Mahatma Gandhi 
ಸುದ್ದಿಗಳು

ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕಲ್ಪನೆ ಕೈಬಿಡಬೇಕಿದೆ: ನ್ಯಾ. ಮುಹಮ್ಮದ್ ಮುಸ್ತಾಕ್

ಗಾಂಧೀಜಿಯವರು ಗ್ರಾಮ ಸ್ವರಾಜ್ ವ್ಯವಸ್ಥೆಯ (ಗ್ರಾಮ ಸ್ವಯಮಾಡಳಿತ) ಕನಸು ಕಂಡಿದ್ದಕ್ಕೂ ಪ್ರಸ್ತುತ ಸಂದರ್ಭಕ್ಕೂ ಆಡಳಿತದ ಸಂಕೀರ್ಣತೆಯಲ್ಲಿ ತೀವ್ರ ಬದಲಾವಣೆಗಳಾಗಿವೆ ಎಂದು ಕೇರಳ ಹೈಕೋರ್ಟ್ ನ್ಯಾಯಮೂರ್ತಿಗಳು ತಿಳಿಸಿದರು.

Bar & Bench

Lಆಡಳಿತದಲ್ಲಿನ ಸವಾಲುಗಳು ಇಂದು ಹೆಚ್ಚು ಜಟಿಲವಾಗಿದ್ದು, ಮಹಾತ್ಮ ಗಾಂಧಿಯವರು ಕಲ್ಪಿಸಿಕೊಂಡ ಗ್ರಾಮ ಅಥವಾ ಪಂಚಾಯತ್ ರಾಜ್ ಕಲ್ಪನೆಯನ್ನು ರದ್ದುಗೊಳಿಸಬೇಕಾಗಿದೆ ಎಂದು ಕೇರಳ ಹೈಕೋರ್ಟ್ ನ್ಯಾಯಮೂರ್ತಿ ಎ ಮುಹಮ್ಮದ್ ಮುಸ್ತಾಕ್ ಸೋಮವಾರ ಅಭಿಪ್ರಾಯಪಟ್ಟಿದ್ದಾರೆ.

ನಿರ್ದಿಷ್ಟವಾಗಿ ಹೇಳುವುದಾದರೆ, ಪ್ರಾದೇಶೀಕರಣ ಮತ್ತು ವಿಕೇಂದ್ರೀಕರಣ ಅಪೇಕ್ಷಿತ ಫಲಿತಾಂಶ ನೀಡಿಲ್ಲ ಎಂದ ಅವರು, ಆಡಳಿತದ ವಿವಿಧ ಅಂಶಗಳ ಕೇಂದ್ರೀಕರಣಕ್ಕೆ ಕರೆ ನೀಡಿದರು.

ಮುಕ್ತ ನ್ಯಾಯಾಲಯದಲ್ಲಿ ಈ ಹೇಳಿಕೆ ನೀಡಿದ ಅವರು ಆದರೆ ಇದು ತನ್ನ ವೈಯಕ್ತಿಕ ಅಭಿಪ್ರಾಯ ಎಂದು ಸ್ಪಷ್ಟಪಡಿಸಿದರು.

 "ಗಾಂಧೀಜಿಯವರು ಕಲ್ಪಿಸಿಕೊಂಡ ಹಳ್ಳಿಯ ಕಲ್ಪನೆಯನ್ನು ಈಗ ಸಾಂವಿಧಾನಿಕವಾಗಿ ಸಂಯೋಜಿಸಲಾಗಿದ್ದು, ಆಡಳಿತದಲ್ಲಿ ಹೆಚ್ಚು ಸಂಕೀರ್ಣತೆ ಇರುವುದರಿಂದ ಅದನ್ನು ಕೈಬಿಡಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಆಗ, ಸಣ್ಣಪುಟ್ಟ ಕೆಲಸಗಳನ್ನು ಮಾತ್ರ ಮಾಡಬೇಕಾಗಿತ್ತು. ಆದರೆ ಸ್ಥಳೀಯ ಅಧಿಕಾರಿಗಳು ಈಗ ಎದುರಿಸುತ್ತಿರುವ ಸವಾಲು ತುಂಬಾ ದೊಡ್ಡದಾಗಿದೆ. ಪಟ್ಟಣ ಯೋಜನೆ ಒಂದು ದೊಡ್ಡ ಸವಾಲು, ಮೊಕದ್ದಮೆಗಳ ವಿಧವನ್ನು ನೋಡಿ. ತ್ಯಾಜ್ಯ ನಿರ್ವಹಣೆ ಮತ್ತೊಂದು ದೊಡ್ಡ ಸವಾಲು. ಇವುಗಳನ್ನು ತಳಮಟ್ಟದಲ್ಲಿ ಮಾಡಲು ಸಾಧ್ಯವಿಲ್ಲ. ನಮ್ಮಲ್ಲಿ ಅಂಗಸಂಸ್ಥೆಯ ಪರಿಕಲ್ಪನೆ ಇದೆ. ಆದರೆ ಅದನ್ನು ಮೇಲ್ವಿಚಾರಣೆ ಮಾಡಲು ನಮಗೆ ಕೇಂದ್ರೀಕೃತ ಪ್ರಾಧಿಕಾರ ಬೇಕು" ಎಂದು ನ್ಯಾಯಮೂರ್ತಿಗಳು ನುಡಿದರು.

ತ್ಯಾಜ್ಯ ನಿರ್ವಹಣೆಯ ಉಲ್ಲೇಖಿಸಿದ ಅವರು, (ಹೈಕೋರ್ಟ್‌ ಕಟ್ಟಡ ಇರುವ) ಎರ್ನಾಕುಲಂ ಜಿಲ್ಲೆಯಲ್ಲಿನ ವಿಕೇಂದ್ರೀಕೃತ ವ್ಯವಸ್ಥೆ ನಿಷ್ಪರಿಣಾಮಕಾರಿಯಾಗಿರುವುದನ್ನು ವಿವರಿಸಿದರು.

ಪ್ರಾದೇಶೀಕರಣದಿಂದಾಗಿ ಆಸ್ತಿ ಮತ್ತು ಕಟ್ಟಡ ತೆರಿಗೆಗಳಂತಹ ಆದಾಯ ಸಂಗ್ರಹಣೆಯ ಮೇಲೂ ಪರಿಣಾಮ ಬೀರುತ್ತದೆ ಎಂದ ಅವರು ಗಾಂಧೀಜಿಯವರು ಗ್ರಾಮ ಸ್ವರಾಜ್ ವ್ಯವಸ್ಥೆಯ (ಗ್ರಾಮ ಸ್ವಯಮಾಡಳಿತ) ಕನಸು ಕಂಡಿದ್ದಕ್ಕೂ ಪ್ರಸ್ತುತ ಸಂದರ್ಭಕ್ಕೂ ಆಡಳಿತದ ಸಂಕೀರ್ಣತೆಯಲ್ಲಿ ತೀವ್ರ ಬದಲಾವಣೆಗಳಾಗಿವೆ. ಪ್ರಸ್ತುತ ಬೇಡಿಕೆಗಳನ್ನು ಈಡೇರಿಸಲು ವ್ಯವಸ್ಥೆಯನ್ನು ಸುಧಾರಿಸಬೇಕಾಗಿದೆ ಎಂದರು.

 2024 ರಲ್ಲಿ ಕಾಸರಗೋಡಿನ ಒಂದು ಪಂಚಾಯತ್‌ ಸೇರಿದಂತೆ ಎಂಟು ಪುರಸಭೆಗಳಲ್ಲಿ ನಡೆಸಲಾದ ಕ್ಷೇತ್ರ ಪುನರ್‌ವಿಂಗಡಣೆ ಪ್ರಕ್ರಿಯೆ ಕಾನೂನುಬಾಹಿರ ಎಂದು ಘೋಷಿಸಿದ್ದ ಏಕಸದಸ್ಯ ಪೀಠದ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಮುಸ್ತಾಕ್ ಮತ್ತು ನ್ಯಾಯಮೂರ್ತಿ ಪಿ. ಕೃಷ್ಣ ಕುಮಾರ್ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸುತ್ತಿದ್ದ ವೇಳೆ ನ್ಯಾಯಮೂರ್ತಿ ಮುಸ್ತಾಕ್ ಈ ಅಭಿಪ್ರಾಯ ವ್ಯಕ್ತಪಡಿಸಿದರು.