Ranya Rao & Supreme Court 
ಸುದ್ದಿಗಳು

ಚಿನ್ನ ಕಳ್ಳ ಸಾಗಣೆ ಪ್ರಕರಣ: ಕಾಫಿಪೋಸಾ ಅಡಿ ನಟಿ ರನ್ಯಾ ರಾವ್‌, ಸಾಹಿಲ್‌ ಬಂಧನ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

ಕಾಫಿಪೋಸಾ ಅಡಿ 2025ರ ಏಪ್ರಿಲ್‌ 22ರಂದು ಕೇಂದ್ರ ಸರ್ಕಾರವು ರನ್ಯಾ, ತರುಣ್‌ ರಾಜು ಮತ್ತು ಸಾಹಿಲ್‌ ಜೈನ್‌ ವಿರುದ್ಧ ಬಂಧನ ಆದೇಶ ಮಾಡಿತ್ತು.

Bar & Bench

ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಆರೋಪಿಗಳಾಗಿ ಬಂಧಿತರಾಗಿರುವ ನಟಿ ಹರ್ಷವರ್ಧಿನಿ ಅಲಿಯಾಸ್‌ ರನ್ಯಾ ರಾವ್‌ ಮತ್ತು ಸಾಹಿಲ್‌ ಜೈನ್‌ ಅವರನ್ನು ವಿದೇಶಿ ವಿನಿಮಯ ನಿಯಂತ್ರಣ ಮತ್ತು ಕಳ್ಳ ಸಾಗಣೆ ಚಟುವಟಿಕೆಗಳ ತಡೆ ಕಾಯಿದೆಯ (ಕಾಫಿಪೋಸಾ) ಅಡಿ ಬಂಧಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಸುಪ್ರೀಂ ಕೋರ್ಟ್‌ ಈಚೆಗೆ ಎತ್ತಿ ಹಿಡಿದಿದೆ.

ಕಾಫಿಪೋಸಾ ಕಾಯಿದೆ ಅಡಿ ರನ್ಯಾ ಬಂಧನ ಕಾನೂನುಬಾಹಿರ ಎಂದು ಘೋಷಿಸುವಂತೆ ಕೋರಿ ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್‌ ಕಳೆದ ವರ್ಷ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ವಿಶೇಷ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಎಂ ಎಂ ಸುಂದರೇಶ್‌ ಮತ್ತು ಎನ್ ಕೋಟೇಶ್ವರ್‌ ಸಿಂಗ್‌ ಅವರ ವಿಭಾಗೀಯ ಪೀಠ ವಜಾಗೊಳಿಸಿದೆ. ಕಾಫಿಪೋಸಾ ಅಡಿ 2025ರ ಏಪ್ರಿಲ್‌ 22ರಂದು ಕೇಂದ್ರ ಸರ್ಕಾರವು ರನ್ಯಾ, ತರುಣ್‌ ರಾಜು ಮತ್ತು ಸಾಹಿಲ್‌ ಜೈನ್‌ ವಿರುದ್ಧ ಬಂಧನ ಆದೇಶ ಮಾಡಿತ್ತು.

“ಅರ್ಜಿದಾರರ ವಿರುದ್ಧ ಬಂಧನ ಆದೇಶ ಮಾಡುವಾಗ ಸಂವಿಧಾನ ಮತ್ತು ಕಾಫಿಪೋಸಾ ಕಾಯಿದೆಯ ಕಾರ್ಯವಿಧಾನ ರಕ್ಷಣೆಗಳನ್ನು ಪಾಲಿಸಲಾಗಿದೆ. ಕೇಂದ್ರವನ್ನು ಪ್ರತಿನಿಧಿಸಲು ವಕೀಲರು ಇಲ್ಲದಿದ್ದ ಪಕ್ಷದಲ್ಲಿ ಸಲಹಾ ಮಂಡಳಿಯ ಮುಂದೆ ಅರ್ಜಿದಾರರು ಪ್ರತಿನಿಧಿಸಲು ಕಾನೂನು ಪ್ರತಿನಿಧಿಯ ಹೊಂದುವ ಹಕ್ಕು ಇರುವುದಿಲ್ಲ” ಎಂದು ಪೀಠ ಅಭಿಪ್ರಾಯಪಟ್ಟಿದೆ.

“ಜೈಲಿನಲ್ಲಿ ಅರ್ಜಿದಾರರಿಗೆ ಪೆನ್‌ಡ್ರೈವ್‌ನಲ್ಲಿರುವ ವಿಚಾರಗಳನ್ನು ತೋರಿಸಲಾಗಿದೆ. ಅಲ್ಲದೇ, ಅವುಗಳನ್ನು ಅರ್ಜಿದಾರರ ಪ್ರತಿನಿಧಿಗಳಿಗೆ ಒದಗಿಸಲು ಎಲ್ಲಾ ಪ್ರಯತ್ನ ಮಾಡಲಾಗಿದೆ. ಈ ಪ್ರಯತ್ನಗಳು ಸ್ಥಾಪಿತ ನಿಯಮಗಳ ಅನುಪಾಲನೆಯಾಗಿದ್ದು, ಪೆನ್‌ಡ್ರೈವ್‌ ನೀಡಿಲ್ಲ ಎಂಬುದು ಬಂಧನಕ್ಕೆ ವಿರುದ್ಧ ಎನ್ನಲಾಗದು” ಎಂದು ನ್ಯಾಯಾಲಯ ಹೇಳಿದೆ.

ಕೇಂದ್ರ ಸರ್ಕಾರದ ಹಣಕಾಸು, ಕಂದಾಯ ಇಲಾಖೆ, ಆರ್ಥಿಕ ಗುಪ್ತಚರ ದಳದ ಜಂಟಿ ಕಾರ್ಯದರ್ಶಿಯು 2025ರ ಏಪ್ರಿಲ್‌ 22ರಂದು ಕಾಫಿಫೋಸಾ ಅಡಿ ರನ್ಯಾ, ತರುಣ್‌ ರಾಜು ಮತ್ತು ಸಾಹೀಲ್‌ ಜೈನ್‌ ಅವರನ್ನು ಡಿಆರ್‌ಐ ವಶಕ್ಕೆ ಪಡೆದಿದ್ದರು. ಇದನ್ನು ಅಕ್ರಮ ಎಂದು ಘೋಷಿಸಬೇಕು ಎಂದು ರನ್ಯಾ ಹಾಗೂ ತರುಣ್‌ ಅವರು ಮನವಿ ಸಲ್ಲಿಸಿದ್ದರು. ಈ ಮನವಿಗಳನ್ನು 19.6.2025ರಂದು ನಡೆದ ಸಲಹಾ ಮಂಡಳಿ ಸಭೆಯಲ್ಲಿ ಮಂಡಿಸಲಾಗಿತ್ತು. ಸಭೆಯಲ್ಲಿ ಚರ್ಚಿಸಿ, ಸಲಹಾ ಮಂಡಳಿಯು 2.7.2025ರಂದು ವರದಿ ನೀಡಿತ್ತು. 16.7.2025ರಂದು ಖಾತರಿಪಡಿಸಿ ಜಂಟಿ ಕಾರ್ಯದರ್ಶಿ ಆದೇಶ ಹೊರಡಿಸಿದ್ದರು.

ಪ್ರಕರಣದ ಹಿನ್ನೆಲೆ: ಮಾರ್ಚ್‌ 3ರಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ಯಾರನ್ನು ಬಂಧಿಸಿದ್ದ ಡಿಆರ್‌ಐ ಅಧಿಕಾರಿಗಳು ಆಕೆಯಿಂದ ₹12.86 ಕೋಟಿ ಮೌಲ್ಯದ 14.2 ಕೆ ಜಿ ಚಿನ್ನ ಜಫ್ತಿ ಮಾಡಿದ್ದರು. ಕಸ್ಟಮ್‌ ಅಧಿಕಾರಿಗಳ ತಪಾಸಣೆ ತಪ್ಪಿಸಿಕೊಳ್ಳಲು ಚಿನ್ನವನ್ನು ಬೆಲ್ಟ್‌ ಮತ್ತು ಜಾಕೆಟ್‌ಗಳಲ್ಲಿ ಇಟ್ಟುಕೊಂಡು ಬರುತ್ತಿದ್ದರು ಎನ್ನಲಾಗಿದೆ. ರಾಜ್ಯದ ಡಿಜಿಪಿ ಶ್ರೇಣಿ ಅಧಿಕಾರಿಯೊಬ್ಬರ ಸಾಕು ಮಗಳಾದ ರನ್ಯಾ ಅವರು ಅತಿ ಗಣ್ಯ ವ್ಯಕ್ತಿಗಳಿಗೆ ಇರುವ ಮಾರ್ಗದ ಮೂಲಕ ವಿಮಾನ ನಿಲ್ದಾಣದಿಂದ ಸರಾಗವಾಗಿ ಹೊರಬರುತ್ತಿದ್ದರು ಎನ್ನಲಾಗಿತ್ತು.

ಚಿತ ಮಾಹಿತಿಯ ಮೇಲೆ 04.03.2025ರಂದು ರನ್ಯಾರನ್ನು, 10.03.2025ರಂದು ತರುಣ್‌ ರಾಜುವನ್ನು ಮತ್ತು 07.04.2025ರಂದು ಸಾಹಿಲ್‌ ಸರ್ಕಾರಿಯಾ ಜೈನ್‌ರನ್ನು ಡಿಆರ್‌ಐ ಬಂಧಿಸಿತ್ತು.

Priyanka Sarkariya Vs UoI.pdf
Preview