ವರ್ಡ್‌ ಅನ್ನು ಏಕೆ ನೀಡಿಲ್ಲ? ನೀವು ಮಾಹಿತಿ ಹಂಚಿಕೊಳ್ಳಬೇಕು. ಆದೇಶ ಪಾಲಿಸದ ಕಾರಣ ಮನವಿಯನ್ನು ವಜಾಗೊಳಿಸಬೇಕಾಗುತ್ತದೆ. ನಿಮಗೆ ಬೇಕಾದಂತೆ ಆಡಲು ಸುಪ್ರೀಂ ಕೋರ್ಟ್‌ ಜಿಲ್ಲಾ ನ್ಯಾಯಾಲಯ ಅಲ್ಲ....ನೀವು ಇಲ್ಲಿ ಹೇಳಿಕೆ ನೀಡಿ ಬಳಿಕ ಅದನ್ನು ಪಾಲಿಸಿಲ್ಲ. ನೀವು ಈ ರೀತಿ ಆಡಲು ಇದು ಯಾವುದೋ ತೀಸ್‌ ಹಜಾರಿ ನ್ಯಾಯಾಲಯ ಅಲ್ಲ. ಮೊದಲು ಆದೇಶ ಪಾಲಿಸಿ, ನಂತರ ಇಲ್ಲಿಗೆ ಬನ್ನಿ, ”ಎಂದು ನ್ಯಾಯಮೂರ್ತಿ ಚಂದ್ರಚೂಡ್ ಕಟು ಶಬ್ದಗಳಲ್ಲಿ ತಿಳಿಸಿದರು.

ಇಂದು ಪ್ರಕರಣವನ್ನು ಕೈಗೆತ್ತಿಕೊಂಡಾಗ, ಇ ಡಿ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ, “ಪ್ರಕರಣದ ಮತ್ತೊಬ್ಬ ಆರೋಪಿ (ಅಜಯ್‌ ಸಹೋದರ) ಅಮಿತ್ ಭಾರದ್ವಾಜ್ ಅವರು ನಿಧನರಾಗಿದ್ದು, ಅವರಿಗೆ ಸಂಬಂಧಿಸಿದ ಪ್ರಕರಣವನ್ನು ವಿಲೇವಾರಿ ಮಾಡಬಹುದು” ಎಂದು ಹೇಳಿದರು. ಆ ಮನವಿಗೆ ಪೀಠ ಸಮ್ಮತಿಸಿತು.

ಈ ವೇಳೆ ಅಜಯ್‌ ಯೂಸರ್‌ನೇಮ್‌ ಮತ್ತು ಪಾಸ್‌ವರ್ಡ್‌ ನೀಡಿದರೆ ಎಂದು ಸುಪ್ರೀಂ ಕೋರ್ಟ್‌ ಕೇಳಿದಾಗ ಎಎಸ್‌ಜಿ ಅವರು ಇಲ್ಲ ಎಂದು ತಿಳಿಸಿದರು. ವಿವರಗಳನ್ನು ನೀಡದೇ ಇರುವುದಕ್ಕೆ ಅಜಯ್‌ ಪರ ವಕೀಲರನ್ನು ನ್ಯಾಯಾಲಯ ಪ್ರಶ್ನಿಸಿದಾಗ “ನಾವು ಪಾಸ್‌ವರ್ಡ್‌ ನೀಡುತ್ತೇವೆ. ಪುಣೆ ಪೊಲೀಸರು ಎಲ್ಲವನ್ನೂ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಹೇಗೆ ಕೊಡಲು ಸಾಧ್ಯ” ಎಂದರು.

ಆಗ ನ್ಯಾಯಾಲಯ “ಪಾಸ್‌ವರ್ಡ್‌ ಹಂಚಿಕೊಳ್ಳುವುದಕ್ಕೆ ಹಾರ್ಡ್‌ವೇರ್‌ ಅಗತ್ಯವಿಲ್ಲ” ಎಂದು ಖಡಕ್ಕಾಗಿ ನುಡಿಯಿತು. ಆದರೆ “ಪುಣೆ ಪೊಲೀಸರು ಪಾಸ್‌ವರ್ಡ್‌ ಬದಲಿಸಿದ್ದಾರೆ” ಎಂದು ಅಜಯ್‌ ಪರ ವಕೀಲರು ವಾದಿಸಿದರು. ಈ ಹಂತದಲ್ಲಿ ನ್ಯಾಯಾಲಯ “ನಿಮ್ಮ ಬಳಿ ಏನು ಇದೆಯೋ ಅದನ್ನು ದಯವಿಟ್ಟು ನೀಡಿ” ಎಂದು ಸೂಚಿಸಿತು. ವಿವರಗಳನ್ನು ಅಜಯ್‌ ನಾಳೆ ಜಾರಿ ನಿರ್ದೇಶನಾಲಯಕ್ಕೆ ಸಲ್ಲಿಸಬೇಕು ಎಂದು ನಿರ್ದೇಶಿಸಿದ ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿತು.