Supreme Court, Waqf Amendment Act 
ಸುದ್ದಿಗಳು

ವಕ್ಫ್ ಆಸ್ತಿ ನೋಂದಣಿ: ಗಡುವು ವಿಸ್ತರಿಸಲು ಸುಪ್ರೀಂ ನಕಾರ; ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಲು ಸೂಚನೆ

ಎಲ್ಲಾ ವಕ್ಫ್ ಆಸ್ತಿಗಳ ನೋಂದಣಿಯ ಅವಶ್ಯಕತೆ ಈ ಮೊದಲೂ ಸಹ ಇತ್ತು ಎಂಬುದನ್ನು ಪರಿಗಣಿಸಿ ಅಂತಹ ವಕ್ಫ್ ಆಸ್ತಿ ನೋಂದಾಯಿಸದಂತೆ ತಡೆ ನೀಡಲು ನ್ಯಾಯಾಲಯ ಈ ಹಿಂದೆ ನಿರಾಕರಿಸಿತ್ತು.

Bar & Bench

ವಕ್ಫ್ (ತಿದ್ದುಪಡಿ) ಕಾಯಿದೆ- 2025ರ ಅಡಿಯಲ್ಲಿ ವಕ್ಫ್ ಆಸ್ತಿಗಳ ನೋಂದಣಿಗೆ  ನೀಡಲಾಗಿದ್ದ ಗಡುವು ವಿಸ್ತರಿಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ .

ಕಾಯಿದೆಯ ಸೆಕ್ಷನ್ 3ಬಿ ಅಡಿಯಲ್ಲಿ ಆಸ್ತಿಗಳನ್ನು ನೋಂದಾಯಿಸಲು ಬಯಸುವವರು ಕಾನೂನಿನ ಪ್ರಕಾರ ಅವಧಿ ವಿಸ್ತರಣೆಗಾಗಿ ವಕ್ಫ್ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಬಹುದು ಎಂದು ನ್ಯಾಯಮೂರ್ತಿಗಳಾದ  ದೀಪಂಕರ್ ದತ್ತ ಮತ್ತು ಎ ಜಿ ಮಸಿಹ್ ಅವರಿದ್ದ ಪೀಠ ತಿಳಿಸಿತು. ಅಂತೆಯೇ ಗಡುವು ವಿಸ್ತರಣೆಗೆ ಸಾಮಾನ್ಯ ನಿರ್ದೇಶನ ನೀಡಲು ಅದು ನಿರಾಕರಿಸಿತು.

ವಕ್ಫ್ ಆಸ್ತಿಗಳ ಆನ್‌ಲೈನ್ ನೋಂದಣಿಗಾಗಿ ಪ್ರಾರಂಭಿಸಲಾದ ಯುಎಂಇಇಡಿ (ಉಮೀದ್‌) ಪೋರ್ಟಲ್ ಸಂಬಂಧಿಸಿದ  ತಕರಾರುಗಳನ್ನು ಪರಿಶೀಲಿಸಲು ಕೂಡ  ನ್ಯಾಯಾಲಯ ನಿರಾಕರಿಸಿತು.

ಸೆಪ್ಟೆಂಬರ್‌ನಲ್ಲಿ, ಅಂದಿನ ಸಿಜೆಐ ಬಿ ಆರ್‌ ಗವಾಯಿ ಮತ್ತು ನ್ಯಾಯಮೂರ್ತಿ ಎ ಜಿ ಮಸಿಹ್ ಅವರಿದ್ದ ಪೀಠ ವಕ್ಫ್ ಕಾಯಿದೆಯ ಕೆಲವು ಸೆಕ್ಷನ್‌ಗಳಿಗೆ ತಡೆ ನೀಡಿತ್ತು. ಆದರೆ, ಕಾನೂನು ತಿದ್ದುಪಡಿಗಳನ್ನು ಪ್ರಶ್ನಿಸಿದ್ದ ಅರ್ಜಿಗಳು ಆಕ್ಷೇಪಿಸಿದ್ದ ಹಲವು ನಿಬಂಧನೆಗಳಿಗೆ ತಡೆ ನೀಡಲು ಅದು ನಿರಾಕರಿಸಿತ್ತು.

ಗಮನಾರ್ಹ ಅಂಶವೆಂದರೆ, ಎಲ್ಲಾ ವಕ್ಫ್‌ ಆಸ್ತಿಗಳ ನೋಂದಣಿಯ ಅವಶ್ಯಕತೆ ಈ ಹಿಂದೆಯೂ ಇತ್ತು ಎಂಬುದನ್ನು ಪರಿಗಣಿಸಿ ಎಲ್ಲಾ ವಕ್ಫ್‌ಗಳನ್ನು ಸೆಕ್ಷನ್ 3ಬಿ ಅಡಿಯಲ್ಲಿ ನೊಂದಣಿ ಮಾಡಲೇಬೇಕು ಎಂಬ ನಿಯಮಾವಳಿಗೆ ತಡೆ ನೀಡಲು ಕೂಡ ಅದು ನಿರಾಕರಿಸಿತ್ತು.

ತಿದ್ದುಪಡಿ ಮಾಡಿದ ಕಾನೂನು ಜಾರಿಗೆ ಬಂದ ನಂತರ ಎಲ್ಲಾ ವಕ್ಫ್ ಆಸ್ತಿಗಳ ಕಡ್ಡಾಯ ನೋಂದಣಿಗೆ ಆರು ತಿಂಗಳ ಗಡುವು ನೀಡಲಾಗಿತ್ತು. ಈ ಆಸ್ತಿಗಳ ನೋಂದಣಿ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರ ಉಮೀದ್‌ ಪೋರ್ಟಲ್ ಆರಂಭಿಸಿತ್ತು. ಆರು ತಿಂಗಳ ಗಡುವು ಈ ವಾರ ಕೊನೆಗೊಳ್ಳಲಿದೆ.

ಅರ್ಜಿದಾರರಲ್ಲಿ ಒಬ್ಬರಾದ ಎಐಎಂಐಎಂ ಪಕ್ಷದ ಮುಖ್ಯಸ್ಥ ಮತ್ತು ಲೋಕಸಭಾ ಸದಸ್ಯ ಅಸಾದುದ್ದೀನ್ ಓವೈಸಿ, ವಕ್ಫ್ ನೊಂದಣಿಗೆ ಗಡುವು ವಿಸ್ತರಿಸಿ ಕೊಡಬೇಕೆಂದು ಕೋರ್ಟ್‌ಗೆ ಮನವಿ ಮಾಡಿದ್ದರು. ಇತರ ಅರ್ಜಿದಾರರೂ ಇದೇ ರೀತಿಯ ವಿನಾಯಿತಿ ಬಯಸಿದ್ದರು.

ಅರ್ಜಿದಾರರ ಪರವಾಗಿ ಹಿರಿಯ ವಕೀಲರಾದ ಅಭಿಷೇಕ್‌ ಮನು ಸಿಂಘ್ವಿ, ಕಪಿಲ್‌ ಸಿಬಲ್‌, ಎಂ ಆರ್‌ ಶಂಶಾದ್‌, ವಕೀಲ ನಿಜಾಂ ಪಾಷ ವಾದ ಮಂಡಿಸಿದರು. ಕೇಂದ್ರ ಸರ್ಕಾರವನ್ನು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಪ್ರತಿನಿಧಿಸಿದ್ದರು.