Karnataka High Court 
ಸುದ್ದಿಗಳು

ಗೇಮ್ಸ್‌ಕ್ರಾಫ್ಟ್‌ ಜಿಎಸ್‌ಟಿ ಬಾಕಿ ಪ್ರಕರಣ: ಬ್ಯಾಂಕ್‌ ಖಾತೆ ಜಫ್ತಿ ಆದೇಶಕ್ಕೆ ಹೈಕೋರ್ಟ್‌ ತಡೆ

“…ಅರ್ಜಿದಾರರು 419 ಕೋಟಿ ರೂಪಾಯಿ ಜಿಎಸ್‌ಟಿ ಪಾವತಿಸಬೇಕಿದೆ ಎಂದು ಹೇಳಲಾಗಿದೆ. ಆದರೆ, ಅರ್ಜಿದಾರರ ಬ್ಯಾಂಕ್‌ ಖಾತೆಯಲ್ಲಿ 451 ಕೋಟಿ ರೂಪಾಯಿ ಇರುವುದನ್ನು ವಶಕ್ಕೆ ಪಡೆಯಲಾಗಿರುವುದಕ್ಕೆ ಯಾವುದೇ ಸಕಾರಣಗಳನ್ನು ನೀಡಲಾಗಿಲ್ಲ” ಎಂದ ಪೀಠ.

Bar & Bench

ಆನ್‌ಲೈನ್‌ ಗೇಮಿಂಗ್‌ ಕಂಪೆನಿಯಾದ ಗೇಮ್ಸ್‌ಕ್ರಾಫ್ಟ್‌ ಟೆಕ್ನಾಲಜಿ ಪ್ರೈ.ಲಿ. ಬಾಕಿ ಉಳಿಸಿಕೊಂಡಿರುವ ಸುಮಾರು ₹419 ಕೋಟಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪಾವತಿಸಲು ವಿಫಲವಾದ ಹಿನ್ನೆಲೆಯಲ್ಲಿ ಸಂಸ್ಥೆಯ ಬ್ಯಾಂಕ್‌ ಖಾತೆಗಳನ್ನು ಜಪ್ತಿ ಮಾಡುವ ಸಂಬಂಧ ಜಿಎಸ್‌ಟಿ ಗುಪ್ತಚರ ದಳದ ಮಹಾನಿರ್ದೇಶಕರ ಆದೇಶಕ್ಕೆ ಈಚೆಗೆ ಕರ್ನಾಟಕ ಹೈಕೋರ್ಟ್‌ ತಡೆ ನೀಡಿದೆ.

ಗೇಮ್ಸ್‌ಕ್ರಾಫ್ಟ್‌ ಸಂಸ್ಥೆಯು 2017ರ ನವೆಂಬರ್‌ನಿಂದ ₹419 ಕೋಟಿ ಜಿಎಸ್‌ಟಿ ಶುಲ್ಕ ಪಾವತಿ ಮಾಡಲು ವಿಫಲವಾಗಿದೆ. ಹೀಗಾಗಿ, ಕಂಪೆನಿಯ ಬ್ಯಾಂಕ್‌ ಖಾತೆಗಳ ಜಪ್ತಿ ಸಂಬಂಧ ತಾತ್ಕಾಲಿಕ ಮತ್ತು ದೃಢೀಕೃತ ದೇಶಗಳನ್ನು ಕ್ರಮವಾಗಿ ನವೆಂಬರ್‌ 17 ಮತ್ತು 30ರಂದು ಜಿಎಸ್‌ಟಿ ಗುಪ್ತಚರ ದಳ ಹೊರಡಿಸಿತ್ತು.

ಜಿಎಸ್‌ಟಿ ಗುಪ್ತಚರ ಪಡೆಯ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿರುವ ಗೇಮ್ಸ್‌ಕ್ರಾಫ್ಟ್‌ ಸಂಸ್ಥೆಯು ಮಧ್ಯಂತರದ ಭಾಗವಾಗಿ ₹130 ಕೋಟಿ ಸ್ಥಿರಾಸ್ತಿಯನ್ನು ಭದ್ರತೆಯನ್ನಾಗಿ ನೀಡಿದ್ದು, ಈ ಮೂಲಕ ತನ್ನ ಬ್ಯಾಂಕ್‌ ಖಾತೆಯ ಮೂಲಕ ಉದ್ಯೋಗಿಗಳು ಮತ್ತು ಇತರರಿಗೆ ವೇತನ ಪಾವತಿ ಮಾಡಲು ಅವಕಾಶಕ್ಕೆ ಕೋರಿತ್ತು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಎಸ್‌ ಎಸ್‌ ನಾಗಾನಂದ್‌ ಮತ್ತು ವಕೀಲ ಎಚ್‌ ಎಂ ಸಿದ್ಧಾರ್ಥ ಅವರು “ಜಿಎಸ್‌ಟಿ ಗುಪ್ತಚರ ದಳದ ಆದೇಶದಿಂದಾಗಿ ತೀವ್ರ ಸಮಸ್ಯೆ ಉಂಟಾಗಿದ್ದು, ಶಾಸನಬದ್ಧ ಬಾಕಿಗಳನ್ನು ಪಾವತಿಸದಂತೆ ಗೇಮ್ಸ್‌ಕ್ರಾಫ್ಟ್‌ಗೆ ನಿರ್ಬಂಧ ವಿಧಿಸಲಾಗಿದೆ. ಇದರಿಂದಾಗಿ ಅಪಾರ ಆರ್ಥಿಕ ನಷ್ಟದ ಜೊತೆಗೆ ಸರಿಪಡಿಸಲಾಗದ ಯಾತನೆ ಮತ್ತು ಸಮಸ್ಯೆಯನ್ನು ಉಂಟು ಮಾಡಲಾಗಿದೆ” ಎಂದು ವಾದಿಸಿದರು.

ಪ್ರತಿವಾದಿಗಳನ್ನು ಪ್ರತಿನಿಧಿಸಿದ್ದ ವಕೀಲ ಅಮಿತ್‌ ಆನಂದ್‌ ದೇಶಪಾಂಡೆ ಅವರು “ಬಾಕಿ ಉಳಿಸಿಕೊಂಡಿರುವ ಮೊತ್ತಕ್ಕೆ ಹೋಲಿಕೆ ಮಾಡಿದರೆ ಭದ್ರತೆಯಾಗಿ ಗೇಮ್ಸ್‌ಕ್ರಾಫ್ಟ್‌ ನೀಡಲು ಮುಂದಾಗಿರುವ ಸ್ಥಿರಾಸ್ತಿಯ ಬೆಲೆಯು ಕಡಿಮೆಯಾಗಿದೆ. ಹೀಗಾಗಿ, ಕಂಪೆನಿಯು ಮಧ್ಯಂತರ ಪರಿಹಾರ ಪಡೆಯಲು ಅರ್ಹವಾಗಿಲ್ಲ” ಎಂದು ವಿರೋಧಿಸಿದರು.

ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ನೇತೃತ್ವದ ಏಕಸದಸ್ಯ ಪೀಠವು ತನಿಖೆಯು ಪ್ರಾಥಮಿಕ ಹಂತದಲ್ಲಿದ್ದು, ಆಕ್ಷೇಪ ಮತ್ತು ಗೇಮ್ಸ್‌ಕ್ರಾಫ್ಟ್‌ ಸಲ್ಲಿಸಿರುವ ದಾಖಲೆಗಳನ್ನು ಪರಿಗಣಿಸದೇ ಪ್ರತಿವಾದಿಗಳು ಆದೇಶ ಹೊರಡಿಸಿದ್ದಾರೆ. “…ಅರ್ಜಿದಾರರು 419 ಕೋಟಿ ರೂಪಾಯಿ ಜಿಎಸ್‌ಟಿ ಪಾವತಿಸಬೇಕಿದೆ ಎಂದು ಹೇಳಲಾಗಿದೆ. ಆದರೆ, ಅರ್ಜಿದಾರರ ಬ್ಯಾಂಕ್‌ ಖಾತೆಯಲ್ಲಿ 451 ಕೋಟಿ ರೂಪಾಯಿ ಇರುವುದನ್ನು ವಶಕ್ಕೆ ಪಡೆಯಲಾಗಿರುವುದಕ್ಕೆ ಯಾವುದೇ ಸಕಾರಣಗಳನ್ನು ನೀಡಲಾಗಿಲ್ಲ” ಎಂದಿತು.

ದೃಢೀಕೃತ ಆದೇಶದಲ್ಲಿ ಬಾಕಿಯ ಲೆಕ್ಕಾಚಾರವು ಸ್ಪಷ್ಟವಾಗಿ ಕಣ್ಮರೆಯಾಗಿದ್ದು, ಜಿಎಸ್‌ಟಿ ಗುಪ್ತಚರ ದಳ ಹೊರಡಿಸಿರುವ ಆದೇಶವು ವಿವೇಚನಾರಹಿತವಾಗಿದೆ ಎಂದು ಪೀಠ ಹೇಳಿದೆ. “ಅರ್ಜಿದಾರರು ತಮ್ಮ ಖಾತೆಗಳನ್ನು ನಿರ್ವಹಿಸುವ ನಿಟ್ಟಿನಲ್ಲಿ ಮಧ್ಯಂತರ ಆದೇಶದ ಮೂಲಕ ಅವಕಾಶ ಮಾಡಿಕೊಡಬೇಕು ಎಂದು ಕೋರಿರುವುದು ನ್ಯಾಯದಾನ ದೃಷ್ಟಿಯಲ್ಲಿ ಸೂಕ್ತವಾಗಿದೆ ಎಂಬುದು ನನ್ನ ಅಚಲ ನಂಬಿಕೆಯಾಗಿದೆ” ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

ಹೀಗಾಗಿ, ಬಾಕಿ, ವೇತನ ಪಾವತಿ, ಗ್ರಾಹಕರು/ಪೂರೈಕೆದಾರರಿಗೆ ಹಣ ಪಾವತಿಸಲು ಅರ್ಜಿದಾರ ಕಂಪೆನಿ ಗೇಮ್ಸ್‌ಕ್ರಾಫ್ಟ್‌ಗೆ ನ್ಯಾಯಾಲಯ ಅವಕಾಶ ಮಾಡಿಕೊಟ್ಟಿದೆ. ಈ ಮಧ್ಯೆ, ಗೇಮ್ಸ್‌ಕ್ರಾಫ್ಟ್‌ ಸಂಸ್ಥಾಪಕರು ಮತ್ತು ಹಿರಿಯ ಅಧಿಕಾರಿಗಳು ಜಿಎಸ್‌ಟಿ ಪ್ರಾಧಿಕಾರ ಮುಂದೆ ವಿಚಾರಣೆಗೆ ಹಾಜರಾಗಬೇಕು ಎಂದು ಆದೇಶಿಸಿರುವ ನ್ಯಾಯಾಲಯುವ ವಿಚಾರಣೆಯನ್ನು ಡಿಸೆಂಬರ್‌ 16ಕ್ಕೆ ಮುಂದೂಡಿದೆ.

ಕರ್ನಾಟಕ ಪೊಲೀಸ್‌ ತಿದ್ದುಪಡಿ ಕಾಯಿದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಗೇಮ್‌ಕ್ರಾಫ್ಟ್‌ ಸೇರಿದಂತೆ ಹಲವು ಗೇಮಿಂಗ್‌ ಕಂಪೆನಿಗಳು ಹೈಕೋರ್ಟ್‌ನ ವಿಭಾಗೀಯ ಪೀಠದ ಮುಂದೆ ಮನವಿ ಸಲ್ಲಿಸಿವೆ. ಗೇಮ್ಸ್‌ಕ್ರಾಫ್ಟ್‌ ಅನ್ನು ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಪ್ರತಿನಿಧಿಸಿದ್ದಾರೆ.

Gameskraft_Tech_Pvt_Limited_vs__DG_GST_Intel_and_ors_.pdf
Preview