ಸಂವಿಧಾನದ 200 ನೇ ವಿಧಿಯ ಅಡಿಯಲ್ಲಿ ರಾಜ್ಯ ಶಾಸಕಾಂಗ ಮಂಡಿಸಿದ ಮಸೂದೆಗಳಿಗೆ ಸಂಬಂಧಿಸಿದಂತೆ ರಾಜ್ಯಪಾಲರ ಅಧಿಕಾರ ಮತ್ತು ಜವಾಬ್ದಾರಿಗಳನ್ನು ವಿವರಿಸುವ ಮಹತ್ವದ ತೀರ್ಪನ್ನು ಏಪ್ರಿಲ್ 8ರಂದು ನೀಡಿರುವ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಆರ್ ಮಹಾದೇವನ್ ಅವರಿದ್ದ ಪೀಠ ಆ ಮೂಲಕ ಸಂವಿಧಾನದ 201 ನೇ ವಿಧಿಯ ಅಡಿಯಲ್ಲಿ ಭಾರತದ ರಾಷ್ಟ್ರಪತಿಗಳ ಅಧಿಕಾರಗಳಿಗೆ ಇರುವ ಮಿತಿಯನ್ನೂ ವ್ಯಾಖ್ಯಾನಿಸಿದೆ [ತಮಿಳುನಾಡು ಸರ್ಕಾರಮತ್ತು ತಮಿಳುನಾಡು ರಾಜ್ಯಪಾಲರು ಇನ್ನಿತರರ ನಡುವಣ ಪ್ರಕರಣ].
ರಾಜ್ಯ ಶಾಸಕಾಂಗ ಅಂಗೀಕರಿಸಿದ ಮಸೂದೆಯನ್ನು ರಾಜ್ಯಪಾಲರು ರಾಷ್ಟ್ರಪತಿಗಳ ಪರಿಗಣನೆಗೆ ಕಾಯ್ದಿರಿಸುವ ವಿಧಾನವನ್ನು 201ನೇ ವಿಧಿ ವಿವರಿಸುತ್ತದೆ. ಈ ವಿಧಿಯ ಪ್ರಕಾರ, ರಾಜ್ಯಪಾಲರು ಮಸೂದೆಯನ್ನು ರಾಷ್ಟ್ರಪತಿಗಳ ಪರಿಗಣನೆಗೆ ಕಳುಹಿಸಿದಾಗ, ರಾಷ್ಟ್ರಪತಿಗಳು ಮಸೂದೆಗೆ ಒಪ್ಪಿಗೆ ನೀಡುವುದಾಗಿ ಅಥವಾ ಒಪ್ಪಿಗೆಯನ್ನು ತಡೆಹಿಡಿಯುವುದಾಗಿ ಘೋಷಿಸಬೇಕು.
ಈ ಕುರಿತು ಸುಪ್ರೀಂ ಕೋರ್ಟ್‌ನ ಪ್ರಮುಖ ಅವಲೋಕನಗಳು ಏಪ್ರಿಲ್ 11ರ ರಾತ್ರಿ ನ್ಯಾಯಾಲಯದ ಜಾಲತಾಣದಲ್ಲಿ ಪ್ರಕಟಿಸಿದ ವಿವರವಾದ ತೀರ್ಪಿನಲ್ಲಿ ಲಭ್ಯ ಇವೆ.
ಸಂವಿಧಾನದ 201ನೇ ವಿಧಿಯ ಅಡಿಯಲ್ಲಿ ರಾಷ್ಟ್ರಪತಿಗಳ ಕಾರ್ಯನಿರ್ವಹಣೆಯು ನ್ಯಾಯಾಂಗ ಪರಿಶೀಲನೆಗೆ ಒಳಪಟ್ಟಿರುತ್ತದೆ.
ರಾಷ್ಟ್ರಪತಿಗಳಿಗೆ ಮಸೂದೆಗಳನ್ನು ತಡೆ ಹಿಡಿಯುವ ಪೂರ್ಣವಾದ ಅಥವಾ ಮಿತವಾದ ವೀಟೋ ಅಧಿಕಾರ ಇಲ್ಲ.
ರಾಷ್ಟ್ರಪತಿಯವರು ಮಸೂದೆಯನ್ನು ಸ್ವೀಕರಿಸಿದ 3 ತಿಂಗಳೊಳಗೆ ನಿರ್ಧಾರ ತೆಗೆದುಕೊಳ್ಳಬೇಕು. ಈ ಅವಧಿಯನ್ನು ಮೀರಿ ಯಾವುದೇ ವಿಳಂಬವಾದರೆ, ಸೂಕ್ತ ಕಾರಣಗಳನ್ನು ದಾಖಲಿಸಿ ಸಂಬಂಧಪಟ್ಟ ರಾಜ್ಯಕ್ಕೆ ತಿಳಿಸಬೇಕು
ಇದಲ್ಲದೆ, ರಾಷ್ಟ್ರಪತಿಗಳು 201ನೇ ವಿಧಿಯಡಿ ಅಧಿಕಾರ ಚಲಾಯಿಸುವಾಗ, ಅದನ್ನು ತುಂಡು ತುಂಡಾಗಿ ಚಲಾಯಿಸಬಾರದು. ಇದು ಮತ್ತೆ ಮತ್ತೆ ಮಸೂದೆಯನ್ನು ಮರಳಿಸುವುದಕ್ಕೆ ಕಾರಣವಾಗುತ್ತದೆ.
ಸಂವಿಧಾನದ 201ನೇ ವಿಧಿಯ ಪ್ರಕಾರ, ಮಸೂದೆಯು ಹಣಕಾಸು ಮಸೂದೆಯಾಗಿಲ್ಲದಿದ್ದರೆ, ರಾಷ್ಟ್ರಪತಿಗಳು ರಾಜ್ಯಪಾಲರಿಗೆ ಮಸೂದೆಯನ್ನು ಮರುಪರಿಶೀಲಿಸಲು ಅಥವಾ ಅದಕ್ಕೆ ತಿದ್ದುಪಡಿಗಳನ್ನು ಪರಿಗಣಿಸಲು ಮಸೂದೆಯನ್ನು ರಾಜ್ಯ ಶಾಸಕಾಂಗಕ್ಕೆ ಹಿಂತಿರುಗಿಸುವಂತೆ ನಿರ್ದೇಶಿಸಬಹುದು ಮತ್ತು ನಂತರ ಶಾಸಕಾಂಗವು ಆರು ತಿಂಗಳ ಅವಧಿಯಲ್ಲಿ ಅದನ್ನು ಮರುಪರಿಶೀಲಿಸಬೇಕು ಮತ್ತು ಅದನ್ನು ಮತ್ತೆ ರಾಷ್ಟ್ರಪತಿಗಳಿಗೆ ಸಲ್ಲಿಸಬೇಕು.
ರಾಷ್ಟ್ರಪತಿಗಳು ಮಸೂದೆಯನ್ನು ರಾಜ್ಯ ಶಾಸಕಾಂಗಕ್ಕೆ ಸಂದೇಶದೊಂದಿಗೆ ಕಳುಹಿಸಿದ ನಂತರ ಮತ್ತು ಅವರು ಅದನ್ನು ತಿದ್ದುಪಡಿಗಳೊಂದಿಗೆ ಅಥವಾ ಇಲ್ಲದೆಯೇ ಮರು ಅಂಗೀಕರಿಸಿದ ನಂತರ, ಸಂಬಂಧಪಟ್ಟ ಮಸೂದೆಗೆ ಒಪ್ಪಿಗೆ ನೀಡುವ ಅಥವಾ ತಡೆಹಿಡಿಯುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ರಾಷ್ಟ್ರಪತಿಗಳು ಹೊಂದಿರುತ್ತಾರೆ. ಆದರೆ ಎರಡನೇ ಬಾರಿ ನಿರ್ಧಾರ ಕೈಗೊಳ್ಳುವಾಗ ರಾಷ್ಟ್ರಪತಿಗಳಿಗೆ ಸಂಪೂರ್ಣ ವೀಟೋ ಇಲ್ಲ. ಒಂದೊಮ್ಮೆ ಎರಡನೇ ಬಾರಿಯೂ ಮಸೂದೆಯನ್ನು ರಾಷ್ಟ್ರಪತಿಗಳು ತಡೆ ಹಿಡಿದರೆ ಅದಕ್ಕೆ ಸ್ಪಷ್ಟವೂ, ಸಮಂಜಸವೂ, ವಿಸ್ತೃತವೂ ಆದ ಕಾರಣವನ್ನು ನೀಡಬೇಕಾಗುತ್ತದೆ.
ಮಸೂದೆಯ ಸಾಂವಿಧಾನಿಕತೆಯನ್ನು ನ್ಯಾಯಾಂಗ ಪರಿಶೀಲಿಸುತ್ತದೆಯೇ ವಿನಾ ಕಾರ್ಯಾಂಗ ಅಥವಾ ರಾಷ್ಟ್ರಪತಿಗಳಲ್ಲ.
[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]