Allahabad High Court  
ಸುದ್ದಿಗಳು

ಬಂದೂಕು ಪರವಾನಗಿ ಪಡೆಯುವ ಪ್ರವೃತ್ತಿ ವಕೀಲರ ಉದಾತ್ತ ವೃತ್ತಿಯ ಹಿತಕ್ಕೆ ತಕ್ಕುದಲ್ಲ: ಅಲಾಹಾಬಾದ್ ಹೈಕೋರ್ಟ್

"ಯಾವುದೇ ದೃಢ ಆಧಾರವಿಲ್ಲದೆ ಅಂತಹ ಅರ್ಜಿಗಳಿಗೆ ಅನುಮತಿ ನೀಡಿದರೆ, ಪ್ರತಿ ವಕೀಲರು ನ್ಯಾಯಾಲಯದ ಆವರಣದಲ್ಲಿ ಶಸ್ತ್ರಾಸ್ತ್ರ ಹಿಡಿಯುವ ದಿನ ಬರುತ್ತದೆ" ಎಂದು ನ್ಯಾಯಾಲಯ ಹೇಳಿದೆ.

Bar & Bench

ವಕೀಲರು ಬಂದೂಕುಗಳನ್ನು ಇರಿಸಿಕೊಳ್ಳಲು ಪರವಾನಗಿ ಪಡೆಯುವ ಸಾಮಾನ್ಯ ಪ್ರವೃತ್ತಿ ಮೆಚ್ಚುವಂಥದ್ದಲ್ಲ ಮತ್ತು ಅದು ಕಾನೂನಿನ ಉದಾತ್ತ ವೃತ್ತಿಯ ಹಿತಕ್ಕೆ ಅನುಗುಣವಾಗಿ ಇರದು ಎಂದು ಅಲಾಹಾಬಾದ್‌ ಹೈಕೋರ್ಟ್‌ ಇತ್ತೀಚೆಗೆ ತಿಳಿಸಿದೆ. (ರಾಮ್ ಮಿಲನ್ ಮತ್ತು ಉತ್ತರ ಪ್ರದೇಶ ಸರ್ಕಾರ ಹಾಗೂ ಇತರರ ನಡುವಣ ಪ್ರಕರಣ).

ಆ ಮೂಲಕ ವೈಯಕ್ತಿಕ ಮತ್ತು ವೃತ್ತಿಪರ ಸುರಕ್ಷತೆ ದೃಷ್ಟಿಯಿಂದ ಬಂದೂಕು ಪರವಾನಗಿ ನೀಡುವಂತೆ ಕೋರಿ ವಕೀಲರು ಎಂದು ಹೇಳಿಕೊಂಡ ಅರ್ಜಿದಾರರೊಬ್ಬರು ಸಲ್ಲಿಸಿದ ಮನವಿಯನ್ನು ನ್ಯಾಯಮೂರ್ತಿ ಸೌರಭ್ ಶ್ಯಾಮ್ ಶಂಶೇರಿ ಅವರು ತಿರಸ್ಕರಿಸಿದರು.

"ಯಾವುದೇ ದೃಢ ಆಧಾರವಿಲ್ಲದ ಇಂತಹ ಅರ್ಜಿಗಳಿಗೆ ಅನುಮತಿ ನೀಡಿದರೆ, ಪ್ರತಿ ವಕೀಲರು ನ್ಯಾಯಾಲಯದ ಆವರಣದಲ್ಲಿ ಶಸ್ತ್ರ ಸಮೇತ ಆಗಮನಿಸುವ ದಿನ ಬರುತ್ತದೆ" ಎಂದು ಪೀಠ ಹೇಳಿತು.

"ವಕೀಲನೊಬ್ಬ ತನ್ನ ವೈಯಕ್ತಿಕ ಮತ್ತು ವೃತ್ತಿಪರ ಸುರಕ್ಷತೆಗಾಗಿ ಬಂದೂಕು ಪರವಾನಗಿ ಪಡೆಯಲು ಹೊರಟರೆ ಅದು ಅತ್ಯಂತ ಅಪಾಯಕಾರಿ ಪ್ರವೃತ್ತಿಯಾಗಲಿದೆ. ವಕೀಲ ವೃತ್ತಿ ಉದಾತ್ತ ವೃತ್ತಿಯಾಗಿದೆ. ವಕೀಲರು ತಮ್ಮ ಕಕ್ಷಿದಾರರ ಹಕ್ಕುಗಳನ್ನು ರಕ್ಷಿಸಲು ಯಾವಾಗಲೂ ನ್ಯಾಯಾಲಯದ ಮುಂದೆ ನಿರ್ಭೀತಿಯಿಂದ ಹಾಜರಾಗುತ್ತಾರೆ. ವಕೀಲರ ಮನಸ್ಸಿನಲ್ಲಿ ಭೀತಿ ಇದ್ದರೆ, ವೃತ್ತಿ ಉದಾತ್ತತೆಯ ಸಂಪೂರ್ಣ ಆಧಾರ ಕುಸಿಯುತ್ತದೆ. ಇಂತಹ ಅರ್ಜಿಗಳಿಗೆ ಯಾವುದೇ ನಿರ್ದಿಷ್ಟ ಆಧಾರವಿಲ್ಲದೆ ಅನುಮತಿ ನೀಡಿದರೆ ಪ್ರತಿ ವಕೀಲರು ನ್ಯಾಯಾಲಯದ ಆವರಣದಲ್ಲಿ ಶಸ್ತ್ರಾಸ್ತ್ರ ಹಿಡಿಯುವ ದಿನ ಬರುತ್ತದೆ. ಹೈಕೋರ್ಟ್‌ಗಳು, ಸುಪ್ರೀಂಕೋರ್ಟ್‌ ಹೊರಡಿಸುವ ತೀರ್ಪು ಎಂಬ ಗುಂಡುಗಳೊಂದಿಗೆ ಪ್ರತಿ ವಕೀಲರೂ ಕಾನೂನಾತ್ಮಕ ವಾದವೆಂಬ ಆಯುಧ ಹಿಡಿದಿರುತ್ತಾರೆ. ಆತ ತನ್ನ ವೃತ್ತಿಗೆ ರಕ್ಷಣೆ ಪಡೆಯಲು ಮತ್ತು ಕಕ್ಷೀದಾರರು ನ್ಯಾಯಾಲಯಗಳಿಂದ ನ್ಯಾಯ ಪಡೆಯಲು ಇವು ಸಾಕು” ಎಂದು ನ್ಯಾಯಾಲಯ ವಿವರಿಸಿದೆ.

ನ್ಯಾಯಾಲಯ ಹೇಳಿದ ಪ್ರಮುಖ ಅಂಶಗಳು…

  • ಶಸ್ತ್ರಾಸ್ತ್ರ ಕಾಯಿದೆ ಮತ್ತು ನಿಯಮಗಳಿಗೆ ಅನುಸಾರವಾಗಿ ಬಂದೂಕು ಪರವಾನಗಿಗಳಿಗಾಗಿ ಅರ್ಜಿ ಸಲ್ಲಿಸುವ ವಕೀಲರ ಮೇಲೆ ಯಾವುದೇ ನಿರ್ಬಂಧವಿಲ್ಲ . ಆದರೆ ಯಾವುದೇ ಸಕಾರಣವಿಲ್ಲದೆ ವಕೀಲರು ಬಂದೂಕು ಪರವಾನಗಿ ಪಡೆಯುವ ಸಾಮಾನ್ಯ ಪ್ರವೃತ್ತಿ ಮೆಚ್ಚುವಂಥದ್ದಲ್ಲ. ಇದು ವಕೀಲರ ಉದಾತ್ತ ವೃತ್ತಿಯ ಹಿತಕ್ಕೆ ಅನುಗುಣವಾಗಿ ಇರದು.

  • ಪ್ರಸ್ತುತ ಪ್ರಕರಣದಲ್ಲಿ ಅರ್ಜಿದಾರರು ಸಕ್ರಿಯ ವಕೀಲ ಎಂಬುದಕ್ಕೆ ಯಾವುದೇ ಅಧಿಕೃತ ಸಾಕ್ಷ್ಯಗಳಿಲ್ಲ. ಅಲ್ಲದೆ ಅವರ ವಿರುದ್ಧ ಇರಬಹುದಾದ ಕ್ರಿಮಿನಲ್‌ ಪ್ರಕರಣಗಳ ಪ್ರಸ್ತುತ ಸ್ಥಿತಿಗತಿ ಬಗ್ಗೆ ಅರ್ಜಿದಾರರು ನ್ಯಾಯಾಲಯದ ಗಮನಕ್ಕೆ ತಂದಿಲ್ಲ.

  • ಯಾವುದೇ ಸಾಕ್ಷ್ಯದ ಅನುಪಸ್ಥಿತಿಯಲ್ಲಿ ಪರವಾನಗಿ ಪ್ರಾಧಿಕಾರದ ವ್ಯಕ್ತಿನಿಷ್ಠ ತೃಪ್ತಿಯನ್ನು ರಿಟ್‌ ವ್ಯಾಪ್ತಿಯಲ್ಲಿ ಪ್ರಶ್ನಿಸಲಾಗದು.

  • ಒಂದು ವೇಳೆ ಯಾರಿಂದಲಾದರೂ ಬೆದರಿಕೆ ಎದುರಾದರೆ ಸಾಕ್ಷಿಗಳ ಭದ್ರತೆ ಯೋಜನೆ- 2018ರ ಅಡಿ ಅರ್ಜಿದಾರರು ಪೊಲೀಸ್‌ ಠಾಣೆ ಮೆಟ್ಟಿಲೇರಲು ಮುಕ್ತರಾಗಿದ್ದಾರೆ.