ಮಹಾತ್ಮ ಗಾಂಧಿಯವರ ಸಲಹೆಯನ್ನು ಹಿರಿಯ ವಕೀಲರು ಪಾಲಿಸಬೇಕು; ಬಡವರಿಗೆ ಉಚಿತ ಸೇವೆ ನೀಡಬೇಕು: ರಾಷ್ಟ್ರಪತಿ ಕೋವಿಂದ್‌

ಬಡವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಗಾಂಧೀಜಿ ಸಾಕಷ್ಟು ಕೆಲಸವನ್ನು ಮಾಡಿದ್ದಾರೆ. ಪ್ರತಿಭಾವಂತ ವಕೀಲರು ಬಡವರಿಗೆ ಕನಿಷ್ಠ ದರದಲ್ಲಿ ಕಾನೂನು ಸೇವೆ ಒದಗಿಸುವಂತಾಗಬೇಕು ಎಂಬ ಅಭಿಪ್ರಾಯವನ್ನು ಗಾಂಧೀಜಿ ಹೊಂದಿದ್ದರು ಎಂದು ಕೋವಿಂದ್‌ ತಿಳಿಸಿದರು.
ಮಹಾತ್ಮ ಗಾಂಧಿಯವರ ಸಲಹೆಯನ್ನು ಹಿರಿಯ ವಕೀಲರು ಪಾಲಿಸಬೇಕು; ಬಡವರಿಗೆ ಉಚಿತ ಸೇವೆ ನೀಡಬೇಕು: ರಾಷ್ಟ್ರಪತಿ ಕೋವಿಂದ್‌
President of India, Ram Nath Kovind

ಮಹಾತ್ಮ ಗಾಂಧೀಜಿಯವರ ಸಲಹೆಯಂತೆ ವಕೀಲರು ಅದರಲ್ಲೂ ವಿಶೇಷವಾಗಿ ಹಿರಿಯ ವಕೀಲರು ಸಮಾಜದಲ್ಲಿನ ಅಸಹಾಯಕರು ಮತ್ತು ಬಡವರಿಗೆ ಕಾನೂನು ಸೇವೆ ಒದಗಿಸಬೇಕು ಎಂದು ಶನಿವಾರ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಹೇಳಿದರು.

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ (ಎನ್‌ಎಎಲ್‌ಎಸ್‌ಎ) ವತಿಯಿಂದ ದೇಶಾದ್ಯಂತ ಆರು ವಾರಗಳ ಕಾಲ ಆಯೋಜಿಸಲಾಗಿರುವ ಕಾನೂನು ಜಾಗೃತಿ ಮತ್ತು ಅರಿವು ಆಂದೋಲನ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಕೋವಿಂದ್‌ ಅವರು ಮಾತನಾಡಿದರು. ಬಡವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಗಾಂಧೀಜಿಯವರು ಸಾಕಷ್ಟು ಕೆಲಸವನ್ನು ಮಾಡಿದ್ದಾರೆ. ಪ್ರತಿಭಾವಂತ ವಕೀಲರು ಬಡವರಿಗೆ ಕನಿಷ್ಠ ದರದಲ್ಲಿ ಕಾನೂನು ಸೇವೆ ಒದಗಿಸುವಂತಿರಬೇಕು ಎಂಬ ಅಭಿಪ್ರಾಯವನ್ನು ಗಾಂಧೀಜಿ ಹೊಂದಿದ್ದರು ಎಂದು ಕೋವಿಂದ್‌ ತಿಳಿಸಿದರು.

“ಗಾಂಧೀಜಿ ನಮಗೆ ಸಹಾಯ ಮಾಡಲಿ ಎಂದು ಅಸಹಾಯಕ ಕಾರ್ಮಿಕರು ನ್ಯಾಯಾಲಯದಲ್ಲಿ ಕಾದುಕುಳಿತಿದ್ದರು. ಯಾವುದೇ ಶುಲ್ಕ ಪಡೆಯದೇ ಗಾಂಧೀಜಿ ಅವರಿಗೆ ಸಹಾಯ ಮಾಡುತ್ತಿದ್ದರು. ಭಾರತಕ್ಕೆ ಮರಳಿದ ಬಳಿಕ, ಬಡ ದಾವೆದಾರರ ವೆಚ್ಚದಲ್ಲಿ ಶ್ರೀಮಂತ ವಕೀಲರು ಸಂಪಾದನೆಯಲ್ಲಿ ತೊಡಗಿರುವುದನ್ನು ಕಂಡಿದ್ದ ಗಾಂಧೀಜಿ “ಪ್ರತಿಭಾವಂತ ವಕೀಲರು ಅತ್ಯಂತ ಕಡಿಮೆ ದರದಲ್ಲಿ ಬಡವರಿಗೆ ಸಹಾಯ ಮಾಡಬೇಕು ಎಂದು ಬರೆದಿದ್ದರು. ನನ್ನ ಪ್ರಕಾರ ಬಾಪು ಅವರ ಈ ಸಲಹೆಯನ್ನು ಕಾನೂನು ಕ್ಷೇತ್ರದವರು ಪಾಲಿಸಬೇಕು. ಅದರಲ್ಲೂ ವಿಶೇಷವಾಗಿ ಹಿರಿಯ ವಕೀಲರು ಅದನ್ನು ಪಾಲಿಸಬೇಕು” ಎಂದು ರಾಷ್ಟ್ರಪತಿ ಕೋವಿಂದ್‌ ಹೇಳಿದರು.

“ಬಡವರಿಗೆ ನೆರವಾಗುವ ನಿಟ್ಟಿನಲ್ಲಿ ಒಂದಿಷ್ಟು ಸಮಯವನ್ನು ವಕೀಲರು ಮೀಸಲಿಡಬೇಕು. ದಕ್ಷಿಣ ಆಫ್ರಿಕಾದಲ್ಲಿ ಪ್ರಮುಖ ಪ್ರಕರಣ ಒಂದರಲ್ಲಿ ಗಾಂಧೀಜಿ ಅವರು ಸಂಧಾನಕ್ಕೆ ಸಲಹೆ ಮಾಡಿದ್ದರು. ಪಕ್ಷಕಾರರು ಮಧ್ಯಸ್ಥಿಕೆಗೆ ಒಪ್ಪಿಕೊಂಡಿದ್ದರು. ಇದರಿಂದ ಸಂಧಾನ ಯಶಸ್ವಿಯಾಗಿ, ಅದು ಅವರ ಕಕ್ಷಿದಾರರಿಗೆ ಅನುಕೂಲವಾಗಿತ್ತು. ಗಾಂಧೀಜಿ ಕಕ್ಷಿದಾರರು ಸುಲಭವಾದ ಹಣ ಸಂದಾಯದ ಕುಂತುಗಳಿಗೆ ಒಪ್ಪಿಕೊಳ್ಳಲು ಅನುವು ಮಾಡಿಕೊಡಲಾಗಿತ್ತು. ಹೀಗಾಗಿ, ಅವರು ನ್ಯಾಯಾಲಯದ ಹೊರಗೆ ಸಂಧಾನ ಸೂಕ್ತ ಎಂದು ನಂಬಿದ್ದರು” ಎಂದು ರಾಷ್ಟ್ರಪತಿ ಹೇಳಿದರು.

Also Read
ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿ: ಕಾನೂನು ಸಚಿವರಿಂದ ಅನುಮೋದನೆಯ ಭರವಸೆ ದೊರೆತಿದೆ ಎಂದ ಸಿಜೆಐ

“ಸ್ವಾತಂತ್ರ್ಯದ ನಂತರ ಶ್ರೀಮಂತವರ್ಗದ ನ್ಯಾಯಾಂಗದಿಂದ (ಅರಿಸ್ಟೋಕ್ರಸಿ) ಪ್ರಜಾಪ್ರಭುತ್ವದ ನ್ಯಾಯಾಂಗದೆಡೆಗೆ ನಾವು ಹೊರಳಿದೆವು. ಎನ್‌ಎಎಲ್‌ಎಸ್‌ಎ ಈ ಪ್ರಕ್ರಿಯೆಯಲ್ಲಿ ಬಹುಮುಖ್ಯ ಪಾತ್ರ ನಿಭಾಯಿಸಿದೆ. ಲೋಕ ಅದಾಲತ್‌ ಮೂಲಕ 1.11 ಕೋಟಿ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ನನಗೆ ತಿಳಿಸಲಾಗಿದೆ. ಕಾನೂನು ಸೇವಾ ಸಂಸ್ಥೆಯ ರಚನೆ ನಮ್ಮ ನ್ಯಾಯಾಂಗ ರಚನೆಗೆ ಬೆಂಬಲ ಒದಗಿಸುತ್ತದೆ. ಕಾನೂನು ಸೇವೆಗಳ ಪ್ರಾಧಿಕಾರವು ಸಮಾಜದ ಅಂಚಿನಲ್ಲಿರುವವರಿಗೆ ಸಹಾಯ ಮಾಡಲು ವಿಶೇಷ ಪ್ರಯತ್ನ ಹಾಕಬೇಕು ಎಂದು ನಾನು ಬಯಸುತ್ತೇನೆ" ಎಂದರು.

“ಒಂದು ದೇಶವಾಗಿ ನಮ್ಮ ಗುರಿಯು ಮಹಿಳಾ ಅಭಿವೃದ್ಧಿಯಿಂದ ಮಹಿಳೆಯರ ನೇತೃತ್ವದ ಅಭಿವೃದ್ಧಿಗೆ ಉನ್ನತಿ ಪಡೆಯಬೇಕು. ಆದ್ದರಿಂದ, ಕಾನೂನು ಸೇವಾ ಸಂಸ್ಥೆಯಲ್ಲಿ ಮಹಿಳೆಯರ ಸಂಖ್ಯೆಯನ್ನು ಹೆಚ್ಚಿಸುವುದು ಸಾಧ್ಯವಾದಷ್ಟು ದೊಡ್ಡ ಸಂಖ್ಯೆಯ ಮಹಿಳಾ ಫಲಾನುಭವಿಗಳನ್ನು ತಲುಪುವಷ್ಟೇ ಮುಖ್ಯ” ಎಂದು ಹೇಳಿದರು.

Related Stories

No stories found.