ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ (ಕೆಎಸ್‌ಆರ್‌ಟಿಸಿ) ಸಂಚಾರಿ ನಿರೀಕ್ಷಕ ಹುದ್ದೆ ಕೊಡಿಸುವುದಾಗಿ ನಂಬಿಸಿ ಅರಗಿಶೆಟ್ಟಿ ಎಂಬುವರಿಂದ 11 ಲಕ್ಷ ರೂಪಾಯಿ ಲಂಚ ಪಡೆದು ವಂಚಿಸಿದ ಪ್ರಕರಣದಲ್ಲಿ ಪ್ರಮುಖ ಆರೋಪಿ ಕೆಎಸ್‌ಆರ್‌ಟಿಸಿ ಬಸ್ ಚಾಲಕನಾದ ಮಂಜುನಾಥ್ ಬಿಲ್ಲಾ ನಾಯಕ್‌ಗೆ ಕರ್ನಾಟಕ ಹೈಕೋರ್ಟ್ ಈಚೆಗೆ ಜಾಮೀನು ನಿರಾಕರಿಸಿದೆ.
ಪ್ರಕರಣ ಸಂಬಂಧ ಜಾಮೀನು ಕೋರಿ ಬಳ್ಳಾರಿಯ ಹಗರಿಬೊಮ್ಮನಹಳ್ಳಿ ಕೂಗಲಿ ತಾಂಡ ನಿವಾಸಿ ಮಂಜುನಾಥ್ ಬಿಲ್ಲಾ ನಾಯಕ್ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿ ನ್ಯಾಯಮೂರ್ತಿ ಎಚ್ ಪಿ ಸಂದೇಶ್ ಅವರಿದ್ದ ಏಕಸದಸ್ಯ ಪೀಠವು ಆದೇಶಿಸಿದೆ.
“ಅರ್ಜಿದಾರ ವಿರುದ್ಧದ ಆರೋಪಗಳು ಗಂಭೀರ ಸ್ವರೂಪದಿಂದ ಕೂಡಿವೆ. ದೂರುದಾರ ಅರಗಿಶೆಟ್ಟಿಗೆ ಮಾತ್ರವಲ್ಲದೇ ಅನೇಕರಿಗೆ ಉದ್ಯೋಗ ಕೊಡಿಸುವುದಾಗಿ ಆಮಿಷವೊಡ್ಡಿ ಲಂಚ ಪಡೆದು ವಂಚಿಸಿರುವ ಆರೋಪ ಅರ್ಜಿದಾರನ ಮೇಲಿದೆ. ಈ ಹಂತದಲ್ಲಿ ಜಾಮೀನು ನೀಡಿದರೆ ಆರೋಪಿಯು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಹಾಗೂ ಸಾಕ್ಷ್ಯ ಆಧಾರಗಳನ್ನು ನಾಶಪಡಿಸುವ ಸಾಧ್ಯತೆಯಿದೆ” ಎಂದು ಅಭಿಪ್ರಾಯಪಟ್ಟ ಹೈಕೋರ್ಟ್ ಅರ್ಜಿ ವಜಾಗೊಳಿಸಿ ಜಾಮೀನು ನಿರಾಕರಿಸಿದೆ.
ಬಾಗಲಕೋಟೆ ನಿವಾಸಿ ಅರಗಿಶೆಟ್ಟಿ ಬಿ.ಕಾಂ ಓದಿದ್ದು, ವ್ಯಾಪಾರ ಮಾಡುತ್ತಿದ್ದಾರೆ. ಜಲಮಂಡಳಿಯಲ್ಲಿ ಉದ್ಯೋಗ ಮಾಡುತ್ತಿರುವ ಸಹೋದರನ್ನು ನೋಡಲು ಬಾಲಕೋಟೆಯಿಂದ ಬೆಂಗಳೂರಿಗೆ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಓಡಾಡುತ್ತಿದ್ದರು. ಕೆಎಸ್‌ಆರ್‌ಟಿಸಿ ಬಸ್ ಚಾಲಕನಾದ ಆರೋಪಿ ಮಂಜುನಾಥ ಬಿಲ್ಲಾ ನಾಯಕ್, ಅರಗಿಶೆಟ್ಟಿಯನ್ನು ಪರಿಚಯಿಸಿಕೊಂಡು ಶೈಕ್ಷಣಿಕ ಅರ್ಹತೆ ವಿಚಾರಿಸಿದ್ದರು.
ನಂತರ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ತನಗೆ ತುಂಬಾ ಪರಿಚಯವಿದ್ದು, ಲಂಚ ನೀಡಿದರೆ ಸಂಚಾರಿ ನಿರೀಕ್ಷಕ ಹುದ್ದೆ ಕೊಡಿಸುವುದಾಗಿ ಆಮಿಷವೊಡ್ಡಿದ್ದರು. ಇದರಿಂದ 2018ರ ನವೆಂಬರ್‌ನಲ್ಲಿ ಬೆಂಗಳೂರಿನ ಮಧು ಹೋಟೆಲ್‌ನಲ್ಲಿ ಅರಗಿಶೆಟ್ಟಿ ಹಾಗೂ ಮಂಜುನಾಥ್ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಆಗ ಉದ್ಯೋಗ ಕೊಡಿಸಲು 12 ಲಕ್ಷ ರೂಪಾಯಿ ಲಂಚಕ್ಕೆ ಆರೋಪಿ ಬೇಡಿಕೆಯಿಟ್ಟದ್ದರು.
ಅರಗಿಶೆಟ್ಟಿಯು ವಿವಿಧ ದಿನಾಂಕದಲ್ಲಿ ಆರ್‌ಟಿಜಿಎಸ್ ಮೂಲಕ 11 ಲಕ್ಷ ರೂಪಾಯಿ ಹಣವನ್ನು ಆರೋಪಿಗೆ ಕಳುಹಿಸಿದ್ದರು. ಆದರೆ, ಉದ್ಯೋಗ ಕೊಡಿಸದೇ ಹಣವೂ ಹಿಂದಿರುಗಿಸದೆ ಆರೋಪಿ ವಂಚನೆ ಮಾಡಿದ್ದರು. ಇದರಿಂದ ಅರಗಿಶೆಟ್ಟಿ ಮಾಗಡಿ ಠಾಣಾ ಪೊಲೀಸರಿಗೆ 2021ರ ಅಕ್ಟೋಬರ್‌ನಲ್ಲಿ ದೂರು ಸಲ್ಲಿಸಿದ್ದರು. ಮಂಜುನಾಥ್ ಅವರನ್ನು ಅಕ್ಟೋಬರ್ 5ರಂದು ಪೊಲೀಸರು ಬಂಧಿಸಿದ್ದರು. ನಗರದ 67ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಜಾಮೀನು ನಿರಾಕರಿಸಿ 2021ರ ನವೆಂಬರ್ 23ರಂದು ಆದೇಶಿಸಿತ್ತು. ಹಾಗಾಗಿ, ಜಾಮೀನು ಕೋರಿ ಆರೋಪಿ ಹೈಕೋರ್ಟ್ ಮೊರೆ ಹೋಗಿದ್ದರು.