Gautam Navlakha and Bombay High Court
Gautam Navlakha and Bombay High Court 
ಸುದ್ದಿಗಳು

ಗ್ರಾಮೀಣ ನಕ್ಸಲೀಯ ಹೋರಾಟಕ್ಕೆ ಸಂಪನ್ಮೂಲ ಒದಗಿಸುತ್ತಿದ್ದ ನಗರ ನಕ್ಸಲ್ ಚಳವಳಿಯ ಭಾಗ ನವಲಖಾ: ಎನ್ಐಎ ಆರೋಪ

Bar & Bench

ಮಾನವ ಹಕ್ಕುಗಳ ಹೋರಾಟಗಾರ, ಪತ್ರಕರ್ತ ನವಲಖಾ ಗ್ರಾಮೀಣ ನಕ್ಸಲ್‌ ಚಳವಳಿಗೆ ಸೌಲಭ್ಯಗಳನ್ನು ಒದಗಿಸುತ್ತಿದ್ದ ನಗರ ನಕ್ಸಲ್‌ ಚಳವಳಿಯ ಭಾಗವಾಗಿದ್ದರು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸೋಮವಾರ ಬಾಂಬೆ ಹೈಕೋರ್ಟ್‌ಗೆ ತಿಳಿಸಿದೆ.

ನವಲಖಾ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಗೆ ವಿರೋಧ ವ್ಯಕ್ತಪಡಿಸಿದ, ಎನ್‌ಐಎ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ದೇವಾಂಗ್ ವ್ಯಾಸ್ ಅವರು ʼನಗರ ನಕ್ಸಲ್ ವಿಭಾಗʼವು ಗ್ರಾಮೀಣ ಸಶಸ್ತ್ರ ನಕ್ಸಲ್ ಹೋರಾಟದ ಪೂರಕ ಅಂಗವಾಗಿದೆ. ಏಕೆಂದರೆ ಅದು ಮಾನವಶಕ್ತಿ ಮತ್ತು ಧನಸಂಪನ್ಮೂಲದಂತಹ ಸೌಲಭ್ಯಗಳನ್ನು ಗ್ರಾಮೀಣ ಪ್ರದೇಶದ ನಕ್ಸಲರಿಗೆ ವ್ಯವಸ್ಥೆಗೊಳಿಸುತ್ತಿತ್ತು ಎಂದು ವಾದಿಸಿದರು.

ಹೈಕೋರ್ಟ್ ನಿರ್ದೇಶನದಂತೆ ಮರು ವಿಚಾರಣೆ ನಡೆಸಿದ್ದ ಎನ್‌ಐಎ ವಿಶೇಷ ನ್ಯಾಯಾಲಯ ನವಲಖಾ ಅವರ ಮನವಿಯನ್ನು ತಿರಸ್ಕರಿಸಿತ್ತು. ಇದನ್ನು ನವಲಖಾ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿಯಲ್ಲಿ ಆರೋಪಗಳನ್ನು ಹೊರಿಸಲು ಅಗತ್ಯವಾದ ಮೂಲಭೂತ ಅಂಶಗಳೆಂದರೆ ಹಿಂಸಾಚಾರ, ಭಯೋತ್ಪಾದನೆ ಅಥವಾ ಈ ಚಟುವಟಿಕೆಗಳಲ್ಲಿ ಶಾಮೀಲು ಅಥವಾ ಪಿತೂರಿ ಎಂದು ನವಲಖಾ ಪರ ವಕೀಲ ಯುಗ್ ಮೋಹಿತ್ ಚೌಧರಿ ವಾದಿಸಿದರು. ಹಿಂಸಾಚಾರ ನಡೆಯದೆ, ಯುಎಪಿಎ ಅಡಿ ಆರೋಪ ಮಾಡುವಂತಿಲ್ಲ ಎಂದು ಅವರು ಪ್ರತಿಪಾದಿಸಿದರು.

ನವಲಖಾ ಅವರಿಗೆ ವಯಸ್ಸಾಗಿದ್ದು ವಿಚಾರಣೆ ಇನ್ನಷ್ಟೇ ಆರಂಭವಾಗಬೇಕಿದೆ. ಪ್ರಕರಣ ಕೈಬಿಡಲು ಕೋರಿರುವ ಅರ್ಜಿಗಳು ಇನ್ನೂ ಬಾಕಿ ಇದ್ದು ಒಟ್ಟು 20,000 ಪುಟಗಳ 54 ಸಂಪುಟಗಳ ಆರೋಪಪಟ್ಟಿ ಇದೆ. 370ಕ್ಕೂ ಹೆಚ್ಚು ಸಾಕ್ಷಿಗಳಿವೆ ಎಂದು ಚೌಧರಿ ವಾದಿಸಿದರು.

ಐಪಿಸಿಯ 120ಬಿ (ಕ್ರಿಮಿನಲ್ ಪಿತೂರಿ) ಮತ್ತು 34 (ಸಾಮಾನ್ಯ ಉದ್ದೇಶ) ಸೆಕ್ಷನ್‌ಗಳ ಅಡಿಯಲ್ಲಿ ನವಲಾಖಾ ವಿರುದ್ಧ ಆರೋಪ ಹೊರಿಸಲಾಗಿದೆ.

ನವಲಖಾ ಅವರ ವಿರುದ್ಧ ಯಾವುದೇ ಹಿಂಸಾತ್ಮಕ ಕೃತ್ಯದ ಆರೋಪಗಳಿಲ್ಲದೆ ಇರಬಹುದು. ಆದರೆ ಯುಎಪಿಎ ಅಡಿ ಪಿತೂರಿ ನಡೆಸಿರುವುದು ಅನ್ವಯವಾಗುತ್ತದೆ ಪ್ರಾಥಮಿಕ ತನಿಖೆಯಿಂದ ಈ ಅಂಶಗಳು ಬೆಳಕಿಗೆ ಬಂದಿವೆ. ನವಲಖಾ ಅವರು ಇತರ ಬಂಧಿತರೊಂದಿಗೆ ಸಂಚು ರೂಪಿಸಿದರು ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಸಿದ್ಧಾಂತವನ್ನು ವ್ಯಾಪಕಗೊಳಿಸಲು ಆರೋಪಿಗಳು ಬಯಸಿದ್ದರು, ಎಂದು ಎನ್‌ಐಎ ಪರ ವಾದ ಮಂಡಿಸಿದ ಎಎಸ್‌ಜಿ ನ್ಯಾಯಾಲಯಕ್ಕೆ ತಿಳಿಸಿದರು.

ಪ್ರತಿಯೊಬ್ಬ ವ್ಯಕ್ತಿಗೂ ಒಂದು ಪಾತ್ರವನ್ನು ನಿಗದಿಪಡಿಸಲಾಗಿತ್ತು ಮತ್ತು ಆ ಪಾತ್ರವನ್ನು ನಿರ್ವಹಣೆ ಮಾಡಲಾಗಿದೆ ಎಂದು ಮೇಲ್ನೋಟದ ಸಾಕ್ಷ್ಯದಲ್ಲಿ ಕಂಡುಬಂದಿರುವುದಾಗಿ ಅವರು ಹೇಳಿದರು. ವ್ಯಾಸ್‌ ಅವರ ವಾದ ಮಂಡನೆ ಇಂದು ಕೂಡ ಮುಂದುವರೆಯಲಿದೆ.