ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಹಾಗೂ ನಗ್ನ ಫೋಟೊ ತೆಗೆದ ಆರೋಪ ಎದುರಿಸುತ್ತಿದ್ದ ಕುಕ್ಕೆ ಸುಬ್ರಹಣ್ಯದ ಉಪನ್ಯಾಸಕ ಎಲ್ ಗುರುರಾಜ್ ಅವರಿಗೆ ವಿಚಾರಣಾಧೀನ ನ್ಯಾಯಾಲಯ ನೀಡಿದ್ದ ಜಾಮೀನನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ರದ್ದುಪಡಿಸಿದೆ.
ಬಂಧಿಸಲ್ಪಟ್ಟ ಎರಡನೇ ದಿನಕ್ಕೆ ಆರೋಪಿ ಗುರುರಾಜ್‌ಗೆ ಜಾಮೀನು ನೀಡಿ ದಕ್ಷಿಣ ಕನ್ನಡದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹೊರಡಿಸಿದ್ದ ಆದೇಶ ರದ್ದುಪಡಿಸುವಂತೆ ಕೋರಿ ಸಂತ್ರಸ್ತೆ ತಾಯಿ (ದೂರುದಾರೆ) ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಎಚ್ ಪಿ ಸಂದೇಶ್ ನೇತೃತ್ವದ ಏಕಸದಸ್ಯ ಪೀಠವು ಈ ಆದೇಶ ಮಾಡಿದೆ.
“ವಿಚಾರಣಾಧೀನ ನ್ಯಾಯಾಲಯವು ಸಂತ್ರಸ್ತೆ ಅಥವಾ ದೂರುದಾರರಿಗೆ ಅವಕಾಶ ಕಲ್ಪಿಸಿ, ಅವರ ವಾದ ಆಲಿಸದೇ ಅವರಸದಲ್ಲಿ ಆರೋಪಿಗೆ ಜಾಮೀನು ಮಂಜೂರು ಮಾಡಿದೆ. ಇದು ಕಾನೂನುಬಾಹಿರ. ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕು” ಎಂದು ತನಿಖಾಧಿಕಾರಿಗಳು ಮತ್ತು ವಿಚಾರಣಾ ನ್ಯಾಯಾಲಯಕ್ಕೆ ಪೀಠವು ನಿರ್ದೇಶಿಸಿದೆ.
ಆರೋಪಿ ಎಲ್ ಗುರುರಾಜ್ ಕುಕ್ಕೆ ಸುಬ್ರಹಣ್ಯದ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿದ್ದಾರೆ. 2018ರಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿದ ನಗ್ನ ಫೋಟೊ ತೆಗೆದ ಹಾಗೂ ಜೀವ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿದ್ದಾರೆ. ಈ ಕುರಿತು ಸಂತ್ರಸ್ತೆ ತಾಯಿ 2021ರ ಆಗಸ್ಟ್‌ನಲ್ಲಿ ದೂರು ದಾಖಲಿಸಿದ್ದರು. ಆಗಸ್ಟ್ 8ರಂದು ಆರೋಪಿಯನ್ನು ಸುಬ್ರಹಣ್ಯ ಠಾಣಾ ಪೊಲೀಸರು ಬಂಧಿಸಿದ್ದರು. ಅದಾದ ಎರಡನೇ ದಿನಕ್ಕೆ ಆರೋಪಿಗೆ ಜಾಮೀನು ನೀಡಿ 2021ರ ಆಗಸ್ಟ್ 10ರಂದು ವಿಚಾರಣಾ ನ್ಯಾಯಾಲಯ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಜಾಮೀನು ರದ್ದುಪಡಿಸಲು ಕೋರಿ ಸಂತ್ರಸ್ತೆ ತಾಯಿ ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು.