ಜನಕಲ್ಯಾಣ ಯೋಜನೆ ಅಥವಾ ಕಾನೂನುಗಳನ್ನು ರೂಪಿಸುವಾಗ ಸರ್ಕಾರಗಳು ರಾಜ್ಯದ ಬೊಕ್ಕಸದ ಮೇಲೆ ಬೀರಬಹುದಾದ ಆರ್ಥಿಕ ಪರಿಣಾಮವನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಬುಧವಾರ ಕಿವಿಮಾತು ಹೇಳಿದೆ.
ಈ ವಿಚಾರದಲ್ಲಿ ದೂರದೃಷ್ಟಿ ಇಲ್ಲದೇ ಇರುವುದಕ್ಕೆ ಉತ್ತಮ ಉದಾಹರಣೆ ಶಿಕ್ಷಣ ಹಕ್ಕು ಕಾಯಿದೆ ಎಂದು ನ್ಯಾಯಮೂರ್ತಿಗಳಾದ ಯು ಯು ಲಲಿತ್, ಎಸ್ ರವೀಂದ್ರ ಭಟ್ ಮತ್ತು ಪಿ ಎಸ್ ನರಸಿಂಹ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಅಭಿಪ್ರಾಯಪಟ್ಟಿತು. "ಶಿಕ್ಷಣದ ಹಕ್ಕು ಒಳ್ಳೆಯ ಉದಾಹರಣೆ. ಕಾಯಿದೆ ರೂಪಿಸಲಾಗಿದೆ. ಆದರೆ ಶಾಲೆಗಳು ಎಲ್ಲಿವೆ? ರಾಜ್ಯ ಸರ್ಕಾರಗಳಿಗೆ ಶಿಕ್ಷಕರು ಎಲ್ಲಿಂದ ದೊರೆಯಬೇಕು?" ಎಂದು ನ್ಯಾಯಾಲಯ ತಿಳಿಸಿತು.
"ಇದನ್ನು ಇಡಿಯಾಗಿ ಪರಿಗಣಿಸಬೇಕು. ದಯವಿಟ್ಟು ಈ ನಿಟ್ಟಿನಲ್ಲಿ ಕೆಲಸ ಮಾಡಿ, ಇಲ್ಲದಿದ್ದರೆ ಇದು ಕೇವಲ ಬಾಯಿಮಾತಿನ ಕೆಲಸವಾಗುತ್ತದೆ" ಎಂದು ನ್ಯಾ. ಲಲಿತ್ ಹೇಳಿದರು.
ದೌರ್ಜನ್ಯಕ್ಕೊಳಗಾದ ವಿವಾಹಿತ ಮಹಿಳೆಯರಿಗೆ ಪರಿಣಾಮಕಾರಿ ಕಾನೂನು ನೆರವು ನೀಡಲು ದೇಶಾದ್ಯಂತ ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣಾ ಕಾಯಿದೆ ರೂಪಿಸಲಾಗಿದ್ದು ಇದರಡಿ ಒದಗಿಸಲಾದ ಮೂಲಸೌಕರ್ಯದ ಕೊರತೆ ನೀಗಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯೊಂದರ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಕಾಯಿದೆಯಡಿ ದೂರುಗಳನ್ನು ಸಲ್ಲಿಸಿದ ಮಹಿಳೆಯರು ವಾಸಿಸಲು ರಕ್ಷಣಾ ಗೃಹಗಳನ್ನು ನಿರ್ಮಾಣ ಮಾಡುವಂತೆ ಅರ್ಜಿಯಲ್ಲಿ ಕೋರಲಾಗಿತ್ತು.